ಮಹಾಕುಂಭ ಮೇಳದಲ್ಲಿ ಮಿಂದೆದ್ದರೂ ಬಿಡಲಿಲ್ಲ ಕರ್ಮ, ಸುಳ್ಳಾಯ್ತು ಪವಿತ್ರಾ ಗೌಡ ನಂಬಿಕೆ
ಬದುಕಿನಲ್ಲಿ ಯಾವತ್ತು ಅತಿಯಾದ ನಂಬಿಕೆ.. ಪ್ರೀತಿ.. ವಿಶ್ವಾಸ ಒಳ್ಳೆಯದಲ್ಲ. ಯಾಕೆಂದರೆ ಅತಿಯಾದ ನಂಬಿಕೆ ಮತ್ತು ಪ್ರೀತಿ ಕೆಲ ಒಮ್ಮೆ ಅಪಾರ ನೋವು ಕೊಡುತ್ತೆ. ಅತಿ ಎನ್ನುವುದೇ ಅತಿಯಾಗಿ ನೋಯಿಸುತ್ತೆ. ಇದಕ್ಕೆ ಸದ್ಯದ ಉದಾಹರಣೆ ಪವಿತ್ರಾ ಗೌಡ. ಹೌದು.. ದರ್ಶನ್ ಸಖ್ಯದಿಂದ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದವರು ಪವಿತ್ರಾ ಗೌಡ. ಆದರೆ.. ಈಗ ಇದೇ ಪವಿತ್ರಾ ಗೌಡ ಸಹವಾಸ ಮಾಡಿದ್ದಕ್ಕೆ ದರ್ಶನ್ ವನವಾಸಕ್ಕೆ ತೆರಳುವಂತಾಗಿದೆ.
ಕೇವಲ ದರ್ಶನ್ ಮಾತ್ರ ಅಲ್ಲ ಪವಿತ್ರಾ ಗೌಡ ಕೂಡ ದರ್ಶನ್ ಅವರನ್ನು ಇಲ್ಲಿಯೂ ಹಿಂಬಾಲಿಸುತ್ತಿದ್ದಾರೆ. ಆದರೆ. ಇಂತಹದ್ದೊಂದು ದಿನ ಮತ್ತೆ ಬರುತ್ತೆ ಎಂದು ಪವಿತ್ರಾ ಗೌಡ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

ಬದಲಿಗೆ ಇನ್ನೂ ತಮ್ಮನ್ನು ''ಕತ್ತಲ ಕೋಣೆ''ಯೊಳಗೆ ಯಾರು ತಳ್ಳಲಾರರು ಎಂದೇ ನಂಬಿದ್ದರು. ಈ ನಂಬಿಕೆಯಲ್ಲಿಯೇ ಮುಖದ ತುಂಬಾ ನಗು ತುಂಬಿಕೊಂಡು ಓಡಾಡುತ್ತಿದ್ದರು. ಸಾರ್ವತ್ರಿಕವಾಗಿ ಹಿಂದೆ ಎಂದೂ ತೋರಿಸದ ದೇವರ ಮೇಲಿನ ತಮ್ಮ ಭಕ್ತಿಯನ್ನು ತೋರಿಸಲು ಶುರು ಮಾಡಿದ್ದರು.
ಜೈಲಿಂದ ಹೊರ ಬಂದ ಮೇಲೆ ಶಿರಡಿ ಸಾಯಿ ಬಾಬಾ ದರ್ಶನ್ ಪಡೆದಿದ್ದ ಪವಿತ್ರಾ ಗೌಡ ಆ ನಂತರ ಮಂತ್ರಾಲಯಕ್ಕೆ ತೆರಳಿ ಶ್ರೀ ಗುರುರಾಘವೇಂದ್ರ ಸ್ವಾಮಿ ದರ್ಶನ ಪಡೆದಿದ್ದರು. ತಮ್ಮ ಫೋಟೊಗಳನ್ನು ಕೊಲಾಜ್ ಮಾಡಿ ವಿಡಿಯೋದ ಹಿನ್ನೆಲೆಯಲ್ಲಿ ''ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ.. ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ನೀನೆ ಹೇಳು ರಾಘವೇಂದ್ರ.. ಎಲ್ಲಿದ್ದರೇನು ನಾನು ಹೇಗಿದ್ದರೇನು ನಾ ರಾಘವೇಂದ್ರ'' ಎಂದು ಹಾಡನ್ನು ಹಾಕಿದ್ದರು.
ಇದಕ್ಕೂ ಮುನ್ನ ಪವಿತ್ರಾ ಗೌಡ ಮಹಾ ಕುಂಭಮೇಳಕ್ಕೆ ತೆರಳಿದರು. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಶಾಹಿ ಸ್ನಾನ ಮಾಡಿದ್ದರು. ಈ ಮೂಲಕ ಪಾರ್ಪ ಕರ್ಮಗಳನ್ನೆಲ್ಲಾ ತೊಳೆದುಕೊಂಡು ಮುಕ್ತನಾದೆ ಎಂದುಕೊಂಡಿದ್ದರು.
ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಹಬ್ಬದ ಸಂಭ್ರಮದಲ್ಲಿ ಕೆಟ್ಟ ದೃಷ್ಟಿಯ ಬಗ್ಗೆ ಮಾತನಾಡಿದ್ದರು. ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ ಆದರೆ ನನ್ನ ಮುಟ್ಟೋಕಾಗಲ್ಲ ಎಂದು ಪವಿತ್ರಾ ಗೌಡ ಬರೆದುಕೊಂಡಿದ್ದರು.

ತಾವು ಜೈಲು ಪಾಲಾದಾಗ ನೆನೆಗುದಿಗೆ ಬಿದ್ದ ತಮ್ಮ '' ರೆಡ್ ಕಾರ್ಪೆಟ್'' ಸ್ಟುಡಿಯೋದ ಅಭಿವೃದ್ದಿ ಕಾರ್ಯವನ್ನು ಕೂಡ ಪವಿತ್ರಾ ಗೌಡ ಮಾಡಲು ಶುರು ಮಾಡಿದ್ದರು. ಅತಿಯಾದ ನಂಬಿಕೆಯಿಂದಲೇ ತಮ್ಮ ಡಿಸೈನರ್ ಕಲೆಕ್ಷನ್‌ಗಳಲ್ಲಿ ಸೀರೆಯನ್ನು ಕೂಡ ಸೇರಿಸಿದ್ದರು. ಅತ್ಯಾಕರ್ಷಕ, ವೈವಿಧ್ಯಮಯ, ಡಿಸೈನರ್ ಸೀರೆಗಳನ್ನು ಮಾರಲು ಶುರು ಮಾಡಿದ್ದರು.
ಇಷ್ಟೇ ಅಲ್ಲದೇ ತಮ್ಮ ''ರೆಡ್ ಕಾರ್ಪೆಟ್'' ಸ್ಟುಡಿಯೋವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿರ್ಧಾರ ಮಾಡಿದ್ದ ಪವಿತ್ರಾ ಗೌಡ ತೀರಾ ಇತ್ತೀಚೆಗೆ ತಮ್ಮ ಕನಸಿನ ರೆಡ್ ಕಾರ್ಪೆಟ್‌ಗಾಗಿ ಮಾಡೆಲ್‌ಗಳನ್ನು ಒಂದು ಕಡೆ ಸೇರಿಸಿ ಹೊಸ ಫೋಟೋಶೂಟ್ ಮಾಡಿಸಿದ್ದರು. ತಮ್ಮ ರೂಪದರ್ಶಿಗಳಿಗೆ ಕ್ಯಾಮರಾಗೆ ಹೇಗೆ ಪೋಸ್ ಕೊಡಬೇಕು, ಯಾವ ಭಂಗಿಯಲ್ಲಿ ಕೂರಬೇಕು, ಯಾವ ಕಡೆ ನೋಡಬೇಕು, ಎನ್ನುವುದನ್ನು ಪವಿತ್ರಾ ಗೌಡ ಕಲಿಸಿದ್ದರು. ಮಾಡೆಲಿಂಗ್‌ನ ಪಾಠವನ್ನು ಮಾಡಿದ್ದರು.
ಇನ್ನೂ ಯಾಕೆ ಜಾಮೀನು ರದ್ದು ಮಾಡಬಾರದು, ನಿಮ್ಮ ಲಿಖಿತ ವಾದ ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ ಕೂಡ ಪವಿತ್ರಾ ಗೌಡ ಎದೆಯೆತ್ತರಕ್ಕೆ ಬೆಳೆದ ಮಗಳಿದ್ದಾಳೆ. ವಯಸ್ಸಾದ ಪೋಷಕರಿದ್ದಾರೆ. ಅವರನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನದೇ. ಹೀಗಾಗಿ, ಜಾಮೀನು ರದ್ದುಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು.
ಇವತ್ತು ಕೂಡ ಪವಿತ್ರಾ ಗೌಡ ತುಂಬಾನೇ ವಿಶ್ವಾಸದಲ್ಲಿದ್ದರು. ಸುಪ್ರೀಂ ಅಂಗಳದಲ್ಲಿ ಕೂಡ ತಮಗೆ ಜಯ ಸಿಗುತ್ತೆ ಎಂದುಕೊಂಡಿದ್ದರು. ಇದಕ್ಕೆ ಕೈಗನ್ನಡಿ ಎಂಬಂತೆ ಜಾಮೀನು ರದ್ದಾಗುವ ತೀರ್ಪು ಬರುವ ಕೆಲ ಗಂಟೆಯ ಮೊದಲು ಪವಿತ್ರಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. 'ಸತ್ಯ ಎಲ್ಲಕ್ಕಿಂತ ಶಕ್ತಿಯುತವಾದುದ್ದು. ನ್ಯಾಯ ಸಿಕ್ಕೇ ಸಿಗುತ್ತದೆ'' ಎಂದು ಬರೆದುಕೊಂಡಿದ್ದರು. ರಾಜರಾಜೇಶ್ವರಿ ದೇವಸ್ಥಾನಕ್ಕೆ ಕೂಡ ತೆರಳಿದ್ದರು. ಗೆಲವು ನಿಧಾನ ಆಗಬಹುದು ದೇವರ ರಕ್ಷಣೆ ಇದ್ದೇ ಇರುತ್ತೆ ಎಂದು ಕೂಡ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದರು.

ಆದರೆ ಮಾಡಿದ ಪಾಪ ಸುಮ್ಮನೆ ಬಿಡುತ್ತಾ ? ಪವಿತ್ರಾ ಗೌಡ ನಂಬಿಕೆ ಈಗ ಹುಸಿಯಾಗಿದೆ. ಪವಿತ್ರಾ ಗೌಡ ಮತ್ತೆ ಸೆರೆವಾಸ ಅನುಭವಿಸುವಂತಾಗಿದೆ. ಸದ್ಯ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಫ್ತಿಯಲ್ಲಿಯೇ ಬಂದಿದ್ದ ಪೊಲೀಸರು ''ರೆಡ್ ಕಾರ್ಪೆಟ್'; ಸ್ಟುಡಿಯೋಗೆ ಹೋಗುತ್ತೇನೆ ಎಂದರು ಕೇಳದೇ ಅರೆಸ್ಟ್ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮತ್ತೆ ''ಪರಪ್ಪನ ಅಗ್ರಹಾರ''ದ ಪಾಲಾದ ಪವಿತ್ರಾ ಗೌಡ ಎಷ್ಟು ದಿನಗಳ ಕಾಲ ಜೈಲಿನಲ್ಲಿ ಉಳಿಯುತ್ತಾರೆ..? ಪವಿತ್ರಾ ಗೌಡ ಅವರ ಮುಂದಿನ ನಡೆ ಏನು ? ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಯಾರ ಬಿಟ್ಟರು ಕರ್ಮ ಬಿಡಲ್ಲ ಎನ್ನುವ ಮಾತು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ.


Click it and Unblock the Notifications











