ದರ್ಶನ್ & ಗ್ಯಾಂಗ್‌ಗೆ ಸರ್ಕಾರ ಬಿಗ್ ಶಾಕ್
ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇನ್ನುಳಿದ ಆರೋಪಿಗಳಿಗೆ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿತ್ತು. ಚಿಕಿತ್ಸೆ ನೆಪವೊಡ್ಡಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದ ದರ್ಶನ್ ರೆಗ್ಯುಲರ್ ಜಾಮೀನು ಸಿಕ್ಕಿ ನಿರಾಳರಾಗಿದ್ದರು. ಒಂದೂವರೆ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್ ಇತ್ತೀಚೆಗೆ ಡಿಸ್ಚಾರ್ಜ್ ಕೂಡ ಆಗಿದ್ದರು.
ನ್ಯಾಯಾಲಯದಿಂದ ಅನುಮತಿ ಪಡೆದು ದರ್ಶನ್ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದು ಅಲ್ಲಿದ ಸಮೀಪದ ಆಸ್ಪತ್ರೆಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಸರ್ಜರಿ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ದರ್ಶನ್‌ಗೆ ಜಾಮೀನು ಸಿಕ್ಕ ವಿಚಾರ ಅಭಿಮಾನಿಗಳು ಹಾಗೂ ಆಪ್ತರಿಗೆ ಸಂತಸ ತಂದಿದೆ.

ಜಾಮೀನು ಪಡೆದು ನಿರಾಳರಾಗಿದ್ದ ನಟ ದರ್ಶನ್‌ಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಹೈಕೋರ್ಟ್ ಜಾಮೀನು ಆದೇಶ ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಹೋಗಲು ಸರ್ಕಾರ ಒಪ್ಪಿದೆ. ಇಬ್ಬರು ವಕೀಲರನ್ನು ನೇಮಿಸಿ ಜಾಮೀನು ಬಗ್ಗೆ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ವಕೀಲರಾದ ಅನಿಲ್ ಸಿ ನಿಶಾನಿ ಹಾಗೂ ಸಿದ್ಧಾರ್ಥ್ ಲೂಥ್ರಾ ಅವರನ್ನು ನೇಮಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.
ಡಿಸೆಂಬರ್ 13ರಂದು ಪ್ರಕರಣದಲ್ಲಿ ದರ್ಶನ್ ಸೇರಿ 7 ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಎ1 ಪವಿತ್ರಾ ಗೌಡ ಸಹ 179 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿ ಹೊರ ಬಂದಿದ್ದರು. ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ ಸಮಯದಲ್ಲೇ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿತ್ತು. ಸರ್ಕಾರದ ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಿತ್ತು.
ದರ್ಶನ್ & ಗ್ಯಾಂಗ್‌ಗೆ ರೆಗ್ಯುಲರ್ ಜಾಮೀನು ಸಿಕ್ಕಿದ ಬಳಿಕ ಕೂಡ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸುಪ್ರೀಂ ಕೋರ್ಟ್ ಮೊರೆ ಹೋಗುವ ಬಗ್ಗೆ ಹೇಳಿದ್ದರು. ಇದೀಗ ಪ್ರಕರಣದ ಗಂಭೀರತೆಯನ್ನು ಸುಪ್ರೀ ಕೋರ್ಟ್ ಮುಂದಿಟ್ಟು ಜಾಮೀನು ರದ್ದು ಕೋರಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಇದು ಸಹಜವಾಗಿಯೇ ದರ್ಶನ್ & ಗ್ಯಾಂಗ್‌ಗೆ ಆತಂಕ ತಂದಿದೆ.
ಜೂನ್ 8ರಂದು ರೇಣುಕಾಸ್ವಾಮಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮರುದಿನ ಶವ ಪತ್ತೆ ಆಗಿತ್ತು. ಜೂನ್ 10ರಂದು ನಾಲ್ಕು ಜನ ತಾವೇ ಕೊ* ಮಾಡಿರುವುದಾಗಿ ಹೇಳಿ ಶರಣಾಗಿದ್ದರು. ಪೊಲೀಸರು ತನಿಖೆ ಚುರುಕುಗೊಳಿಸಿದ ಬಳಿಕ ಅಸಲಿ ಸಂಗತಿ ಬಯಲಾಗಿತ್ತು. ಜೂನ್ 11ರಂದು ಪ್ರಕರಣ ಸಂಬಂಧ ನಟ ದರ್ಶನ್ ಬಂಧಿಸಲಾಗಿತ್ತು. ಮೈಸೂರಿನಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು.
ದರ್ಶನ್ ಬಳಿಕ ಪ್ರಕರಣದಲ್ಲಿ ಪವಿತ್ರಾ ಗೌಡ ಸೇರಿ 17 ಜನರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಜೂನ್ 22ರಿಂದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಎಲ್ಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಗುತ್ತಿದೆ ಎಂದು ಗೊತ್ತಾದ ಬಳಿಕ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿತ್ತು. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಅಕ್ಟೋಬರ್ 30ರಂದು ಮಧ್ಯಂತರ ಜಾಮೀನು ಪಡೆದಿದ್ದರು.
ದರ್ಶನ್‌ಗೆ ಜಾಮೀನು ಸಿಕ್ಕಿದ್ದು ಆಪ್ತರು ಹಾಗೂ ಅಭಿಮಾನಿಗಳಿಗೆ ಸಂತಸ ತಂದಿತ್ತು. ಆದರೆ ಇಂತಾದೊಂದು ಗಂಭೀರ ಪ್ರಕರಣದಲ್ಲಿ ಇಷ್ಟು ಬೇಗ ಜಾಮೀನು ಸಿಕ್ಕರೆ ಹೆಂಗೆ? ತಪ್ಪು ಮಾಡಿದವರು ಇಷ್ಟು ಸುಲಭವಾಗಿ ತಪ್ಪಿಸಿಕೊಳ್ಳಬಹುದಾ? ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು.


Click it and Unblock the Notifications











