Toxic: ಕೆವಿಎನ್ ಸಂಸ್ಥೆಗೆ ಹೈಕೋರ್ಟ್ ನೋಟಿಸ್; 'ಟಾಕ್ಸಿಕ್' ಚಿತ್ರೀಕರಣಕ್ಕೆ ಆರಂಭದಲ್ಲೇ ವಿಘ್ನ?
ಗೀತು ಮೋಹನ್ ದಾಸ್ ನಿರ್ದೇಶನ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'KGF-2' ಬಳಿಕ ಯಶ್ ನಟನೆಯ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಕುತೂಹಲ ಮೂಡಿದೆ. ಈಗಾಗಲೇ ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಆರಂಭಿಸಲಾಗಿದೆ.
ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ 'ಟಾಕ್ಸಿಕ್' ಚಿತ್ರದ ಚಿತ್ರೀಕರಣಕ್ಕೆ ಸೆಟ್ ಹಾಕಲಾಗಿದೆ. ಭಾರೀ ವೆಚ್ಚದಲ್ಲಿ ಬಹಳ ಅದ್ಧೂರಿ ಸೆಟ್ ನಿರ್ಮಾಣವಾಗಿದೆ. ಬೆಂಗಳೂರಿನ ಹೊರ ವಲಯದ ಪೀಣ್ಯ ಪ್ಲಾಂಟೇಷನ್ 20.07 ಎಕರೆ ಜಾಗದಲ್ಲಿ ಸೆಟ್ ಎದ್ದು ನಿಂತಿದೆ. ಆದರೆ ಅರಣ್ಯ ಭೂಮಿಯಲ್ಲಿ ಸೆಟ್ ನಿರ್ಮಿಸಿದ್ದಾರೆ ಎಂದು ಆರೋಪಿಸಿ ವಕೀಲ ಜಿ. ಬಾಲಾಜಿ ನಾಯ್ಡು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅರಣ್ಯ ಭೂಮಿಯಲ್ಲಿ ಸೆಟ್ ಹಾಕಿದ್ದಾರೆ ಎಂದು ಸಾರ್ಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಈ ಅರ್ಜಿ ಸಂಬಂಧ ಈಗಾಗಲೇ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗೆ ಹೈಕೋರ್ಟ್ ನೋಟಿಸ್ ನೀಡಿದೆ. ಸೆಟ್ ನಿರ್ಮಾಣಕ್ಕೆ ಅವಕಾಶ ಕೊಟ್ಟ ಸರ್ಕಾರ ಹಾಗೂ ಹೆಚ್ಎಂಟಿ ಕಂಪನಿಗೂ ನೋಟಿಸ್ ಜಾರಿಯಾಗಿದೆ.
ಅರಣ್ಯ ಭೂಮಿಯಲ್ಲಿ ಅನಧಿಕೃತವಾಗಿ ಸಿನಿಮಾ ಚಿತ್ರೀಕರಣಕ್ಕೆ ಸೆಟ್ ನಿರ್ಮಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ವಕೀಲರಾದ ಜಿ. ಬಾಲಾಜಿ ನಾಯ್ಡು ಕೂಡಲೇ ಸೆಟ್ ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಪಿಐಎಲ್ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ಪೀಠದಿಂದ ನೋಟಿಸ್ ಜಾರಿ ಮಾಡಿದೆ. ಅರ್ಜಿ ವಿಚಾರಣೆ ಆಗಸ್ಟ್ 19ಕ್ಕೆ ಮುಂದೂಡಲಾಗಿದೆ.

ಹೆಚ್‌ಎಂಟಿ ಕಂಪನಿ ಸ್ಥಗಿತಗೊಂಡಿರುವುದರಿಂದ ಆ ಭೂಮಿಯನ್ನು ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಿದೆ ಎನ್ನಲಾಗ್ತಿದೆ. ಕೆವಿಎನ್ ಸಂಸ್ಥೆಗೆ ಕೆನರಾ ಬ್ಯಾಂಕ್ ಜಾಗವನ್ನು ಸೆಟ್ ಹಾಕಲು ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಆದರೆ ಭೂಮಿ ಮೂಲತಃ ಅರಣ್ಯ ಭೂಮಿ ಅರ್ಜಿದಾರರು ತಮ್ಮ ಪಿಐಎಲ್‌ನಲ್ಲಿ ತಿಳಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ಚಿತ್ರ ನಿರ್ಮಾಣಕ್ಕೆ ಯಶ್ ಅಂಡ್ ಟೀಂ ಮುಂದಾಗಿದೆ. ಅದಕ್ಕೆ ತಕ್ಕಂತೆ ಮೇಕಿಂಗ್ ಪ್ಲ್ಯಾನ್ ಮಾಡಲಾಗಿದೆ. ದೇಶ ವಿದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ 60, 70ರ ದಶಕದ ಕಥೆ ಹೇಳಲಾಗುತ್ತಿದೆ. ಇನ್ನು ಡ್ರಗ್ಸ್ ಮಾಫಿಯಾ ಸಬ್ಜೆಕ್ಟ್ ಚಿತ್ರದಲ್ಲಿದ್ದು ಯಶ್ ಡಾನ್ ಆಗಿ ನಟಿಸುತ್ತಾರೆ ಎನ್ನಲಾಗ್ತಿದೆ.
ಕಥೆಗೆ ತಕ್ಕಂತೆ ದೊಡ್ಡ ಸಿಟಿಯ ಸೆಟ್ ಹಾಕಲಾಗಿದ್ದು ಅದಕ್ಕಾಗಿ ನೂರಾರು ಕಾರ್ಮಿಕರು ಹಗಳಿರುಳು ಶ್ರಮಿಸಿದ್ದಾರೆ. ಅಂದಾಜು 160 ಕೋಟಿ ರೂ. ವೆಚ್ಚದಲ್ಲಿ 'ಟಾಕ್ಸಿಕ್' ಸಿನಿಮಾ ಮೂಡಿ ಬರ್ತಿದೆ. ನಯನತಾರಾ, ಕೈರಾ ಅದ್ವಾನಿ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.
'ಟಾಕ್ಸಿಕ್' ಚಿತ್ರವನ್ನು ಭಾರತದ ಭಾಷೆಗಳಲ್ಲಿ ಮಾತ್ರವಲ್ಲದೇ ವಿದೇಶಿ ಭಾಷೆಗಳಲ್ಲಿ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನಗಳು ನಡೀತಿದೆ. ಲಂಡನ್, ಶ್ರೀಲಂಕಾದಲ್ಲಿ ಕೂಡ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ. ಮೊದಲಿಗೆ ಬೆಂಗಳೂರಿನಲ್ಲಿ ಸೆಟ್ ಹಾಕಿ ಒಂದಷ್ಟು ಸನ್ನಿವೇಶಗಳನ್ನು ಶೂಟ್ ಮಾಡಲು ಚಿತ್ರತಂಡ ಮುಂದಾಗಿತ್ತು. ಅದಕ್ಕಾಗಿ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಸೆಟ್ ಹಾಕಲಾಗಿದೆ.


Click it and Unblock the Notifications











