ಡೈಲಾಗ್ ಕಿಂಗ್ ಪ್ರದೀಶ್ ಈಶ್ವರ್‌ಗೆ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಲು ಆಫರ್; ಒಪ್ಪಿಕೊಳ್ತಾರಾ?
ಕಳೆದ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ದಿಢೀರನೇ ಫೇಮಸ್ ಆಗಿದ್ದವರು ಪ್ರದೀಪ್ ಈಶ್ವರ್. ತಮ್ಮ ಡೈಲಾಗ್‌ಗಳಿಂದಲೇ ಚಿಕ್ಕಬಳ್ಳಾಪುರದ ಜನತೆಯನ್ನು ತನ್ನತ್ತ ಸೆಳೆದಿದ್ದರು. ಅದೇ ಮೊದಲ ಬಾರಿಗೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪ್ರದೀಪ್ ಈಶ್ವರ್ ನೋಡ ನೋಡುತ್ತಿದ್ದಂತೆ ಅಲ್ಲಿನ ಜನತೆಯ ಬಾಯಲ್ಲಿ ಹೆಸರು ಓಡಾಡುವುದಕ್ಕೆ ಶುರು ಮಾಡಿತ್ತು.
ಬಿಜೆಪಿಯ ಡಾ.ಕೆ. ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಕಣಕ್ಕೆ ಇಳಿದಿದ್ದರು. ಹೊಸ ಮುಖ ಡಾ.ಕೆ. ಸುಧಾಕರ್ ವಿರುದ್ಧ ಗೆಲ್ಲುವುದು ಅಸಾಧ್ಯ ಅಂತಲೇ ಭಾವಿಸಿದ್ದವರು ಲೆಕ್ಕವಿಲ್ಲದಷ್ಟು ಮಂದಿ. ಆದರೆ, ಚುನಾವಣಾ ಫಲಿತಾಂಶ ತಲೆಕೆಳಗಾಗಿತ್ತು. ಡಾ.ಕೆ. ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಗೆಲುವು ಸಾಧಿಸಿದ್ದರು. ವಿಧಾನಸೌಧದ ಮೆಟ್ಟಿಲು ಏರಿದ್ದರು.

ಪ್ರದೀಶ್ ಈಶ್ವರ್ ಪ್ರಚಾರದ ವೇಳೆ ಆಡಿದ ಮಾತುಗಳು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದವು. ಜನರು ಪ್ರದೀಪ್ ಈಶ್ವರ್ ಫ್ಯಾನ್ ಆಗಿದ್ದರು. ಪ್ರದೀಪ್ ಈಶ್ವರ್ ತಮ್ಮ ಮ್ಯಾನರಿಸಂನಲ್ಲಿ ಡೈಲಾಗ್ ಬಿಟ್ಟು ಫೇಮಸ್ ಆಗಿದ್ದಾರೆ. ತೆಲುಗು ಮಂದಿಗೂ ಪ್ರದೀಪ್ ಈಶ್ವರ್ ಬಗ್ಗೆ ಚೆನ್ನಾಗಿಯೇ ಪರಿಚಯವಿದೆ. ಈ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಈ ಶಾಸಕರಿಗೆ ಮೆಗಾ ಆಫರ್ ಒಂದು ಬಂದಿದೆ.
ಪ್ರದೀಪ್ ಈಶ್ವರ್ ಡೈಲಾಗ್ ಡಿಲೆವರಿ ಹೇಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ನಿರರ್ಗಳವಾಗಿ ಮಾತಾಡುವ ಪ್ರದೀಪ್ ಈಶ್ವರ್ ಟ್ಯಾಲೆಂಟ್‌ಗೆ ಮನ ಸೋತಿರುವ ನಿರ್ದೇಶಕರೊಬ್ಬರು ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದಾರಂತೆ. ಈ ಮಾತನ್ನು ವಿಷಯವನ್ನು ಸ್ವತ: ಪ್ರದೀಪ್ ಈಶ್ವರ್ ತಿಳಿಸಿದ್ದಾಗಿ ಟಿವಿ9 ವರದಿ ಮಾಡಿದೆ.
ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾವೊಂದರಲ್ಲಿ ನಟಿಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕ್ರಾಂತಿಕಾರಿ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರದೀಪ್ ಈಶ್ವರ್‌ಗೆ ನಟಿಸುವಂತೆ ಅದೇ ಸಿನಿಮಾದ ನಿರ್ದೇಶಕರು ಕರೆ ಮಾಡಿದ್ದಾರೆ. ಈ ವಿಷಯವನ್ನು ಶಾಸಕರೇ ರಿವೀಲ್ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತೆಲುಗು ಮಾತಾಡುವ ಜನರು ಕೂಡ ಇದ್ದಾರೆ. ಇನ್ನು ಪ್ರದೀಪ್ ಈಶ್ವರ್ ತೆಲುಗು ಭಾಷೆಯನ್ನು ಕನ್ನಡದಷ್ಟೇ ನಿರರ್ಗಳವಾಗಿ ಮಾತಾಡಬಲ್ಲರು. ಬಾರ್ಡರ್ ಏರಿಯಾಗಳಲ್ಲಿ ಪ್ರದೀಶ್ ಈಶ್ವರ್ ಭಾಷಣಗಳಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಕಾರಣಕ್ಕೆ ತೆಲುಗು ಮಂದಿಗೆ ಚಿಕ್ಕಬಳ್ಳಾಪುರ ಶಾಸಕರು ಚಿರಪರಿಚಿತ. ಇದೇ ಆಧಾರದ ಮೇಲೆ ತೆಲುಗು ನಿರ್ದೇಶಕರು ಆಫರ್ ಕೊಟ್ಟಿರಬಹುದೆಂದು ನಿರೀಕ್ಷೆ ಮಾಡಲಾಗಿದೆ.
ಪ್ರದೀಪ್ ಈಶ್ವರ್‌ಗೆ ಆಫರ್ ಬಂದಿದ್ದೇನೋ ನಿಜ. ಈ ಆಫರ್ ಅನ್ನು ಒಪ್ಪಿಕೊಳ್ಳುತ್ತಾರಾ? ಒಪ್ಪಿಕೊಂಡರೆ ರಾಜಕೀಯ ಎದುರಾಳಿಗಳಿಂದ ಟೀಕೆಯನ್ನು ಎದುರಿಸಬೇಕಾಗಿ ಬರಬಹುದು. ಆದರೆ, ಮೆಗಾಸ್ಟಾರ್ ಚಿರಂಜೀವಿ ಅಂತಹ ನಟನೊಂದಿಗೆ ನಟಿಸಲು ಅಫರ್ ಸಿಗುವುದೇ ದೊಡ್ಡ ವಿಷಯ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೋ.. ಸದ್ಯಕ್ಕಿದು ಯಕ್ಷ ಪ್ರಶ್ನೆ.


Click it and Unblock the Notifications











