ಫಿಲ್ಮಿಸಿಟಿ.. ಅಪ್ಪು ಸ್ಮರಣಾರ್ಥ ಎಇಡಿ.. ಮ್ಯೂಸಿಯಂ.. ಈ ಬಾರಿ ಬಜೆಟ್‌ನಲ್ಲಿ ಚಿತ್ರರಂಗಕ್ಕೆ ಇನ್ನು ಏನೆಲ್ಲಾ ಸಿಕ್ತು?
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ(ಜುಲೈ 7) ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದರು. ಕಾಂಗ್ರೆಸ್‌ನ 5 ಗ್ಯಾರೆಂಟಿಗಳ ಜೊತೆಗೆ ರಾಜ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಿಎಂ ವಿವೇಚನೆಯ ಬಜೆಟ್ ಮುಂದಿಟ್ಟಿದ್ದಾರೆ. ಇನ್ನು ಈ ಬಾರಿಯ ಬಜೆಟ್‌ನಲ್ಲಿ ಕನ್ನಡ ಚಿತ್ರರಂಗಕ್ಕೂ ಸಾಕಷ್ಟು ಕೊಡುಗೆ ಸಿಕ್ಕಿದೆ. ಚಿತ್ರರಂಗದ ಪರ ನಮ್ಮ ಸರ್ಕಾರ ಇದೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಒಂದು ಸುಸಜ್ಜಿತ ಫಿಲ್ಮ್ ಸಿಟಿ ಬೇಕು ಎನ್ನುವ ಕೂಗು ಸಾಕಷ್ಟು ದಿನಗಳಿಂದ ಕೇಳಿಬರ್ತಿದೆ. ಈ ಹಿಂದೆ ಸಿಎಂ ಆಗಿದ್ದಾಗಲೇ ಕೂಡ ಸಿದ್ದರಾಮಯ್ಯ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆದರೆ ನಂತರ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಮನಗರದಲ್ಲಿ ಫಿಲ್ಮ್ ಸಿಟಿ ಮಾಡುವುದಾಗಿ ಹೇಳಿದ್ದರು. ಬಿಜೆಪಿ ಸರ್ಕಾರ ಬೆಂಗಳೂರಿನಲ್ಲೇ ಫಿಲ್ಮ್ ಸಿಟಿಗಾಗಿ ಜಾಗದ ಹುಟುಕಾಡ ನಡೆಸಿತ್ತು. ಆದರೆ ಈ ಬಜೆಟ್‌ನಲ್ಲಿ ಸಿದ್ದರಾಮಯ್ಯ ಮೈಸೂರಿನಲ್ಲೇ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.

ಕೆಲ ದಿನಗಳ ಹಿಂದೆ ಕೂಡ ಚಿತ್ರರಂಗದ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಫಿಲ್ಮ್ ಸಿಟಿ ಸೇರಿದಂತೆ ಚಿತ್ರರಂಗದ ಮತ್ತಷ್ಟು ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು. ಅದರಂತೆ ಬಜೆಟ್‌ನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಒತ್ತು ಕೊಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಸ್ಟುಡಿಯೋ ಸೇರಿದಂತೆ ಎಲ್ಲಾ ಸೌಲಭ್ಯಗಳಿರುವ ಫಿಲ್ಮ್ ಸಿಟಿ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.
ಪುನೀತ್ ಸ್ಮರಣಾರ್ಥ ಎಇಡಿ
ಒಂದೂವರೆ ವರ್ಷದ ಹಿಂದೆ ನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಹಠಾತ್ ನಿಧನ ಹೊಂದಿದ್ದರು. ಈ ವಿಚಾರ ಇಡೀ ರಾಜ್ಯಕ್ಕೆ ಶಾಕ್ ತಂದಿತ್ತು. ಅಷ್ಟು ಆರೋಗ್ಯವಾಗಿದ್ದ ಅಪ್ಪು ದಿಢೀರನೆ ಕೊನೆಯುಸಿರೆಳೆಯಲು ಕಾರಣ ಏನು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೀತು. ಹಠಾತ್ ಹೃದಯ ನೋವು ಕಾಣಿಸಿಕೊಂಡಾಗ ಸೂಕ್ತ ಚಿಕಿತ್ಸೆ ನೀಡಿ ಸಾವು ತಡೆಗಟ್ಟಲು ಪುನೀತ್ ಸ್ಮರಣಾರ್ಥ ಸರ್ಕಾರಿ ಆಸ್ಪತ್ರೆಗಳಲ್ಲಿ ಎಇಡಿ ಅಳವಡಿಕೆಗೆ ತೀರ್ಮಾನಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಬಹಳ ಚಿಕ್ಕವಯಸ್ಸಿನಲ್ಲೇ ಹೃದಯ ಸಂಬಂಧಿ ಸಮಸ್ಯೆಗಳಿಂದ ಸಾಕಷ್ಟು ಜನ ಕೊನೆಯುಸಿರೆಳೆಯುತ್ತಿದ್ದಾರೆ. ಈ ರೀತಿಯ ಹೃದಯ ಸಂಬಂಧಿ ಸಾವು ತಡೆಗಟ್ಟಲು 6 ಕೋಟಿ ರೂ. ವೆಚ್ಚದಲ್ಲಿ Automated External Defibrillators (AED)ಗಳನ್ನು ಎಲ್ಲಾ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಮ್ಯೂಸಿಯಂ
ಕನ್ನಡ ಚಿತ್ರರಂಗಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಮತ್ತೊಂದು ಕೊಡುಗೆ ಕೂಡ ಸಿಗುತ್ತಿದೆ. ಕಂಠೀರವ ಸ್ಟುಡಿಯೋದ ಆವರಣದಲ್ಲಿರುವ ಅಣ್ಣಾವ್ರ ಸ್ಮಾರಕದ ಬಳಿ ಒಂದು ಮ್ಯೂಸಿಯಂ ನಿರ್ಮಿಸುವುದಾಗಿ ಸಿಎಂ ಘೋಷಿಸಿದ್ದಾರೆ. 90 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸವನ್ನು ದಾಖಲಿಸುವ ಕೆಲಸ ಈ ಮ್ಯೂಸಿಯಂನಲ್ಲಿ ಮಾಡಲು ಉದ್ದೇಶಿಸಲಾಗಿದೆ. ಚಂದನವನ ಆರಂಭವಾದ ದಿನದಿಂದ ಇಲ್ಲಿಯವರೆಗೆ ಸಾಕ್ಷ್ಯಚಿತ್ರ, ಚಿತ್ರೀಕರಣಕ್ಕೆ ಬಳಸಿದ ವಸ್ತುಗಳನ್ನೆಲ್ಲಾ ಈ ಮ್ಯೂಸಿಯಂನಲ್ಲಿ ಇಟ್ಟು ಚಿತ್ರರಂಗ ಇತಿಹಾಸವನ್ನು ತೆರೆದಿಡುವ ಪ್ರಯತ್ನ ಮಾಡಲಾಗುತ್ತದೆ.
ಮತ್ತೆ ಸಿನಿಮಾಗಳಿಗೆ ಸಬ್ಸಿಡಿ
ಪ್ರತಿವರ್ಷ ಒಂದಷ್ಟು ಕನ್ನಡ ಸಿನಿಮಾಗಳಿಗೆ ಸರ್ಕಾರ ಸಹಾಯಧನ ನೀಡುತ್ತಾ ಬರುತ್ತಿತ್ತು. ಆದರೆ ಕಳೆದ 3 ವರ್ಷಗಳಿಂದ ಇದಕ್ಕೆ ಬ್ರೇಕ್ ಬಿದ್ದಿತ್ತು. ನಾನಾ ಕಾರಣಗಳನ್ನು ನೀಡಿ ಸಬ್ಸಿಡಿ ನೀಡುವುದನ್ನು ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಆಯ್ಕೆ ಸಮಿತಿ ರಚಿಸಿ ಗುಣಾತ್ಮಕ ಸಿನಿಮಾಗಳಿಗೆ ಸಹಾಯ ಧನ ನೀಡಲು ಕ್ರಮಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


Click it and Unblock the Notifications











