ಡೇರ್ ಡೆವಿಲ್ ಮುಸ್ತಫಾ ಹಾಡಿನ ಸಾಲು..ಬಂಗಾರದ ಮನುಷ್ಯನ ನೆನಪು..ಬಜೆಟ್ ನಲ್ಲಿ ಕನ್ನಡ ಚಿತ್ರಗಳ ಕಲರವ..!
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಕರ್ನಾಟಕ ರಾಜ್ಯ ಬಜೆಟ್ 2024-25ರಲ್ಲಿ ಇಂದು ಕನ್ನಡ ಚಿತ್ರಗಳ ಕಲರವ ಕೇಳಿ ಬಂತು. ಸಂವಿಧಾನದ ಪ್ರಸ್ತಾವನೆಯನ್ನೇ ಬಜೆಟ್ ಭಾಷಣದಲ್ಲಿ ಸೇರ್ಪಡೆಗೊಳಿಸಿದ್ದ ಸಿಎಂ ಸಿದ್ದರಾಮಯ್ಯ ಬಂಗಾರದ ಮನುಷ್ಯ ಹಾಡನ್ನ ನೆನೆದರು. ಡೇರ್ ಡೆವಿಲ್ ಮುಸ್ತಫಾ ಹಾಡಿನ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.
ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.. ಮನಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕು ಎಂದೆಂದೂ..' ಎಂದು ಬಂಗಾರದ ಮನುಷ್ಯ ಚಿತ್ರದ ಹಾಡಿನ ಮೂಲಕ ಬಜೆಟ್ ಭಾಷಣ ಆರಂಭ ಮಾಡಿದ ಸಿಎಂ ಸಿದ್ದರಾಮಯ್ಯ, ಡೇರ್ ಡೆವಿಲ್ ಮುಸ್ತಫಾ ಚಿತ್ರದಲ್ಲಿನ ಒಂದು ತೋಟದಲ್ಲಿ ನೂರು ಹೂವು ಅರಳಲಿ.. ಎಲ್ಲ ಕೂಡಿ ಆಡುವಂಥ ಗಾಳಿ ಬೀಸಲಿ ಎಂಬ ಸಾಲನ್ನ ಓದಿದರು. ವಿಶೇಷ ಅಂದರೆ ಈ ಹಾಡನ್ನ ಬರೆದಿದ್ದು ಬೇರೆ ಯಾರು ಅಲ್ಲ ಬದಲಿಗೆ ಡಾಲಿ ಧನಂಜಯ್.

ಲಿಡ್ಕರ್ ರಾಯಭಾರಿ ಡಾಲಿ ಧನಂಜಯ್ ..!
ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ {ಲಿಡ್ಕರ್ } ದಿಂದ ಮೊದಲ ಬಾರಿ ರಾಯಭಾರಿಯಾಗಿ ಆಯ್ಕೆ ಆದವರು ಡಾಲಿ ಧನಂಜಯ್. ವಚನ ಸಾಹಿತ್ಯ ಅಲ್ಲದೇ ಡಾ.ಅಂಬೇಡ್ಕರ್ ಅವರ ಆಶಯ ಹಾಗೂ ಅವರ ಬಗ್ಗೆ ಅಪಾರ ಗೌರವ ಹೊಂದಿರುವ ಡಾಲಿ ಧನಂಜಯ್, . ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಹ ಮುನ್ನಲೆಗೆ ಬರಬೇಕೆಂಬ ಆಶಯ ಹೊಂದಿರುವಂತಹ ನಟ. ಇಂಥಹ ಡಾಲಿ ಧನಂಜಯ್ ಡೇರ್ ಡೆವಿಲ್ ಮುಸ್ತಫಾ ಚಿತ್ರಕ್ಕೆ ಬರೆದ ಹಾಡೊಂದರ ಸಾಲನ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಅನುದಾನಗಳನ್ನು ಮಂಡಿಸುವುದಕ್ಕೂ ಮುನ್ನ ಓದಿದ್ದು ವಿಶೇಷ
ಇನ್ನೂ ಇದೇ ಈ ಸಂದರ್ಭದಲ್ಲಿಅಲ್ಪ ಸಂಖ್ಯಾತರು ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಅಭಿವೃದ್ಧಿಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದಾರೆ. ಈ ಸಮಯದಲ್ಲಲಿ ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ 'ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ' ಗೀತೆಯನ್ನ ಸಿಎಂ ಸಿದ್ಧರಾಮಯ್ಯ ಮೆಲುಕು ಹಾಕಿದ್ದು ಇನ್ನೊಂದು ವಿಶೇಷ

ಏನಿಲ್ಲ.. ಏನಿಲ್ಲ.. ಎಂದ ವಿರೋಧ ಪಕ್ಷದ ನಾಯಕರು
ಬಜೆಟ್ ಆರಂಭದಲ್ಲಿ ವಿರೋಧ ಪಕ್ಷದ ನಾಯಕರು ಉಪೇಂದ್ರ ನಟನೆಯ 'ಏನಿಲ್ಲ ಏನಿಲ್ಲ..' ಹಾಡನ್ನು ನೆನಪಿಸಿಕೊಂಡರು. ಏನಿಲ್ಲ ಏನಿಲ್ಲ ಬಜೆಟ್ ನಲ್ಲಿ ಏನಿಲ್ಲ ಎಂಬ ಹಾಡನ್ನು ಗುನುಗುವ ಮೂಲಕ ವಿರೋಧ ವ್ಯಕ್ತಪಡಿಸಿದರು. "ಏನಿಲ್ಲ.. ಏನಿಲ್ಲ.. ಈ ಬಜೆಟ್‌ನಲ್ಲಿ ಏನಿಲ್ಲ" ಎಂಬ ಕಾರ್ಡ್ ಹಿಡಿದು ಘೋಷಣೆ ಕೂಗುತ್ತಾ ಬಂದ ಬಿಜೆಪಿ ನಾಯಕರನ್ನು ಮಾರ್ಷಲ್‌ಗಳು ಒಳಗೆ ಬಿಡಲಿಲ್ಲ ಅನ್ನುವುದು ಬೇರೆ ವಿಷಯ


Click it and Unblock the Notifications











