Puneeth Rajkumar Birthday: ಪುನೀತ್ ಬದುಕು ಆದರ್ಶಪ್ರಾಯ: ಸಿಎಂ ಬಸವರಾಜ ಬೊಮ್ಮಾಯಿ
ಪುನೀತ್ ಅವರನ್ನು ಪ್ರತಿ ದಿನ ಎಲ್ಲರೂ ಒಂದಲ್ಲಾ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತಾರೆ. ಆದರೆ ಇಂದು (ಮಾರ್ಚ್ 17) ಅಪ್ಪು ಹುಟ್ಟುಹಬ್ಬ. ಹಾಗಾಗಿ ಈ ದಿನ ಕೊಂಚ ವಿಶೇಷವಾಗಿ ಇರಲಿದೆ.
Recommended Video

ಎಲ್ಲರೂ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಜೊತೆ 'ಜೇಮ್ಸ್' ಚಿತ್ರಕ್ಕೆ ಶುಭಕೋರುತ್ತಿದ್ದಾರೆ. ಹಾಗೆ ಕರ್ನಾಟಕದ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಕೂಡ ಈ ದಿನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಅಪ್ಪು ನೆನಪು ಸ್ಮರಿಸಿದ್ದಾರೆ.
"ನಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬದುಕು, ಸಾರ್ವಜನಿಕವಾಗಿ ಅವರ ನಡವಳಿಕೆ, ಬಡವರಿಗೆ ಸಹಾಯ ಮಾಡಿದ ರೀತಿ, ಆದರ್ಶಪ್ರಾಯ ಹಾಗೂ ಪ್ರೇರಣೆದಾಯಕ." ಎಂದಿದ್ದಾರೆ.

"ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಅವರ ಕೆಲಸಗಳನ್ನು ನಾವೆಲ್ಲರೂ ಸ್ಮರಿಸಬೇಕು. ಪುನೀತ್ ಬದುಕಿದ್ದರೆ, ಅವರ 47ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೆವು. ಅವರನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಕೂಡ ಅಪ್ಪು ಬದುಕು ನಮಗೆ ಸ್ಫೂರ್ತಿಯಾಗಿದೆ" ಎಂದರು.
ಇನ್ನು ಇಂದು(ಮಾರ್ಚ್ 17) ರಿಲೀಸ್ ಆಗಿರುವ 'ಜೇಮ್ಸ್' ಚಿತ್ರಕ್ಕೆ ಶುಭಾಶಯ ಕೋರಿದರು. ಪುನೀತ್ ಅಭಿನಯದ ಸಿನಿಮಾ 'ಜೇಮ್ಸ್' ಇಂದು(ಮಾರ್ಚ್ 17) ಬಿಡುಗಡೆಯಾಗಿದೆ. ಸಿನಿಮಾ ಯಶಸ್ವಿಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿನಿಮಾಗೆ ಶುಭ ಕೋರಿದ್ದಾರೆ.
ಇದೇ ವೇಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ ಮಾಡಿರುವ ಬಗ್ಗೆನೂ ಮಾತನಾಡಿದರು. ಪುನೀತ್‌ಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಲು ಆದಷ್ಟು ಶೀಘ್ರವಾಗಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು. ಪುನೀತ್ ಹಾಗೂ ಡಾ: ರಾಜ್ ಕುಮಾರ್‌ಗೆ ಗೌರವ ಬರುವ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.


Click it and Unblock the Notifications











