Karnataka Bandh: ಕನ್ನಡದ 3 ಸಿನಿಮಾಗಳಿಗೆ ಬಂದ್ ಬಿಸಿ.. ಬಾನದಾರಿಯಲ್ಲಿ, ತೋತಾಪುರಿ, ಕ್ರಾಂತಿವೀರ ಭವಿಷ್ಯವೇನು?
ನಿನ್ನೆಯಷ್ಟೇ (ಸೆಪ್ಟೆಂಬರ್ 26) ಬೆಂಗಳೂರು ಬಂದ್ ಮಾಡಲಾಗಿತ್ತು. ಸಿನಿಮಾ ಪ್ರದರ್ಶನ ಹಾಗೂ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು. ಸೆಪ್ಟೆಂಬರ್ 29, ಶುಕ್ರವಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೂ ಕನ್ನಡ ಚಿತ್ರರಂಗ ಬೆಂಬಲ ನೀಡಿದೆ.
ಕಾವೇರಿ ಹೋರಾಟ ತಾರಕಕ್ಕೇರಿದ ಸಂದರ್ಭದಲ್ಲಿ ಕನ್ನಡ ಸಿನಿಮಾಗಳು ನಲುಗಿ ಹೋಗುತ್ತವೆ. ತಾರೆಯರು ಅಡಕತ್ತರಿಗೆ ಸಿಲುಕಿ ಒದ್ದಾಡುವಂತಹ ಸ್ಥಿತಿ ನಿರ್ಮಾಣ ಆಗುತ್ತೆ. ಅದರಲ್ಲೂ ಬಂದ್‌ಗೆ ಕರೆ ನೀಡಿದ ಸಂದರ್ಭದಲ್ಲಂತೂ ಸಿನಿಮಾಗಳು ರಿಲೀಸ್ ಆಗೋದಿಲ್ಲ. ರಿಲೀಸ್ ಆದ ಸಿನಿಮಾಗಳು ಪ್ರದರ್ಶನ ಕಾಣುವುದಿಲ್ಲ.

ಈ ವರ್ಷ ಸ್ಯಾಂಡಲ್‌ವುಡ್ ಮೆಗಾ ಸಿನಿಮಾಗಳನ್ನು ಕೊಡುವಲ್ಲಿ ಸೋತಿದೆ. ಒಂದೇ ಒಂದು ಸಿನಿಮಾ ದೇಶಾದ್ಯಂತ ಸದ್ದು ಮಾಡಿದ ಸಿನಿಮಾ ಇಲ್ಲ. ಮೊದಲೇ ನಷ್ಟದಲ್ಲಿರುವ ಚಿತ್ರರಂಗಕ್ಕೆ ಬಂದ್ ಬಿಸಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಈ ವಾರ ಮೂರು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಬಂದ್ ಆ ಸಿನಿಮಾಗಳ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತಾ? ತಿಳಿಯಲು ಮುಂದೆ ಓದಿ.
'ಬಾನದಾರಿಯಲ್ಲಿ' ಗಣೇಶ್
ಬಹಳ ದಿನಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ರಿಲೀಸ್ ಆಗುತ್ತಿದೆ. ಪ್ರೀತಂ ಗುಬ್ಬಿ ನಿರ್ದೇಶನದ 'ಬಾನದಾರಿಯಲ್ಲಿ' ನಾಳೆ (ಸೆಪ್ಟೆಂಬರ್ 28) ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಬಹುದೆಂಬ ನಿರೀಕ್ಷೆಯಿದೆ. ಮೊದಲ ದಿನ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದರೆ, ಎರಡನೇ ದಿನ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವ ಸಾಧ್ಯತೆಯಿತ್ತು. ಆದ್ರೀಗ ಆ ಅವಕಾಶವನ್ನು ಗಣೇಶ್ ಸಿನಿಮಾ ಕಳೆದುಕೊಳ್ಳಲಿದೆ.
ಶುಕ್ರವಾರ, ಸಹಜವಾಗಿ ಸಿನಿಮಾಗಳು ರಿಲೀಸ್ ಆಗುತ್ತವೆ. ಅಂದು ಹೊಸ ಸಿನಿಮಾವನ್ನು ಕಾದು ನೋಡುವ ವರ್ಗವೇ ಇದೆ. ಆದರೆ, ಇದೇ ದಿನ ಕರ್ನಾಟಕ ಬಂದ್ ಇರುವುದರಿಂದ 'ಬಾನದಾರಿಯಲ್ಲಿ' ಕಮ್ಮಿ ಅಂದರೂ 1.5 ರಿಂದ 2 ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕುತ್ತಿದ್ದಾರೆ.
ಜಗ್ಗೇಶ್ 'ತೋತಾಪುರಿ 2'
ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ, ಅದಿತಿ ಪ್ರಭುದೇವ, ಸುಮನ್ ರಂಗನಾಥನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ತೋತಾಪುರಿ 2' ಕೂಡ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗುತ್ತಿದೆ. 'ತೋತಾಪುರಿ'ಯ ಸೀಕ್ವೆಲ್ ಆಗಿರುವುದರಿಂದ ಜಗ್ಗೇಶ್ ಹಾಗೂ ಧನಂಜಯ್ ಅಭಿಮಾನಿಗಳು ಕಾದು ಕೂತಿದ್ದಾರೆ.

ಕಾವೇರಿ ಕಾವಿನಲ್ಲೇ 'ತೋತಾಪುರಿ 2' ರಿಲೀಸ್ ಆಗುತ್ತಿರೋದ್ರಿಂದ ಮೊದಲ ದಿನ ಸಿನಿಮಾ ಸಿಗುವ ರೆಸ್ಪಾನ್ಸ್ ಮುಖ್ಯವಾಗಿರುತ್ತೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ 'ತೋತಾಪುರಿ 2' ಎರಡನೇ ದಿನ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆಯಿತ್ತು. ಒಂದು ಅಂದಾಜಿನ ಪ್ರಕಾರ, 'ತೋತಾಪುರಿ 2'ಗೆ ಶುಕ್ರವಾರ ಕಡಿಮೆ ಅಂದರೂ 1 ಕೋಟಿಯಷ್ಟು ನಷ್ಟ ಆಗಬಹುದು ಎಂದು ಅಂದಾಜಿಸಲಾಗಿದೆ.
ಹೊಸಬರ ಸಿನಿಮಾ 'ಕ್ರಾಂತಿವೀರ'
ಯುವ ಪ್ರತಿಭೆಗಳ ಸಿನಿಮಾ 'ಕ್ರಾಂತಿ ವೀರ' ಕೂಡ ಬಂದ್‌ಗೆ ಒಂದು ದಿನ ಮುನ್ನವೇ ರಿಲೀಸ್ ಆಗುತ್ತಿದೆ. ಅಜಿತ್ ಜಯರಾಜ್ ನಟನೆಯ ಈ ಸಿನಿಮಾ ತೆಲುಗು ಹಾಗೂ ತಮಿಳು ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಹೀಗಾಗಿ ಕರ್ನಾಟಕ ಬಂದ್ ಹೊಸಬರ ಸಿನಿಮಾಗೆ ಏಟು ಕೊಡುವುದಂತೂ ನಿಜ.


Click it and Unblock the Notifications











