ವಿಜಿ ಜೊತೆ ದರ್ಶನ್ ಚೆನ್ನಾಗಿದ್ರು, ಅದ್ಯಾರೋ ಹುಡ್ಗಿಗಾಗಿ ಇದೆಲ್ಲಾ ಬೇಕಿತ್ತಾ?; 'ಕರಿಯ' ನಾಯಕಿ ಅಭಿನಯಶ್ರೀ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 100 ದಿನ ಕಳೆದಿದೆ. ಅಂತೂ ಇಂತೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಕೂಡ ಕೋರ್ಟ್ ಕೈಗೆತ್ತಿಕೊಳ್ಳುತ್ತಿದೆ. ಇವತ್ತಿಗೂ ದರ್ಶನ್ ಮಾಡಿದ್ದು ಸರೀನಾ? ತಪ್ಪಾ? ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಅಭಿಮಾನಿಗಳು ಈ ಕ್ಷಣಕ್ಕೂ ನಮ್ಮ ಬಾಸ್ ಮಾಡಿದ್ದು ಸರಿ ಎಂದೇ ವಾದಿಸುತ್ತಿದ್ದಾರೆ.
ಪ್ರೇಯಸಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಂದ ಪ್ರಕರಣದಲ್ಲಿ ದರ್ಶನ್ ಆರೋಪಿ ಆಗಿದ್ದಾರೆ. ಅವರ ಜೊತೆಗೆ ಪವಿತ್ರಾ ಗೌಡ ಸೇರಿ ಇನ್ನು 15 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗಾಗಲೇ ತನಿಖಾಧಿಕಾರಿಗಳು ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಮೊದಲಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಆರೋಪಿಗಳು ಬಳಿಕ ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರಗೊಂಡಿದ್ದರು.

ನಟ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದ. ಆತನಿಗೆ ಬುದ್ಧಿ ಕಲಿಸಬೇಕು ಎಂದು ಅಪಹರಿಸಿ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದು ಈವೇಳೆ ಆತನ ಪ್ರಾಣವೇ ಹೋಗಿದೆ. ದರ್ಶನ್ ಆಣತಿಯಂತೆ ಆತನ ಅಪಹರಣ, ಹಲ್ಲೆ ನಡೆಯಿತು ಎನ್ನಲಾಗ್ತಿದೆ. ನಟ ದರ್ಶನ್ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ತಾರೆಯರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಪ್ರಕರಣದ ನ್ಯಾಯಾಲಯದಲ್ಲಿದೆ. ತೀರ್ಪು ಏನು ಬರುತ್ತದೆ ನೋಡೋಣ ಎನ್ನುತ್ತಿದ್ದಾರೆ. ಮತ್ತೆ ಕೆಲವರು ದರ್ಶನ್ ದುಡುಕಿನ ನಿರ್ಧಾರ ಕೈಗೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ತಪ್ಪು ಸಾಬೀತಾದರೆ ಶಿಕ್ಷೆ ಆಗಲಿ ಎಂದಿದ್ದಾರೆ. ಸಾಕಷ್ಟು ಜನ ದರ್ಶನ್ ರೀತಿಯ ಸ್ಟಾರ್ ನಟನಿಗೆ ಇದೆಲ್ಲಾ ಬೇಕಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸದ್ದು ಮಾಡ್ತಿದೆ. ಪರಭಾಷಾ ಕಲಾವಿದರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮಿಳು ನಟಿ ಅಭಿನಯಶ್ರೀ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸೂಪರ್ ಹಿಟ್ 'ಕರಿಯ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಿಂಚಿದ್ದರು. ಪ್ರೇಮ್ ನಿರ್ದೇಶನದ ಈ ಸಿನಿಮಾ ಇತ್ತೀಚೆಗೆ ರೀ-ರಿಲೀಸ್ ಆಗಿ ಸದ್ದು ಮಾಡಿತ್ತು. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಅಭಿನಯಶ್ರೀ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ದರ್ಶನ್‌ಗೆ ಇದೆಲ್ಲಾ ಬೇಕಿರಲಿಲ್ಲ ಎಂದಿದ್ದಾರೆ.

"ದರ್ಶನ್ ಬಂಧನ ವಿಚಾರ ನನಗೂ ಗೊತ್ತಾಯಿತು. ಮಾಧ್ಯಮಗಳಲ್ಲಿ ಈ ಬಗ್ಗೆ ನೋಡಿ ತಿಳಿದುಕೊಂಡೆ. ಇದೆಲ್ಲಾ ಆತನಿಗೆ ಬೇಡವಾಗಿತ್ತು ಎಂದು ನನಗೆ ಅನಿಸುತ್ತದೆ. 'ಕರಿಯ' ಚಿತ್ರ ಮಾಡುವಾಗ ಆತನಿಗೆ ಇನ್ನು ಮದುವೆ ಆಗಿರಲಿಲ್ಲ. ವಿಜಯಲಕ್ಷ್ಮಿ ಆತನ ಮಾವನ ಮಗಳು ಎನಿಸುತ್ತದೆ. ಆಕೆ ಸೋದರಿ ಸಂಬಂಧಿಯೇ. ಆಕೆ ಜೊತೆಗೆ ದರ್ಶನ್ ಚೆನ್ನಾಗಿಯೇ ಇದ್ದರು. ಬಳಿಕ ಎಲ್ಲಿ ಏನು ಆಕರ್ಷಣೆ ಬರುತ್ತೆ ಏನು ಎಂದು ಹೇಳಲು ಸಾಧ್ಯವಿಲ್ಲ" ಎಂದು ಅಭಿನಯಶ್ರೀ ನೆನಪಿಸಿಕೊಂಡಿದ್ದಾರೆ.
"ಕರಿಯ ಸಿನಿಮಾ ಬಳಿಕ ನಾನು ದರ್ಶನ್ ಅವರನ್ನು ನೋಡಿಲಿಲ್ಲ, ಭೇಟಿ ಆಗಲಿಲ್ಲ. ಇತ್ತೀಚೆಗೆ ಅರೆಸ್ಟ್ ಆದರು ಎಂದಾಗಲೇ ಮಾಧ್ಯಮಗಳಲ್ಲಿ ನೋಡಿದ್ದು. ಆಗ ಅನ್ನಿಸಿತು ಇದೆಲ್ಲಾ ವೇಸ್ಟ್, ಒಬ್ಬ ಹುಡುಗಿಗಾಗಿ ಸಮಸ್ಯೆ ಮಾಡಿಕೊಂಡು ಬೇಕಿತ್ತಾ? ರೇಣುಕಾಸ್ವಾಮಿಯಿಂದ ಕೆಟ್ಟ ಮೆಸೇಜ್ ಬಂದಿರಬಹುದು. ಆಗ ಪೊಲೀಸರಿಗೆ ದೂರು ನೀಡಿದ್ದರೆ ಬಗೆಹರಿಯುತ್ತಿತ್ತು. ಅದು ಬಿಟ್ಟು ತನ್ನ ಸಹಚರರನ್ನು ಬಿಟ್ಟು ಅಪಹರಣ ಮಾಡಿಸಿ, ಥಳಿಸಿ ಪಾಪ ರೇಣುಕಾಸ್ವಾಮಿ ಸತ್ತೇಹೋದ. ಅದರಿಂದ ದರ್ಶನ್ ಹೆಸರು ಹಾಳಾಯ್ತು"
"ಪ್ರಪಂಚದಲ್ಲಿ ಮಾಡಲು ಸಾಕಷ್ಟು ಒಳ್ಳೆಯ ಕೆಲಸಗಳಿವೆ. ಅದೆಲ್ಲಾ ಬಿಟ್ಟು ಇದ್ದಕ್ಕಾಗಿ ಸುಮ್ಮನೆ ಸಮಯ ವ್ಯರ್ಥ ಮಾಡಲು ಹೋಗಿದ್ದಾರೆ. ಈಗ ಹತ್ಯೆ ನಡೆದು ಜೈಲಿನಲ್ಲಿ ಇದ್ದಾರೆ. ಸಂಪಾದಿಸಿದ್ದ ಒಳ್ಳೆ ಹೆಸರು ಹೋಯ್ತು. ತೆಲುಗು ಹೀರೊಗಳು ಈ ವಿಚಾರದಲ್ಲಿ ಸೂಪರ್. ಅವರು ಬಹಳ ಗತ್ತಿನಿಂದ ಎಲ್ಲಾ ವಿಚಾರಗಳನ್ನು ಹ್ಯಾಂಡಲ್ ಮಾಡ್ತಾರೆ. ಅನವರಸವಾಗಿ ತಪ್ಪು ಮಾಡಲ್ಲ" ಎಂದು ಅಭಿನಯಶ್ರೀ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











