Karnataka Box Office: ರಾಜ್ಯದಲ್ಲಿ 2 ಬಾರಿ 50 ಕೋಟಿ ಬಾರಿಸಿರುವ ಪರಭಾಷಾ ನಟರು ಈ ಇಬ್ಬರೇ!
ಸದ್ಯ ಎಲ್ಲಿ ನೋಡಿದರೂ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರದ್ದೇ ಅಬ್ಬರ. ಕಳೆದ ಆಗಸ್ಟ್ 10ರಂದು ಸ್ವಾತಂತ್ರ ದಿನಾಚರಣೆಯ ರಜೆಯನ್ನು ಗುರಿಯನ್ನಾಗಿಸಿಕೊಂಡು ತೆರೆಗೆ ಬಂದ ಜೈಲರ್ ಮೊದಲ ದಿನವೇ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತು. ಹೌದು, ಈ ಹಿಂದಿನ ರಜನಿ ಚಿತ್ರಗಳಿಗೆ ಇದ್ದಷ್ಟೇ ಕ್ರೇಜ್ ಹಾಗೂ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡ ಜೈಲರ್ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟಾಕ್ ಪಡೆದುಕೊಂಡು ಚಿತ್ರ ಗೆದ್ದಿದೆ ಎಂಬ ಸ್ಪಷ್ಟ ಫಲಿತಾಂಶವನ್ನು ಪಡೆದುಕೊಂಡಿತು. ಮೊದಲ ಪ್ರದರ್ಶನದ ಬಳಿಕ ಶುರುವಾದ ಈ ಜೈಲರ್ ಭಜನೆ ಸದ್ಯ ಚಿತ್ರ 13ನೇ ದಿನಕ್ಕೆ ಕಾಲಿಟ್ಟರೂ ಸಹ ಮುಂದುವರಿದಿದೆ.
ಸದ್ಯ 12 ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಮುಗಿಸಿರುವ ಜೈಲರ್ 500 ಕೋಟಿ ಕ್ಲಬ್ ಸೇರಿದ್ದು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಇನ್ನು ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಿರುವ ಜೈಲರ್ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ವಿವಿಧ ಅವತರಣಿಕೆಗಳಲ್ಲಿಯೂ ಸಹ ಜೈಲರ್ ಒಳ್ಳೆಯ ಗಳಿಕೆಯನ್ನೇ ಮಾಡಿದೆ.

ಇನ್ನು ಕರ್ನಾಟಕದಲ್ಲಿ ಜೈಲರ್ ಹವಾ ಜೋರಾಗಿದ್ದು, ರಜನಿಕಾಂತ್ ಅವರ ಮತ್ತೊಂದು ಚಿತ್ರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ಕ್ಲಬ್ ಸೇರಿದೆ. ಹೌದು, ಜೈಲರ್ ಚಿತ್ರ ಕರ್ನಾಟಕದಲ್ಲಿ ಈಗಾಗಲೇ 60 ಕೋಟಿಯನ್ನು ದಾಟಿದ್ದು, ಈ ವರ್ಷ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಈ ಕಲೆಕ್ಷನ್ ದಾಖಲೆ ಮೂಲಕ ರಜನಿಕಾಂತ್ ಅವರು ಎರಡನೇ ಬಾರಿಗೆ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಅರ್ಧಶತಕ ಬಾರಿಸಿದ್ದಾರೆ.
ಹೌದು, ಈ ಹಿಂದೆ ಎಂದಿರನ್ ಮೂಲಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ಗಳಿಕೆ ಮಾಡಿದ್ದ ರಜನಿಕಾಂತ್ ಇದೀಗ ಎರಡನೇ ಬಾರಿ ಈ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಎರಡು ಬಾರಿ 50 ಕೋಟಿ ಕ್ಲಬ್ ಸೇರಿದ ಎರಡನೇ ಪರಭಾಷಾ ನಟ ಎಂಬ ಖ್ಯಾತಿಗೆ ರಜನಿಕಾಂತ್ ಪಾತ್ರರಾಗಿದ್ದಾರೆ. ಈ ಹಿಂದೆ ಬಾಹುಬಲಿ ದ ಬೆಗಿನಿಂಗ್ ಹಾಗೂ ಬಾಹುಬಲಿ ದ ಕನ್ಕ್ಲೂಷನ್ ಚಿತ್ರಗಳ ಮೂಲಕ ತೆಲುಗು ನಟ ರೆಬೆಲ್ ಸ್ಟಾರ್ ಪ್ರಭಾಸ್ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಎರಡು 50 ಕೋಟಿ ಕ್ಲಬ್ ಸಿನಿಮಾ ಮಾಡಿದ ದಾಖಲೆ ಬರೆದಿದ್ದರು.
ಇನ್ನು ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 20 ಕೋಟಿ ಕ್ಲಬ್ ಚಿತ್ರಗಳನ್ನು ಪರಭಾಷೆಯ ಯಾವ ನಟರು ಹೊಂದಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಪ್ರಭಾಸ್ - 4 ಚಿತ್ರಗಳು
2. ರಜನಿಕಾಂತ್ - 4 ಚಿತ್ರಗಳು
3. ಅಮೀರ್ ಖಾನ್ - 2 ಚಿತ್ರಗಳು
4. ಚಿರಂಜೀವಿ - 2 ಚಿತ್ರಗಳು
5. ಅಲ್ಲು ಅರ್ಜುನ್ - 2 ಚಿತ್ರಗಳು


Click it and Unblock the Notifications











