CCL 2026: ಕರ್ನಾಟಕ ಬುಲ್ಡೋಜರ್ಸ್ ಮೊದಲ ಎದುರಾಳಿ ಯಾರು? ಎಲ್ಲಿ, ಯಾವಾಗ ಪಂದ್ಯ?
'ಮಾರ್ಕ್' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ನಟ ಸುದೀಪ್ ಈಗ ಸಿಸಿಎಲ್ ಕ್ರಿಕೆಟ್ ಟೂರ್ನಿ ಕಡೆ ಮುಖ ಮಾಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ನೇತೃತ್ವ ವಹಿಸಿರುವ ಕಿಚ್ಚ ತಾಲೀಮು ಆರಂಭಿಸಿದ್ದಾರೆ. ಸಿಸಿಎಲ್ ಸೀಸನ್ 12 ಆರಂಭಕ್ಕೆ ದಿನಗಣನೆ ಶುರುವಾಗಿ. ಈಗಾಗಲೇ ಪಂದ್ಯಗಳ ವೇಳಾಪಟ್ಟಿ ಕೂಡ ಬಿಡುಗಡೆ ಆಗಿದೆ.
ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪ್ರಬಲ ತಂಡವಾಗಿ ಗುರ್ತಿಸಿಕೊಂಡಿದೆ. ಆದರೆ ಕೆಲವೊಮ್ಮೆ ಅದ್ಭುತ ಪ್ರದರ್ಶನದ ಮೂಲಕ ಸದ್ದು ಮಾಡುವ ತಂಡ ಕೆಲವೊಮ್ಮೆ ನಿರಾಸೆ ಮೂಡಿಸಿರುವುದು ಇದೆ. ಇತ್ತೀಚಿನ ವರ್ಷಗಳಲ್ಲಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಕಳೆದ ಸೀಸನ್‌ನಲ್ಲಿ ಕೂಡ ಆರಂಭದಲ್ಲಿ ಅದ್ಭುತ ಪ್ರದರ್ಶನ ತೋರಿದ ತಂಡ ಬಳಿಕ ಬೇರಸ ಮೂಡಿಸಿದ್ದು ಗೊತ್ತೇಯಿದೆ. ಹೊಸ ಹುರುಪಿನೊಂದಿಗೆ 12ನೇ ಸೀಸನ್ ಎದುರು ನೋಡುತ್ತಿದೆ.

ಭಾರತೀಯ ಚಿತ್ರರಂಗದ 8 ಇಂಡಸ್ಟ್ರಿಗಳ ಕಲಾವಿದರು, ತಂತ್ರಜ್ಞರು 8 ತಂಡಗಳಾಗಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಪಂಜಾಬ್ ಡಿ ಶೇರ್ ತಂಡ ಕಳೆದ ಬಾರಿ ಟ್ರೋಫಿಗೆ ಎತ್ತಿ ಹಿಡಿದಿತ್ತು. 2013 ಹಾಗೂ 2014ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಆಗಿತ್ತು. ಬಳಿಕ ಅದು ಮರುಕಳಿಸಲಿಲ್ಲ. ತೆಲುಗು ವಾರಿಯರ್ಸ್ ತಂಡ 4 ಬಾರಿ ಟ್ರೋಫಿ ಎತ್ತಿ ಹಿಡಿದಿರುವುದು ವಿಶೇಷ. ಜನವರಿ 16ರಂದು ಸಿಸಿಎಲ್ 12 ಟೂರ್ನಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಂಜಾಬ್ ಡಿ ಶೇರ್ ತಂಡವನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಎದುರಿಸಲಿದೆ.
ವೈಜಾಗ್‌ನಲ್ಲಿರುವ ACA-VDCA ಮೈದಾನದಲ್ಲಿ ಪಂದ್ಯ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಮೊದಲ ಪಂದ್ಯ ಶುರುವಾಗಲಿದೆ. ಜನವರಿ 16ರಂದು ಸಂಜೆ 6 ಗಂಟೆಗೆ ಭೋಜ್‌ಪುರಿ ದಬಾಂಗ್ಸ್ ವಿರುದ್ಧ ತೆಲುಗು ವಾರಿಯರ್ಸ್ ಅಖಾಡಕ್ಕೆ ಇಳಿಯಲಿದ್ದಾರೆ. ವೈಜಾಗ್‌ನಲ್ಲೇ ಈ ಪಂದ್ಯ ಕೂಡ ಜರುಗಲಿದೆ. ಕಳೆದ ಸೀಸನ್‌ನಲ್ಲಿ ಪಂಜಾಬ್ ತಂಡ ಅದ್ಭುತ ಪ್ರದರ್ಶನ ನೀಡಿ ಟ್ರೋಫಿ ಎತ್ತಿ ಹಿಡಿದಿತ್ತು. ಈ ಬಾರಿ ಹಾಲಿ ಚಾಂಪಿಯನ್ ತಂಡದ ವಿರುದ್ಧವೇ ಬುಲ್ಡೋಜರ್ಸ್ ಕಣಕ್ಕಿಳಿಯುತ್ತಿದ್ದಾರೆ.
ಡಾರ್ಲಿಂಗ್ ಕೃಷ್ಣ, ರಾಜೀವ್ ಹಾಗೂ ಪ್ರದೀಪ್ ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರಮುಖ ಆಟಗಾರರು ಎನಿಸಿಕೊಂಡಿದ್ದಾರೆ. ಕೀಪರ್ ಆಗಿ ಅದ್ಭುತ ಪ್ರದರ್ಶನ ನೀಡುವ ಸುದೀಪ್ ಬ್ಯಾಟ್ ಹಿಡಿದು ಅಬ್ಬರಿಸುತ್ತಾರೆ. ಈ ಬಾರಿ ಕೂಡ ಡಾರ್ಲಿಂಗ್ ಕೃಷ್ಣ ಮೇಲೆ ಬಹಳ ನಿರೀಕ್ಷೆಯಿದೆ. ಕಳೆದ ಸೀಸನ್‌ನಲ್ಲಿ ಸಹ ತಮ್ಮ ಆಕರ್ಷಕ ಬ್ಯಾಟಿಂಗ್ ಮೂಲಕ ಅವರು ಗಮನ ಸೆಳೆದಿದ್ದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬಣ್ಣ ಹಚ್ಚಿ ನಟಿಸುವ ಕಲಾವಿದರು ಕ್ರಿಕೆಟ್ ಮೈದಾನಕ್ಕೆ ಇಳಿದು ಫೋರ್, ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಾರೆ. ಸಿಸಿಎಲ್ ಮಾತ್ರವಲ್ಲದೇ ಸುದೀಪ್ ಕೆಸಿಸಿ ಕ್ರಿಕೆಟ್ ಟೂರ್ನಿಯನ್ನು ಆರಂಭಿಸಿದ್ದರು. ಕನ್ನಡ ಸಿನಿಮಾ ತಾರೆಯರು ಈ ಟೂರ್ನಿಯಲ್ಲಿ ಭಾಗವಹಿಸುತ್ತಾರೆ. ಆದರೆ ಸಿಸಿಎಲ್‌ನಲ್ಲಿ ಬೇರೆ ಬೇರೆ ಭಾಷೆ ಸಿನಿಮಾ ಕಲಾವಿದರು, ತಂತ್ರಜ್ಞರು ಒಟ್ಟಾಗಿ ಕ್ರಿಕೆಟ್ ಆಡಿ ಅಭಿಮಾನಿಗಳನ್ನು ರಂಜಿಸುತ್ತಾರೆ. ಅದೇ ಕಾರಣಕ್ಕೆ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಗಮನ ಸೆಳೆಯುತ್ತಾ ಬರುತ್ತಿದೆ.
2011ರಲ್ಲಿ ಮೊದಲ ಬಾರಿಗೆ ಸಿಸಿಎಲ್ ಸೀಸನ್ ಆರಂಭವಾಗಿತ್ತು. ಆದರೆ ಟಿ-20 ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಬಳಿಕ 2017ರಿಂದ ಟಿ-10 ಮಾದರಿಯಲ್ಲಿ 4 ಇನ್ನಿಂಗ್ಸ್‌ಗಳಾಗಿ ಪಂದ್ಯ ನಡೆಯುತ್ತದೆ. ರೌಂಡ್ ರಾಬಿನ್ ಹಾಗೂ ನಾಕ್‌ಔಟ್ ಫಾರ್ಮೆಟ್‌ನಲ್ಲಿ ಟೂರ್ನಿ ಆಯೋಜಿಸಲಾಗುತ್ತಿದೆ. ಸೋನಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದು. ಬಿಗ್‌ಬಾಸ್ 12 ಫಿನಾಲೆ ನಿರೂಪಣೆಗೂ ಮುನ್ನ ಕಿಚ್ಚ ಮೈದಾನಕ್ಕಿಳಿದು ಕ್ರಿಕೆಟ್ ಆಡಲಿದ್ದಾರೆ.


Click it and Unblock the Notifications











