Karnataka Budget 2025: ಮಲ್ಟಿಪ್ಲೆಕ್ಸ್ಗಳ ನಟ್ಟು-ಬೋಲ್ಟು ಟೈಟ್ ಮಾಡಿದ ರಾಜ್ಯ ಸರ್ಕಾರ,ಒಂದೇ ದರ ನಿಗದಿ..!
ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬ ಮಾತು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಈ ಮಾತು ಕೇಳಿ ಬರ್ತಾನೆ ಇದೆ. ಇನ್ನೂ.. ಮಲ್ಟಿಪ್ಲೆಕ್ಸ್‌ನವರದ್ದು ಕಾಸ್ಟ್ಲೀ ದುನಿಯಾ. ಮೂಗುದಾರ ಹಾಕುವವರು ಯಾರು ಇಲ್ಲ. ಅವರು ಉಂಡಿದ್ದೇ ಉಗಾದಿ.. ಉಟ್ಟಿದ್ದೇ ದೀಪಾವಳಿ.. ಅನ್ನುವುದು ಬಹುತೇಕ ಜನಸಾಮಾನ್ಯರ ಅಭಿಪ್ರಾಯ.
ಇಂಥ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಇಲ್ಲಿಯವರೆಗೆ ಅನೇಕರು ಹೋರಾಡುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರು ಹೋರಾಟಕ್ಕೂ ಮೊದಲೇ ಶಸ್ತ್ರತ್ಯಾಗವನ್ನು ಕೂಡ ಮಾಡಿದ್ದಾರೆ.ಇನ್ನು 2017ರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಟಿಕೆಟ್ ದರ ನಿಗದಿ ಮಾಡಿತ್ತು.200 ರೂಪಾಯಿ ಮೇಲೆ ಒಂದು ಪೈಸೆ ಕೊಡುವಂತೆ ಇಲ್ಲ ಎಂದು ಹೇಳಿತ್ತು.

ಆದರೆ ಆ ನಂತರ ಆದೇಶಕ್ಕೆ ಮಲ್ಟಿಪ್ಲೆಕ್ಸ್ ಮಾಲೀಕರು ತಡೆಯಾಜ್ಞೆ ತಂದ ನಿಟ್ಟಿನಲ್ಲಿ, ಅದನ್ನು ವಾಪಸ್ ಪಡೆಯಲಾಗಿತ್ತು. ಆದರೆ ಈಗ ಇನ್ನೊಮ್ಮೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಮಲ್ಟಿಪ್ಲೆಕ್ಸ್‌ಗಳಿಗೆ ಶಾಕ್ ನೀಡಿದೆ. ನಟ್ಟು-ಬೋಲ್ಟು ಟೈಟ್ ಮಾಡುವ ಪ್ರಯತ್ನ ಮಾಡಿದೆ.
ಹೌದು, ಇಂದು ದಾಖಲೆಯ ಹದಿನಾರನೇ ಬಜೆಟ್ ಮಂಡಿಸಿರುವ ಹಣಕಾಸು ಖಾತೆಯನ್ನು ಕೂಡ ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಕನ್ನಡ ಚಿತ್ರರಂಗದ ಮತ್ತು ಕನ್ನಡ ಕಲಾಭಿಮಾನಿಗಳ ಹಲವು ವರ್ಷಗಳ ಮನವಿಗೆ ಇನ್ನೊಮ್ಮೆ ಮಣೆ ಹಾಕಿದ್ದಾರೆ. ಮಲ್ಟಿಪ್ಲೆಕ್ಸ್‌ಗಳಲ್ಲಿ 200 ರೂಪಾಯಿಗೆ ಸೀಮಿತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.
ಇನ್ನು, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರ ಗಗನಕ್ಕೇರಿತ್ತು. ಪರಭಾಷಾ ಚಿತ್ರ ಬಂದರಂತೂ ಚೆನ್ನೈ ಮತ್ತು ಹೈದರಾಬಾದ್‌ನಲ್ಲಿಯೇ ಇರದ ದರವನ್ನು ಇಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ನಿಗದಿ ಮಾಡಲಾಗುತ್ತಿತ್ತು. ಟಿಕೆಟ್ ಹೆಸರಿನಲ್ಲಿ 800 ರೂಪಾಯಿಯಿಂದ ಶುರುವಾಗಿ 1600ವರೆಗೆ ಇನ್ನೂ ಕೆಲವೊಮ್ಮೆ 3000 ರೂಪಾಯಿವರೆಗೆ ಕೂಡ ಪ್ರೇಕ್ಷಕರಿಂದ ಮಲ್ಟಿಪ್ಲೆಕ್ಸ್‌ನಲ್ಲಿ ವಸೂಲಿ ಮಾಡಲಾಗುತ್ತಿತ್ತು.
ಆದರೆ ಈಗ ದರವನ್ನು 200 ರೂಪಾಯಿಗೆ ಫಿಕ್ಸ್ ಮಾಡುವುದಾಗಿ ಸಿದ್ಧರಾಮಯ್ಯ ಹೇಳಿದ್ದಾರೆ. ಈ ಹಿನ್ನೆಲೆ ಈ ಹಿಂದೆ ಅಂದರೆ 2017-18ರಲ್ಲಿ ರಾಜ್ಯ ಸರ್ಕಾರದ ಆದೇಶದ ವಿರುದ್ದ ಮಲ್ಟಿಪ್ಲೆಕ್ಸ್‌ಗಳು ನ್ಯಾಯಾಲಯದ ಮೆಟ್ಟಿಲನ್ನೇರಿದಂತೆ ಈ ಬಾರಿ ಕೂಡ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿಯಾದರೂ ಸರ್ಕಾರದ ಈ ಘೋಷಣೆ ಜಾರಿಯಾಗುತ್ತಾ ಅಥವಾ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿಯುತ್ತಾ ಎನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ.
ಇದರ ನಡುವೆ ಸಹಜವಾಗಿ ಸಿದ್ಧರಾಮಯ್ಯ ಅವರ ಈ ಘೋಷಣೆಯಿಂದ ಕನ್ನಡ ಚಿತ್ರರಂಗಕ್ಕೆ ಖುಷಿಯಾಗಿದೆ. ಯಾಕೆಂದರೆ ಟಿಕೆಟ್ ದರದ ಕಾರಣದಿಂದ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ಅಭಿಪ್ರಾಯ ಕನ್ನಡ ಚಿತ್ರರಂಗದಲ್ಲಿ ಹಲವರಲ್ಲಿದೆ.ಈ ಘೋಷಣೆಯ ನಂತರ ಕನ್ನಡ ಚಿತ್ರರಂಗಕ್ಕೆ ಕುಬೇರ ವರ ಸಿಗಬಹುದು ಎನ್ನುವ ವಿಶ್ವಾಸ ಇವರದ್ದು.
ಕೇವಲ ಟಿಕೆಟ್ ದರ ಮಾತ್ರವಲ್ಲ ಈ ಬಾರಿಯ ಬಜೆಟ್‌ನಲ್ಲಿ ಕನ್ನಡ ಚಿತ್ರರಂಗದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ಧರಾಮಯ್ಯ ಕನ್ನಡ ಚಿತ್ರಗಳಿಗೆ ಓಟಿಟಿ ವೇದಿಕೆಯನ್ನು ಸೃಷ್ಟಿಸುವ ಕುರಿತು ಕೂಡ ಘೋಷಣೆ ಮಾಡಿದ್ದಾರೆ.
ಇನ್ನು ಹತ್ ಹತ್ರ ಶತಮಾನದ ಇತಿಹಾಸವನ್ನು ಹೊಂದಿರುವ ಕನ್ನಡ ಚಿತ್ರರಂಗಕ್ಕೆ ಅದ್ರದ್ದೇ ಆದ ಒಂದು ಫಿಲ್ಮ್ ಸಿಟಿ ಇಲ್ಲ. ಚಿತ್ರನಗರಿ ಕುರಿತು ಇಲ್ಲಿಯವರೆಗೆ ಹಲವು ಬಾರಿ ಪ್ರಯತ್ನಗಳಾದರೂ, ನಾನಾ ಸರ್ಕಾರಗಳು ಈ ಮಾಡಿ ಫಿಲ್ಮ್ ಸಿಟಿ ನಿರ್ಮಾಣ ಮಾಡಿಯೇ ತಿರುತ್ತೇವೆ ಎಂದು ಹೇಳಿದರೂ ಕೂಡ ಇಲ್ಲಿಯವರೆಗೆ ನಿರ್ಮಾಣವಾಗಿಲ್ಲ. ಈ ಹಿನ್ನೆಲೆ ಈ ಬಾರಿ ಕೂಡ ಚಿತ್ರನಗರಿಯನ್ನು ತಮ್ಮ ಬಜೆಟ್‌ನಲ್ಲಿ ಉಲ್ಲೇಖಿಸಿರುವ ಸಿಎಂ ಸಿದ್ಧರಾಮಯ್ಯ 150 ಎಕರೆ ಜಮೀನಿನಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಫಿಲ್ಮ್ ಸಿಟಿ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ಮುಂದಿನ ವರ್ಷಗಳಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.


Click it and Unblock the Notifications











