ಆಕ್ಟ್ 1978 ಚಿತ್ರದ ಗೆಲುವು: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ರಾಷ್ಟ್ರ ಪ್ರಶಸ್ತಿ ನಿರ್ದೇಶನ ಮಂಸೋರೆ ನಿರ್ದೇಶನದ ಆಕ್ಟ್ 1978 ಸಿನಿಮಾ ತೆರೆಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಿದೆ. ಲಾಕ್‌ಡೌನ್ ಬಳಿಕ ಮೊದಲು ಬಿಡುಗಡೆಯಾಗದ ಹೊಸ ಸಿನಿಮಾ ಎಂಬ ವಿಶೇಷತೆಯೊಂದಿಗೆ ಬಂದ ಆಕ್ಟ್ 1978 ಸಿನಿಮಾ 25 ದಿನಗಳನ್ನು ಪೂರೈಸಿದೆ.
Recommended Video

ಇದೀಗ, ಈ ಚಿತ್ರದ ಗೆಲುವು ಎಂಬಂತೆ ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ಪ್ರಕಟಿಸಿದೆ. ಹೌದು, ಆಕ್ಟ್ 1978 ಸಿನಿಮಾದಲ್ಲಿ ಪ್ರಮುಖವಾಗಿ ಚರ್ಚಿಸಿದ ##PeopleNeedRespect ಥೀಮ್‌ಗೆ ಗೆಲುವು ಸಿಕ್ಕಿದೆ. ಅಂದ್ರೆ, ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಗೌರವ ಸಿಗಬೇಕು ಎಂಬ ಅಂಶವನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು.
ಈ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೆ ರಾಜ್ಯ ಸರ್ಕಾರ ಈ ಸಂಬಂಧ ಆದೇಶ ಜಾರಿ ಮಾಡಿರುವುದು ಕುತೂಹಲ ಕೆರಳಿಸಿದೆ. ''ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಭೇಟಿ ನೀಡಿದ ಸಂದರ್ಭದಲ್ಲಿ ಸೌಜನ್ಯಯುತವಾಗಿ ಮತ್ತು ಸಮಾಧಾನವಾಗಿ ವರ್ತಿಸಬೇಕು ಎಂದು ರಾಜ್ಯ ಅಧೀನ ಕಾರ್ಯದರ್ಶಿ ಹರ್ಷರಾಣಿ ಡಿಸೆಂಬರ್ 15 ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.

''ಸರ್ಕಾರಿ ಸೇವೆಯು ಸಾರ್ವಜನಿಕ ಸೇವೆಯಾಗಿರುವುದರಿಂದ, ಸಾರ್ವಜನಿಕರು ತಮ್ಮ ಸಮಸ್ಯೆಯ ಕುರಿತು ವ್ಯವಹರಿಸಲು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ/ಸಮಾಧಾನವಾಗಿ ವರ್ತಿಸಬೇಕೆಂದು ಹಾಗೂ ತಾರತಮ್ಯ ಮಾಡದೇ ಬಂದವರೆಲ್ಲರಿಗೂ ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಹೇಳುವಂತೆ ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳಿಗೆ ಹಾಗೂ ಅಧೀನ ಇಲಾಖೆಗಳ ಮುಖ್ಯಸ್ಥರ ಮೂಲಕ ಎಲ್ಲಾ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳಿಗೆ ತಿಳಿಸುವಂತೆ ಸೂಚಿಸಿದೆ'' ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಅಂದ್ಹಾಗೆ, ನವೆಂಬರ್ 20 ರಂದು ಆಕ್ಟ್ 1978 ಸಿನಿಮಾ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಲಾಕ್‌ಡೌನ್ ಆದ್ಮೇಲೆ ಚಿತ್ರಮಂದಿರ ಕಡೆ ಮುಖ ಮಾಡದ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡರು.
ನಟಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬಿ. ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯಾ, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ತಾರಬಳಗದಲ್ಲಿದ್ದಾರೆ. ದೇವರಾಜ್ ಆರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.


Click it and Unblock the Notifications











