ಸಿನಿರಸಿಕರಿಗೆ ಸರ್ಕಾರ ಗುಡ್ ನ್ಯೂಸ್; ಚಿತ್ರಮಂದಿರಗಳಲ್ಲಿ 200 ರೂ. ಟಿಕೆಟ್ ನಿಗದಿ ಮಾಡಿ ಆದೇಶ
ಚಿತ್ರಮಂದಿರಗಳಲ್ಲಿ ದುಬಾರಿ ಟಿಕೆಟ್ ದರಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ. ಇಂದಿನಿಂದಲೇ (ಸೆಪ್ಟೆಂಬರ್ 12) ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 200 ರೂ. ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 18% ತೆರಿಗೆ ಸೇರಿ ಸಿನಿಮಾ ಟಿಕೆಟ್ ದರ 236 ರೂ. ದಾಟಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಇದು ಸಹಜವಾಗಿಯೇ ಸಿನಿರಸಿಕರ ಸಂತಸಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಸಿನಿಮಾ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗುತ್ತಿತ್ತು. ಡಿಮ್ಯಾಂಡ್‌ಗೆ ತಕ್ಕಂತೆ 600 ರೂ, 800 ರೂ,ಗೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್ ದರ ನಿಗದಿಪಡಿಸುವ ಉದಾಹರಣೆ ಕೂಡ ಇದೆ. ಇತ್ತೀಚೆಗೆ ರಜನಿಕಾಂತ್ ನಟನೆಯ 'ಕೂಲಿ' ಚಿತ್ರದ ಟಿಕೆಟ್ ದರ ಕೂಡ 3 ಪಟ್ಟು ಹೆಚ್ಚಿಸಿದ್ದರು. ಎರಡು ತಿಂಗಳ ಹಿಂದೆಯೇ ಕರ್ನಾಟಕ ಸರ್ಕಾರ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದರವನ್ನು 200 ರೂ.ಗೆ ಮಿತಿಗೊಳಿಸಲು ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಈ ಪ್ರಸ್ತಾವನೆಯ ವಿರುದ್ಧ ಸಾರ್ವಜನಿಕರು 15 ದಿನಗಳಲ್ಲಿ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಗೃಹ ಇಲಾಖೆಗೆ ಸಲ್ಲಿಸಬಹುದು ಎಂದು ತಿಳಿಸಿತ್ತು. ಕೆಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಸಿದ್ಧರಾಮಯ್ಯ ಸಿನಿಮಾ ಟಿಕೆಟ್ ದರ ನಿಗದಿ ಮಾಡುವುದಾಗಿ ಹೇಳಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಈ ಬಾರಿ ಬಜೆಟ್‌ನಲ್ಲಿ ಕೂಡ ಈ ವಿಚಾರ ಪ್ರಸ್ತಾಪಿಸಿದ್ದರು. ಬಳಿಕ ಕರಡು ಅಧಿಸೂಚನೆ ಹೊರಡಿಸಿದ್ದರು. ಇದೀಗ ನಿಯಮ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಗೋಲ್ಡ್ ಕ್ಲಾಸ್ ವ್ಯವಸ್ಥೆ ಇರುತ್ತದೆ. ಇಂತಹ ಸ್ಕ್ರೀನ್‌ಗಳಲ್ಲಿ 200 ರೂ. ಟಿಕೆಟ್ ದರ ಇರುವುದಿಲ್ಲ, ಅಂತಹ ಆಸನಗಳಿಗೆ ಮಲ್ಟಿಪ್ಲೆಕ್ಸ್ ಟಿಕೆಟ್ ದರ ನಿಗದಿಪಡಿಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿರುವ ರೆಕ್ಲೈನರ್ ಸೀಟ್‌ಗಳಿಗೂ ಈ ನಿಯಮ ಅನ್ವಯಿಸುವುದಿಲ್ಲ. ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಸಿನಿಮಾ ಟಿಕೆಟ್ ವಿಚಾರದಲ್ಲಿ ಕಟ್ಟುನಿಟ್ಟಿನ ನಿಯಮಗಳಿವೆ. ತಮಿಳುನಾಡಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ 200 ರೂ. ಟಿಕೆಟ ದರ ದಾಟುವಂತಿಲ್ಲ.
ಕರ್ನಾಟಕದಲ್ಲಿ ಮಾತ್ರ ಪ್ರೇಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿದೆ. ದೊಡ್ಡ ಸಿನಿಮಾಗಳನ್ನು ಮೊದಲ ದಿನವೇ ನೋಡಬೇಕು ಎನ್ನುವ ಪ್ರೇಕ್ಷಕರ ಉತ್ಸಾಹವನ್ನೇ ಬಂಡವಾಳ ಮಾಡಿಕೊಂಡು ಚಿತ್ರಮಂದಿರಗಳ ಮಾಲೀಕರು ದರ ಹೆಚ್ಚಿಸುತ್ತಿದ್ದರು. ಹಗಳು ದರೋಡೆ ಮಾಡುತ್ತಿದ್ದರು. 200 ರೂ. ಟಿಕೆಟ್ ಅನ್ನು 800 ರೂ.ಗೆ ಮಾರಾಟ ಮಾಡಿ ಪ್ರೇಕ್ಷಕರಿಗೆ ಸಮಸ್ಯೆ ಉಂಟುಮಾಡುತ್ತಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಲೇ ಇತ್ತು. ಹಾಗಾಗಿ ಸರ್ಕಾರ ಈ ನಿರ್ಧಾರಕ ಕೈಗೊಂಡಿದೆ. ಸದ್ಯ ಏಕರೂಪ ಟಿಕೆಟ್ ದರ ಜಾರಿ ಆಗಿರುವುದು ಸಂತಸ ತಂದಿದೆ.
ಕನ್ನಡದ ದೊಡ್ಡ ಸಿನಿಮಾಗಳು ಬಿಡುಗಡೆ ಆದಾಗಲೂ ರಾಜ್ಯದಲ್ಲಿ ಟಿಕೆಟ್ ದರ ಹೆಚ್ಚಿಸುತ್ತಿರಲಿಲ್ಲ. ಆದರೆ ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಬಂದಾಗ ಮಾತ್ರ ಥಿಯೇಟರ್ ಮಾಲೀಕರು ಹೀಗೆ ಮಾಡುತ್ತಿದ್ದರು. ಸದ್ಯ ಸರ್ಕಾರದ ಈ ನಡೆಯನ್ನು ಸಿನಿರಸಿಕರು ಸ್ವಾಗತಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಈ ನಿಮಯ ಜಾರಿಗೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಚಿತ್ರಮಂದಿರಗಳಿಗೆ ಸರ್ಕಾರದ ಆದೇಶ ಪ್ರತಿ ತಲುಪಿದ ಕೂಡಲೇ ನಿಯಮ ಪಾಲನೆ ಆಗಲಿದೆ.


Click it and Unblock the Notifications











