ಟಿಕೆಟ್ ದರ 200 ರೂ. ನಿಗದಿಯಾದರೆ ಚಿತ್ರರಂಗಕ್ಕೆ ಬಲ; ಫಿಲ್ಮ್ ಮೇಕರ್ಸ್ ಮಾತು
ರಾಜ್ಯದಲ್ಲಿ ಬಹಳ ದುಬಾರಿ ಆಗಿರುವ ಸಿನಿಮಾ ಟಿಕೆಟ್ ದರಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಇನ್ನು ಪ್ರೇಕ್ಷಕರು ಹಾಗೂ ಫಿಲ್ಮ್ ಮೇಕರ್ಸ್ ಸ್ವಾಗತಿಸಿದ್ದಾರೆ. ಶೀಘ್ರದಲ್ಲೇ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಸಿನಿಮಾ ಟಿಕೆಟ್ ದರ 200 ರೂ. ಮೀರಬಾರದು ಎನ್ನುವ ನಿಯಮ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರಕ್ಕೆ ಗರಿಷ್ಠ ₹200 ಮಿತಿ ಹೇರಿ ಇತ್ತೀಚೆಗೆ ರಾಜ್ಯ ಗೃಹ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಕರಡಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಮತ್ತು ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುವುದಾಗಿ ಹೇಳಿದೆ. ಕಳೆದ ಬಾರಿ ಬಜೆಟ್‌ನಲ್ಲಿಯೇ ಟಿಕೆಟ್ ದರ ಮಿತಿ ಬಗ್ಗೆ ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದರು. ಇದೀಗ ಅದು ಜಾರಿಗೆ ಬರುವ ಸಮಯ ಹತ್ತಿರವಾಗುತ್ತಿದೆ.

ಸಿನಿಮಾ ಟಿಕೆಟ್ ದರ ಹೆಚ್ಚಾಗಿದ್ದರಿಂದ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಲು ಮೀನಾಮೇಷ ಎಣಿಸುವಂತಾಗಿದೆ. ಒಂದು ಕುಟುಂಬ ಸಿನಿಮಾ ನೋಡಲು ಹೋದರೆ ಸಾವಿರ ರೂಪಾಯಿಗಿಂತ ಹೆಚ್ಚು ಟಿಕೆಟ್‌ಗಾಗಿ ಕೊಡುವಂತಾಗಿದೆ. ಇನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಸ್ನ್ಯಾಕ್ಸ್ ದರವೂ ಹೆಚ್ಚಾಗಿ ಇರುವುದರಿಂದ ಪ್ರೇಕ್ಷಕರ ಜೇಬಿಗೆ ಹೊರೆ ಆಗುತ್ತಿದೆ. ಇದೇ ಕಾರಣಕ್ಕೆ ಟಿಕೆಟ್ ದರ ಕಮ್ಮಿ ಮಾಡುವಂತೆ ಜನ ಕೇಳುತ್ತಿದ್ದರು. ಅಂತೂ ಇಂತೂ ಸರ್ಕಾರ ಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ದರಕ್ಕೆ ಮೂಗುದಾರ ಹಾಕಲು ಮುಂದಾಗಿದ್ದಾರೆ. ಟ್ಯಾಕ್ಸ್ ಸೇರಿ ಟಿಕೆಟ್ ದರ 200 ರೂ. ದಾಟಬಾರದು ಎಂದು ನಿಯಮ ಜಾರಿಗೆ ತೀರ್ಮಾನಿಸಿದೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಟಿಕೆಟ್ ದರದ ಬಗ್ಗೆ ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಸಿಎಂ ಸಿದ್ಧರಾಮಯ್ಯ ಗಮನಕ್ಕೆ ತಂದಿದ್ದರು. ಟಿಕೆಟ್ ದರ ಹೆಚ್ಚಾಗಿರುವುದರಿಂದಲೇ ಜನ ಸಿನಿಮಾ ನೋಡುವುದಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಮಿತಿ ಹೇರಿ ಎಂದು ಮನವಿ ಮಾಡಿದ್ದರು. ಕನ್ನಡ ಮಾತ್ರವಲ್ಲ ಪರಭಾಷಾ ಸಿನಿಮಾಗಳಿಗೆ ಕೂಡ ಕರ್ನಾಟಕದಲ್ಲಿ ಈ ಟಿಕೆಟ್ ದರ ಮಿತಿ ಅನ್ವಯವಾಗುತ್ತದೆ.
ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ ನೋಡಬೇಕು ಎನ್ನುವ ಕೆಲ ಪ್ರೇಕ್ಷಕರ ಬಯಕೆಯನ್ನೇ ಬಂಡವಾಳ ಮಾಡಿಕೊಂಡು ಸಿನಿಮಾ ಟಿಕೆಟ್ ದರ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತದೆ. ತೆಲುಗಿನ 'ಪುಷ್ಪ'-2 ಚಿತ್ರಕ್ಕೆ ಕರ್ನಾಟಕದಲ್ಲಿ 1000 ರೂ. ವರೆಗೆ ಟಿಕೆಟ್ ದರ ಹೆಚ್ಚಿಸಿದ್ದರು. ಮುಂದಿನ ದಿನಗಳಲ್ಲಿ ಇದ್ದಕ್ಕೆಲ್ಲಾ ಕಡಿವಾಣ ಬೀಳಲಿದೆ. ಸರ್ಕಾರದ ತೀರ್ಮಾನಕ್ಕೆ ಮಲ್ಟಿಪ್ಲೆಕ್ಸ್ ಚೈನ್‌ಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆಯೂ ಇದೆ. ಶೀಘ್ರದಲ್ಲೇ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ಸರ್ಕಾರ ಹೀಗೆ ದುಬಾರಿ ಸಿನಿಮಾ ಟಿಕೆಟ್ ದರಕ್ಕೆ ಕಡಿವಾಣ ಹಾಕಲು ಮುಂದಾಗಿರುವುದು ಚಿತ್ರರಂಗಕ್ಕೂ ಸಂತಸ ತಂದಿದೆ. ನಿರ್ಮಾಪಕರು, ನಿರ್ದೇಶಕರು ಈ ಬಗ್ಗೆ ಮಾತನಾಡಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಟ, ನಿರ್ಮಾಪಕ ಅಜಯ್ ರಾವ್ ಮಾತನಾಡಿ "ಸರ್ಕಾರದ ಈ ನಿಯಮ ಎಲ್ಲಾ ಚಿತ್ರಮಂದಿರಗಳಲ್ಲಿ ಜಾರಿಗೆ ಬಂದರೆ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರಾಮುಖ್ಯತೆ ಇಲ್ಲ. 'ಯುದ್ಧಕಾಂಡ- 2' ಸಿನಿಮಾ ವಿಚಾರದಲ್ಲಿ ಕೂಡ ಹೀಗೆ ಆಗಿತ್ತು. ಜನ ಸಿನಿಮಾ ನೋಡಲು ಸಿದ್ಧರಿದ್ದರೂ ಸರಿಯಾಗಿ ಸಮಯದಲ್ಲಿ ಶೋ ಕೊಡದೇ ಹಿನ್ನಡೆ ಆಗಿತ್ತು. ಬೇರೆ ಭಾಷೆಯ ಸಿನಿಮಾಗಳಿಂದ ಶೇರ್ ಜಾಸ್ತಿ ಬರುತ್ತದೆ ಎನ್ನುವ ಕಾರಣಕ್ಕೆ ಒಳ್ಳೆ ಸಮಯದಲ್ಲಿ ಶೋಗಳನ್ನು ಪರಭಾಷಾ ಚಿತ್ರಗಳಿಗೆ ಕೊಡುತ್ತಾರೆ. ಕನ್ನಡ ಸಿನಿಮಾಗಳಿಗೆ ಕೊಡಲ್ಲ. ಎಲ್ಲಾ ಚಿತ್ರಗಳಿಗೂ ಒಂದೇ ಟಿಕೆಟ್ ದರ ನಿಗದಿಯಾದರೆ ಯಾವುದೇ ತಾರತಮ್ಯ ಇರಲ್ಲ" ಎಂದು ಹೇಳಿದ್ದಾರೆ.
ಸಿನಿಮಾ ನೋಡಲು ಜನ ಬರಲ್ಲ ಅಂತ ನಾವು ಅವರ ಮೇಲೆ ಗೂಬೆ ಕೂರಿಸುತ್ತೇವೆ ಅದು ತಪ್ಪು. ಜನ ಸಿನಿಮಾ ನೋಡಲು ಬರ್ತಿದ್ದಾರೆ. 'ಯುದ್ದಕಾಂಡ-2' ಹಾಗೂ 'ಮಾದೇವ' ಸಿನಿಮಾಗಳ ವಿಚಾರದಲ್ಲಿ ಹೀಗೆ ಆಗಿದ್ದು. ನನಗೆ ಸಾಕಷ್ಟು ಜನ ಫೋನ್ ಮಾಡಿ, ಮೆಸೇಜ್ ಮಾಡಿ ಶೋ ಎಲ್ಲಿದೆ? ಯಾವಾಗ? ಎಂದು ಕೇಳುತ್ತಲೇ ಇದ್ದರು. ಆದರೆ ಸರಿಯಾದ ಸಮಯದಲ್ಲಿ ಮಲ್ಟಿಪ್ಲೆಕ್ಸ್‌ನವರು ಶೋ ಕೊಡಲಿಲ್ಲ, ಹಾಗಾಗಿ ಹಿನ್ನೆಡೆ ಆಗಿತ್ತು. ಟಿಕೆಟ್ ದರ ನಿಗದಿಯಾದರೆ ಕನ್ನಡ ಚಿತ್ರರಂಗ ಉದ್ದಾರ ಆಗುತ್ತೆ. ದೊಡ್ಡ ಬಜೆಟ್ ಸಿನಿಮಾಗಳ ವಿಚಾರ ನನಗೆ ಗೊತ್ತಿಲ್ಲ. ಅದಕ್ಕೆ ಬೇರೆ ಏನು ನಿಯಮ ತರ್ತಾರೆ ಎನ್ನುವುದನ್ನು ನೋಡಬೇಕು" ಎಂದು ಅಜಯ್ ರಾವ್ ಹೇಳಿದ್ದಾರೆ.
ಟಿಕೆಟ್ ದರ ನಿಗದಿ ವಿಚಾರದ ಬಗ್ಗೆ ನಿರ್ದೇಶಕ ಎಎಂಆರ್ ರಮೇಶ್ ಪ್ರತಿಕ್ರಿಯಿಸಿ "ಇನ್ನು ನಿಮಯ ಜಾರಿಗೆ ಬಂದಿಲ್ಲ. ಒಂದು ವೇಳೆ ಬಂದರೆ ಕಂಡಿತ ಚಿತ್ರರಂಗಕ್ಕೆ ಅನುಕೂಲ" ಎಂದಿದ್ದಾರೆ. ದೊಡ್ಡ ಸಿನಿಮಾಗಳು ಬಂದಾಗ ಟಿಕೆಟ್ ದರ ಹೆಚ್ಚಿಸುತ್ತಾರೆ. ಬಳಿಕ ಅದನ್ನು ಕಮ್ಮಿ ಮಾಡದೇ ಅದನ್ನೇ ಮುಂದುವರೆಸುತ್ತಾರೆ. ತಮಿಳುನಾಡಿನಲ್ಲಿ ಟಿಕೆಟ್ ದರ ಕಮ್ಮಿ ಇದೆ. ಕರ್ನಾಟಕದಲ್ಲಿ 700 ರೂ, 800 ರೂ. ಮಾಡುತ್ತಾರೆ. ಇದು ಯಾವ ನ್ಯಾಯ" ಎಂದು ಪ್ರಶ್ನಿಸಿದ್ದಾರೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಉದಾಹರಣೆಗೆ ಕೆಜಿಎಫ್ ಸಿನಿಮಾ ಬಂದಾಗ 600 ರೂ. 700 ರೂ. ಟಿಕೆಟ್ ದರ ಮಾಡುತ್ತಾರೆ. ಅದೇ ರೀತಿ ನನ್ನದು ಯಾವುದೋ ಸಿನಿಮಾ ಬಂದರೂ ಅದೇ ದರ ಮುಂದುವರೆಸುತ್ತಾರೆ. ಆದರೆ ಟಿಕೆಟ್ ದರ 150 ರೂ. ಅಥವಾ 200 ರೂ. ಎಂದು ನಿಗದಿ ಪಡಿಸಿದರೆ ಆಗ ಸಿನಿಮಾ ನೋಡಲು ಜನ ಬರ್ತಾರೆ. ದುಬಾರಿ ಟಿಕೆಟ್ ದರ ನೋಡಿ ಜನ ಟಿಕೆಟ್ ಬುಕ್ ಮಾಡಲ್ಲ, ಅದನ್ನು ತೋರಿಸಿ ಜನ ಬರ್ತಿಲ್ಲ ಅಂತ ಶೋ ಕ್ಯಾನ್ಸಲ್ ಮಾಡಿಬಿಡುತ್ತಾರೆ. ಈಗ ಆ ರೀತಿ ಮಾಡಲು ಸಾಧ್ಯವಿಲ್ಲ. ಟಿಕೆಟ್ ದರ ಕಮ್ಮಿ ಇದ್ದರೆ 20, 30 ಟಿಕೆಟ್ ಆದರೂ ಬುಕ್ ಮಾಡ್ತಾರೆ. ಹಾಗಾಗಿ ಶೋ ಕೊಡಲೇಬೇಕಾಗುತ್ತದೆ. ಇದು ಜಾರಿ ಆಗಬೇಕು, ಬರೀ ನೋಟಿಪೈ ಮಾಡಿದ್ರೆ ಪ್ರಯೋಜನ ಇಲ್ಲ. ಆದೇಶ ಬಂದು ನಿಯಮ ಜಾರಿ ಆಗಬೇಕು" ಎಂದು ಎಎಂಆರ್ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ "ಯಾವುದೇ ಆಕ್ಷೇಪಣೆ ಬಂದರೂ ಸರ್ಕಾರ ಈ ಪ್ರಸ್ತಾವನೆಯಿಂದ ಹಿಂದೆ ಸರಿಯಬಾರದು. ಆಂಧ್ರ, ತಮಿಳುನಾಡು ಹಾಗೂ ಕೇರಳದಲ್ಲಿ ಇರುವ ಈ ವ್ಯವಸ್ಥೆ ಕರ್ನಾಟಕದಲ್ಲಿ ಯಾಕೆ ಇಲ್ಲ. ಯಾಕೆ ಇಲ್ಲಿಯೂ ಅದು ಆಗಬಾರದು. ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು. ಆಲ್ ಇಂಡಿಯಾ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಈ ಬಗ್ಗೆ ಆಕ್ಷೇಪಣೆ ಸಲ್ಲಿಸದೇ ಇರಲ್ಲ. ಆದರೂ ಸರ್ಕಾರ ಮಾತ್ರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು" ಎಂದಿದ್ದಾರೆ.
ದೊಡ್ಡ ಸಿನಿಮಾಗಳು ಬಂದಾಗ ಸರ್ಕಾರದ ಅನುಮತಿ ಪಡೆದು ಟಿಕೆಟ್ ದರ ಹೆಚ್ಚಿಸಿಕೊಳ್ಳಲಿ. ಅದೇ ರೀತಿ ಗೋಲ್ಡ್ ಕ್ಲಾಸ್ ಸ್ಕ್ರೀನ್‌ಗಳಿಗೆ ಕೊಂಚ ಟಿಕೆಟ್ ದರ ಹೆಚ್ಚಿಸಿಕೊಳ್ಳಲಿ. ಆದರೆ ಇನ್ನುಳಿದಂತೆ ಎಲ್ಲಾ ಸ್ಕ್ರೀನ್‌ಗಳಲ್ಲಿ 200 ರೂ. ಟಿಕೆಟ್ ದರ ನಿಗದಿ ಆಗಬೇಕು. ಟಿಕೆಟ್ ದರ ನಿಗದಿ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ಕೂಡ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಸಿನಿಮಾ ಕಲೆಕ್ಷನ್ ಅಂದರೆ ಒಂದೇ ವಾರ ಎನ್ನುವಂತಾಗಿದೆ. ಮೊದಲ ವಾರದಲ್ಲೇ ಎಲ್ಲರೂ ಸಿನಿಮಾಬಿಡಬೇಕು, ಹಾಕಿದ ಬಂಡವಾಳ ಬರಬೇಕು ಎನ್ನುವ ಲೆಕ್ಕಾಆರ ಇದೆ. ಆದರೆ ಟಿಕೆಟ್ ದರ ಕಮ್ಮಿ ಆದರೆ ಸಿನಿಮಾಗಳು ಹೆಚ್ಚು ದಿನ ಪ್ರದರ್ಶನವಾಗುತ್ತವೆ. ಮತ್ತೆ 50 ದಿನ, ಶತದಿನೋತ್ಸವ ಪ್ರದರ್ಶನ ಎನ್ನುವ ಕಾಲ ಬರಬಹುದು" ಎಂದು ಉಮೇಶ್ ಬಣಕಾರ್ ವಿವರಿಸಿದ್ದಾರೆ.


Click it and Unblock the Notifications











