'ಕಾಂತಾರ', 'ಟಾಕ್ಸಿಕ್' ಕಿಚ್ಚು; ಇನ್ಮುಂದೆ ಕಾಡಿನಲ್ಲಿ ಚಿತ್ರೀಕರಣಕ್ಕೆ ಹೊಸ ನಿಯಮ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ-1' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮದ ಸಮೀಪದ ಅರಣ್ಯ ಹಾಗೂ ಗೋಮಾಳ ಜಾಗದಲ್ಲಿ ಚಿತ್ರೀಕರಣ ನಡೆದಿತ್ತು. ಈ ವೇಳೆ ಕಾಡಿನಲ್ಲಿ ಬ್ಲಾಸ್ಟ್ ಮಾಡಿ ಅರಣ್ಯ ನಿಯಮ ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದೆಲ್ಲದರ ನಡುವೆ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು ಮುಂದೆ ಕಾಡಿನಲ್ಲಿ ಚಿತ್ರೀಕರಣ ಮಾಡುವವರಿಗೆ ಹೊಸ ನಿಯಮ ಸರ್ಕಾರ ಜಾರಿಗೆ ತಂದಿದೆ. ಅನುಮತಿ ಇಲ್ಲದ ಹೊರತು ಚಿತ್ರೀಕರಣ ನಡೆಸಬಾರದು ಎಂದು ತಿಳಿಸಿದೆ. ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಸಿನಿಮಾ, ಸೀರಿಯಲ್, ಡಾಕ್ಯುಮೆಂಟರಿ, ಶಾರ್ಟ್ ಫಿಲ್ಮ್ ಚಿತ್ರೀಕರಣ ನಡೆಸಲಾಗುತ್ತದೆ. ಅದಕ್ಕಾಗಿ ಶುಲ್ಕ ಪಡೆದು ಅನುಮತಿ ಕೊಡಲಾಗುತ್ತಿತ್ತು. ಪ್ರಸ್ತುತ ಅರಣ್ಯ ಪ್ರದೇಶದ ಚಿತ್ರೀಕರಣಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅದಕ್ಕೆ ಅನುಮತಿ ನೀಡುತ್ತಿದ್ದರು.

ಅರಣ್ಯ ಭಾಗದಲ್ಲಿ ವಿವಿಧ ಬಗೆಯ ಚಿತ್ರೀಕರಣಕ್ಕೆ ಸ್ಥಳೀಯ ಮಟ್ಟದ ಅಧಿಕಾರಿಗಳು ಅನುಮತಿ ನೀಡುತ್ತಿದ್ದರು. ಇದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿಯು ಹೊರ ಜಗತ್ತಿಗೆ ದೊರೆಯುವ ಸಂಭವವಿರುತ್ತದೆ ಎಂದು ಸರ್ಕಾರ ಹೊಸ ಆದೇಶ ಹೊರಡಿಸಿದೆ. ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
'ಕಾಂತಾರ' ಮಾತ್ರವಲ್ಲ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣದ ವೇಳೆಯೂ ವಿವಾದ ಸೃಷ್ಟಿಯಾಗಿತ್ತು. ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಸೆಟ್ ಹಾಕಿ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ನಡೆಸಲಾಗಿತ್ತು. ಆದರೆ ಸೆಟ್ ನಿರ್ಮಾಣಕ್ಕೆ ಮರ, ಗಿಡಗಳನ್ನು ಕಡಿದಿರುವ ಆರೋಪ ಕೇಳಿಬಂದಿತ್ತು. ಡಿನೋಟಿಫಿಕೇಷನ್ ಆಗದೇ ಹೆಚ್‌ಎಂಟಿ ವಶದಲ್ಲಿರುವ ಜಮೀನು ಅರಣ್ಯವೇ ಆಗಿದೆ ಎಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹೇಳಿದ್ದರು.
'ಕಾಂತಾರ'-1 ಚಿತ್ರತಂಡದ ವಿರುದ್ಧ ಕೇಳಿಬಂದಿದ್ದ ಆರೋಪಕ್ಕೆ ಕ್ಲೀಟ್ ಚಿಟ್ ಸಿಕ್ಕಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಸಮೀಪ ಚಿತ್ರೀಕರಣದ ವೇಳೆ ಬ್ಲಾಸ್ಟ್ ಮಾಡಲಾಗಿದೆ, ಮರ-ಗಿಡ ಕಡಿಯಲಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದರು. ಹಾಗಾಗಿ ಅರಣ್ಯಾಧಿಕಾರಿಗಳ ತಂಡ ತನಿಖೆ ನಡೆಸಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ ಎಂದು ವರದಿ ನೀಡಿದ್ದಾರೆ.


Click it and Unblock the Notifications











