twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ನಮನ ಸಲ್ಲಿಸಲು ರಜೆ ಹಾಕಲಿದೆ ಇಡೀ ಚಿತ್ರರಂಗ

    |

    ಸ್ಯಾಂಡಲ್‌ವುಡ್‌ನ ಪುನೀತ್ ರಾಜ್‌ಕುಮಾರ್ ನಿಧನರಾಗಿ 15 ದಿನಗಳು ಕಳೆದಿವೆ. ಸದಾ ಮಗುಮುಖದ ಅಪ್ಪು ಕಳೆದುಕೊಂಡು ಇಡೀ ಚಿತ್ರರಂಗ ಕಂಗಾಲಾಗಿದೆ. ನೋವು ತುಂಬಿದ ಮನಸ್ಸಿನಲ್ಲೇ ಅಭಿಮಾನಿಗಳು ಸಾಮಾಜಿಕ ಕಾರ್ಯಗಳನ್ನು ತಮ್ಮ ಶಕ್ತಿ ಅನುಸಾರ ನಡೆಸುತ್ತಿದ್ದಾರೆ. ರಸ್ತೆಗಳಿಗೆ, ಬಸ್ ನಿಲ್ದಾಣಗಳಿಗೆ ಪುನೀತ್ ರಾಜ್‌ಕುಮಾರ್ ಹೆಸರಿಟ್ಟು ಅಭಿಮಾನ ಸಲ್ಲಿಸುತ್ತಿದ್ದಾರೆ. ಇತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಅಪ್ಪುಗೆ ನಮನ ಸಲ್ಲಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ.

    ಇದೇ ನವೆಂಬರ್​ 16ರಂದು ಕನ್ನಡ ಚಿತ್ರೋದ್ಯಮದ ವತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 'ಪುನೀತ್ ನಮನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ರೂಪು-ರೇಷೆಗಳನ್ನು ಈಗಾಗಲೇ ಸಿದ್ಧಪಡಿಸಿದೆ. ಕೇವಲ ನಾಲ್ಕು ದಿನಗಳಿರುವುದರಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ನಮನ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ.

    ಸಿನಿಮಾ ಚಿತ್ರೀಕರಣಕ್ಕೆ ರಜೆ ಘೋಷಣೆ

    ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿದೆ. ದಕ್ಷಿಣ ಭಾರತದ ಚಿತ್ರರಂಗಕ್ಕೆ, ರಾಜಕೀಯದ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಹೀಗಾಗಿ ನವೆಂಬರ್ 16ರಂದು ಇಡೀ ಕನ್ನಡ ಚಿತ್ರರಂಗ ಕೆಲಸ ಮಾಡುವುದಿಲ್ಲ. ಸಿನಿಮಾ ಚಿತ್ರೀಕರಣಕ್ಕೆ ಹಾಗೂ ಇನ್ನಿತರ ಕೆಲಸಕ್ಕೆ ರಜೆ ನೀಡಲಾಗಿದೆ. ಆ ದಿನ ಯಾವ ಕೆಲಸವೂ ನಡೆಯುವುದಿಲ್ಲ. ಚಿತ್ರರಂಗಕ್ಕೆ ಸಂಬಂಧಿಸಿದವರು ಎಲ್ಲರೂ ಕಾರ್ಯಕ್ರಮಕ್ಕೆ ಬರಲಿ ಅನ್ನುವ ಏಕೈಕ ಕಾರಣಕ್ಕೆ ಸಿನಿಮಾ ಚಟುವಟಿಕೆಗಳನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಇಡೀ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಪ್ಯಾಲೇಸ್ ಗ್ರೌಂಡ್‌ನಲ್ಲಿ ಜಮಾವಣೆಯಾಗಲಿದೆ.

    Karnataka Film Chamber of Commerce Gave Information About Puneeth Namana Program

    ಇಡೀ ರಾಜ್ ಕುಟುಂಬ ಭಾಗಿಯಾಗುತ್ತೆ

    ಪುನೀತ್ ನಮನ ಕಾರ್ಯಕ್ರಮಕ್ಕೆ ಅಣ್ಣಾವ್ರ ಇಡೀ ಕುಟುಂಬ ಭಾಗಿಯಾಗಲಿದೆ. ಪುನೀತ್ ರಾಜ್‌ಕುಮಾರ್ ನಮನ ಸಲ್ಲಿಸಲು ಅಪ್ಪು ಕುಟುಂಬ, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಸೇರಿದಂತೆ ಅಣ್ಣಾವ್ರ ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಪ್ಪು ಕುಟುಂಬಕ್ಕೆ ಆತ್ಮೀಯರಾಗಿರುವವರಿಗೂ ಆಹ್ವಾನ ನೀಡಲಾಗಿದ್ದು, ಗಣ್ಯಾತಿಗಣ್ಯರು ಪುನೀತ್ ನಮನ ಕಾರ್ಯಕ್ರಮದಲ್ಲ ಭಾಗಿಯಾಗಲಿದ್ದಾರೆ.

    ನಾಗೇಂದ್ರ ಪ್ರಸಾದ್-ಗುರುಕಿರಣ್ ಸಂಗೀತ ನಮನ

    ಪುನೀತ್ ನಮನ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಾಗೇಂದ್ರ‌ ಪ್ರಸಾದ್ ಹಾಗೂ ಗುರುಕಿರಣ್ ಅವರಿಂದ ಸಂಗೀತ ನಮನ ಕಾರ್ಯಕ್ರಮ ಇರುತ್ತದೆ. ಈ ಕಾರ್ಯಕ್ರಮದಲ್ಲಿ ಮನರಂಜನೆಗೆ ಯಾವುದೇ ಅವಕಾಶ‌‌ವಿರುವುದಿಲ್ಲ. ಕಾರ್ಯಕ್ರಮಕ್ಕೆ ಬಂದವರೆಲ್ಲರೂ ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಪುನೀತ್‌ ನಮನ ಕಾರ್ಯಕ್ರಮಕ್ಕೆ ವಿಶೇಷವಾಗಿ ಮೈಸೂರಿನ‌ ಮಹಾರಾಜ ಯದುವೀರ್ ಒಡೆಯರ್ ಆಗಮಿಸಿ ನಮನ ಸಲ್ಲಿಸಲಿದ್ದಾರೆ.

    Karnataka Film Chamber of Commerce Gave Information About Puneeth Namana Program

    ಅಂದ್ಹಾಗೆ ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಆರು ಗಂಟೆಗೆ ಕಾರ್ಯಕ್ರಮವನ್ನು ಮುಕ್ತಾಯ ಮಾಡಲು ಫಿಲ್ಮ್ ಚೇಂಬರ್ ಮುಂದಾಗಿದೆ. 'ಪುನೀತ್ ನಮನ' ಕಾರ್ಯಕ್ರಮಕ್ಕೆ ಒಂದೂ‌ವರೆ ಸಾವಿರ ಜನರಿಗೆ ಆಹ್ವಾನ ನೀಡಲಾಗಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಬರುವವರನ್ನು ಎರಡು ತಂಡಗಳಾಗಿ ವಿಂಗಡನೆ ಮಾಡಿ ಎಲ್ಲರಿಗೂ ಪಾಸ್ ವಿತರಣೆ ಮಾಡಲಾಗಿದ್ದು, ನೂಕು ನುಗ್ಗಲು ಆಗದಂತೆ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ.

    ಸಿನಿಮಾ ಪ್ರದರ್ಶನ ಎಂದಿನಂತೆ ಇರುತ್ತೆ

    ಪುನೀತ್ ನಮನ ಕಾರ್ಯಕ್ರಮದ ನಿಮಿತ್ತ ಇಡೀ ಕನ್ನಡ ಚಿತ್ರರಂಗಕ್ಕೆ ರಜೆ ಘೋಷಿಸಿದ್ದರೂ, ಸಿನಿಮಾ ಪ್ರದರ್ಶನ ನಡೆಯಲಿದೆ. ಯಾವುದೇ ಸಿನಿಮಾ ನೋಡುವವರಿಗೆ, ನಿರ್ಮಾಪಕರಿಗೆ ತೊಂದರೆ ಆಗಬಾರದು ಅನ್ನುವ ಕಾರಣಕ್ಕೆ ಸಿನಿಮಾ ಪ್ರದರ್ಶನ ನಿಲ್ಲಿಸದೆ ಇರಲು ತೀರ್ಮಾನ ಕೈಗೊಳ್ಳಲಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದ್, ಕಾರ್ಯದರ್ಶಿ ಎನ್ ಎಂ ಸುರೇಶ್, ಎ ಗಣೇಶ್, ನರಸಿಂಹಲು, ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕ‌ ನಾಗಣ್ಣ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಪ್ರತಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ನಿರ್ಮಾಪಕರು ಪುನೀತ್ ನಮನ ಕಾರ್ಯಕ್ರಮ ನಡೆಸಲು ಚಂದಾ ಎತ್ತುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಬಳಿಕ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ವಾಣಿಜ್ಯ ಮಂಡಳಿ ಹಣದಿಂದಲೇ ಪುನೀತ್ ನಮನ ಸಲ್ಲಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದರು.

    English summary
    karnataka film chamber of commerce gave information about puneeth namana program. November 16th kannada film industry will not work, thousand five hundred people may attend in this program.
    Saturday, November 13, 2021, 9:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X