ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ಗೆ ಜೆರ್ಸಿ ಬಿಡುಗಡೆ ಮಾಡಿದ ಕರ್ನಾಟಕ ಬುಲ್ಡೋಜರ್ಸ್
ಕಳೆದ ಮೂರು ವರ್ಷಗಳಲ್ಲಿ ನಡೆಯದೇ ಇದ್ದ ಸಿನಿ ರಸಿಕರ ನೆಚ್ಚಿನ ಕ್ರಿಕೆಟ್ ಟೂರ್ನಮೆಂಟ್ ಆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ( ಸಿ ಸಿ ಎಲ್ ) ಒಂಬತ್ತನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಈ ಟೂರ್ನಿ ಇದೇ ತಿಂಗಳ 18ರಿಂದ ಆರಂಭಗೊಳ್ಳುತ್ತಿದ್ದು, ಈ ಬಾರಿ ಒಟ್ಟು ಎಂಟು ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ.
2011ರಲ್ಲಿ ಆರಂಭಗೊಂಡ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2018 ಹೊರತುಪಡಿಸಿ 2019ರವರೆಗೂ ಎಲ್ಲಾ ವರ್ಷವೂ ತಪ್ಪದೇ ನಡೆದಿತ್ತು. ಆದರೆ ನಂತರದ ವರ್ಷಗಳಲ್ಲಿ ಕೊರೊನಾ ವೈರಸ್ ಕಾರಣದಿಂದಾಗಿ ಟೂರ್ನಿ ತಾತ್ಕಾಲಿಕವಾಗಿ ನಿಂತಿತ್ತು. ಆದರೆ ಈ ವರ್ಷ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಅನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು, ಫೆಬ್ರವರಿ 18ರಂದು ಪ್ರಥಮ ಪಂದ್ಯ ನಡೆಯಲಿದೆ.
ಕಳೆದ ವರ್ಷದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಹೀರೊಸ್ ತಂಡದ ವಿರುದ್ಧ ಸೋಲುವುದರ ಮೂಲಕ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ಕನ್ನಡ ಚಲನಚಿತ್ರರಂಗದ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಚಾಂಪಿಯನ್ ಆಗುವ ಗುರಿಯೊಂದಿಗೆ ಕಣಕ್ಕಿಳಿಯಲಿದ್ದು, ಈ ಬಾರಿ ತಂಡವನ್ನು ನಾಯಕನಾಗಿ ಪ್ರದೀಪ್ ಮುನ್ನಡೆಸಲಿದ್ದಾರೆ.

ಇನ್ನು ಟೂರ್ನಿ ಇದೇ ವಾರಾಂತ್ಯದಲ್ಲಿ ಶುರುವಾಗಲಿದ್ದು, ಹೈಪ್ ಹೆಚ್ಚುತ್ತಿದ್ದು, ಇದೇ ಸಮಯಕ್ಕೆ ಕರ್ನಾಟಕ ಬುಲ್ಡೋಜರ್ಸ್ ತಂಡ ಟೂರ್ನಿಯಲ್ಲಿ ತನ್ನ ಆಟಗಾರರು ಧರಿಸಲಿರುವ ಜೆರ್ಸಿಯನ್ನು ಅನಾವರಣಗೊಳಿಸಿದೆ. ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಜೆರ್ಸಿ ರಿವೀಲ್ ಎಂದು ಟ್ವೀಟ್ ಮಾಡಿರುವ ಕರ್ನಾಟಕ ಬುಲ್ಡೋಜರ್ಸ್ ಈ ಜರ್ಸಿಯನ್ನು ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ಗೆ ನಮ್ಮ ತಂಡ ಧರಿಸಲಿದೆ ಎಂದು ಬರೆದುಕೊಂಡಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಸಹ ನೀಲಿ ಬಣ್ಣದ ಜೆರ್ಸಿಯನ್ನೇ ಕರ್ನಾಟಕ ಬುಲ್ಡೋಜರ್ಸ್ ಬಿಡುಗಡೆಗೊಳಿಸಿದ್ದು, ಕೆಆರ್‌ಜಿ ಸ್ಟುಡಿಯೋಸ್, ಹ್ಯಾಪಿ ಹ್ಯಾಪಿ ಬಿಸ್ಕೆಟ್, ಕರ್ನಾಟಕ ಟೂರಿಸಂ, ಹಳ್ದಿರಾಮ್ಸ್, ವೀನಸ್ ಎಂಟರ್‌ಟೈನ್‌ಮೆಂಟ್ ಹಾಗೂ ಕಬ್ಜ ಚಿತ್ರದ ಲೋಗೊಗಳನ್ನು ಜರ್ಸಿ ಮೇಲೆ ಮುದ್ರಿಸಲಾಗಿದೆ.


Click it and Unblock the Notifications











