ರಾಗಿಣಿ ಬದುಕಿನಲ್ಲಿ ಸಂ'ಕ್ರಾಂತಿ', ಕೊನೆಗೂ ಕಳಂಕದಿಂದ ಮುಕ್ತರಾದ ತುಪ್ಪದ ಬೆಡಗಿ..!
ಅದು 2020- 2021ರ ಆಸು ಪಾಸು. ಕನ್ನಡ ಚಿತ್ರರಂಗಕ್ಕೆ ಗರ ಬಡೆದಿತ್ತು. ಮಾದಕ ಮಾಯಾಜಾಲದಲ್ಲಿ ಗಂಧದ ಗುಡಿ ಸಿಲುಕಿತ್ತು. ಆ ಕಾಲಕ್ಕೆ ವಿಪರೀತ ಸದ್ದು ಮಾಡಿದ್ದ ಪ್ರಕರಣ ಇದು. ಆಂಕರ್ ಅನುಶ್ರೀ ಅವರಿಂದ ಹಿಡಿದು ದೂದ್ ಪೇಡಾ ದಿಗಂತ್‌ವರೆಗೆ ಎಲ್ಲರು ಸರತಿ ಸಾಲಿನಲ್ಲಿ ಬಂದು ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯನ್ನೇದುರಿಸಿ ಮನೆ ಸೇರಿದ್ದರು.
ಆದರೆ. ಪರಭಾಷೆಯಿಂದ ಕನ್ನಡ ಚಿತ್ರರಂಗಕ್ಕೆ ವಲಸೆ ಬಂದ ಇಬ್ಬರು ನಾಯಕಿಯರ ನಸೀಬು ಕೆಟ್ಟಿತ್ತು. ಜೈಲು ಇಬ್ಬರನ್ನೂ ಕೈ ಬೀಸಿ ಕರೆದಿತ್ತು. ಆ ಇಬ್ಬರು ಬೇರೆ ಯಾರು ಅಲ್ಲ ಬದಲಿಗೆ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿ. ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಹೆಚ್ಚು ಕಡಿಮೆ 140 ದಿನಗಳ ಕಾಲ ರಾಗಿಣಿ ಪಡಬಾರದ ಕಷ್ಟ ಪಟ್ಟರು. ಮನದೊಳಗೆ ಬಿಕ್ಕಿದ್ದರು. ತನ್ನದೇನು ತಪ್ಪಿಲ್ಲ ಯಾವ ಡ್ರಗ್ಸ್‌ನ್ನು ಕೂಡ ತಾವು ಸೇವಿಸಿಲ್ಲ ಎಂದು ಅಲವತ್ತುಕೊಂಡರು.

ಆದರೆ, ರಾಗಿಣಿ ಅವರ ಈ ಮಾತುಗಳನ್ನು ಆಗ ಯಾರೆಂದರೆ ಯಾರು ಕೇಳಲಿಲ್ಲ. ಕನ್ನಡ ಚಿತ್ರರಂಗದವರೇ ರಾಗಿಣಿಯನ್ನು ನಂಬಲಿಲ್ಲ. ಬದಲಿಗೆ ಬೆಂಕಿ ಇರದೆ ಹೊಗೆಯಾಡುತ್ತಾ ಎನ್ನುವ ಪ್ರಶ್ನೆ ಮಾಡಿದರು. ಅನುಮಾನದ ದೃಷ್ಟಿಯಿಂದ ನೋಡಿ ಕೊನೆ ಕೊನೆಗೆ ರಾಗಿಣಿಗೆ ಅವಮಾನವಾಗುವಂತೆ ಕೂಡ ಮಾತನಾಡಿದರು. ಆದರೆ ಈಗ ಇವರೆಲ್ಲರಿಗೆ ಮುಖಭಂಗವಾಗಿದೆ. ರಾಗಿಣಿ ಅವರದ್ದು ಯಾವುದೇ ತಪ್ಪಿಲ್ಲ ಅವರು ಯಾವ ಡ್ರಗ್ಸ್‌ನ್ನೂ ತೆಗೆದುಕೊಂಡಿಲ್ಲ ಎನ್ನುವುದು ನ್ಯಾಯಾಲಯದಲ್ಲಿಯೇ ರುಜುವಾತಾಗಿದೆ. ರಾಗಿಣಿ ವಿರುದ್ಧ ಇದ್ದ ಡ್ರಗ್ಸ್ ಪ್ರಕರಣವನ್ನು ನ್ಯಾಯಾಲಯ ರದ್ದು ಮಾಡಿದೆ. ಈ ಮೂಲಕ ರಾಗಿಣಿಗೆ ಬಿಗ್ ರಿಲೀಫ್ ನೀಡಿದೆ.
ಈ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದ ರಾಗಿಣಿ ದ್ವಿವೇದಿ ಮತ್ತು 4ನೇ ಆರೋಪಿಯಾಗಿದ್ದ ಪ್ರಶಾಂತ್ ರಾಂಕ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾ.ಹೇಮಂತ್ ಚಂದನ್ ಗೌಡರ್ ಅವರ ಏಕಸದಸ್ಯ ಪೀಠ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್ ರಾಂಕ ಪಾರ್ಟಿಯನ್ನು ಆಯೋಜಿಸಿದ್ದರು ಆ ಪಾರ್ಟಿಯಲ್ಲಿ ಮಾದಕ ವಸ್ತುಗಳನ್ನು ಸೇಲ್ ಮಾಡಿದ್ದರು ಎಂಬ ಆರೋಪ ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದೆ. ಭೌತಿಕ ಸಾಕ್ಷ್ಯಗಳನ್ನು ಸಲ್ಲಿಸದ ಕಾರಣ ಎಲ್ಲ ಪ್ರಕ್ರಿಯೆಗಳನ್ನು ಕರ್ನಾಟಕ ಹೈಕೋರ್ಟ್ ರದ್ದು ಪಡಿಸಿದೆ. ಸಹ ಆರೋಪಿಯ ಸ್ವಯಂ ಹೇಳಿಕೆ ಮತ್ತು ಆರೋಪ ಪಟ್ಟಿಯಲ್ಲಿನ ಸಾಕ್ಷಿಯನ್ನು ಪ್ರಾಸಿಕ್ಯೂಷನ್ ಆಧರಿಸಿದೆ ಎಂದು ಹೇಳಿರುವ ನ್ಯಾಯಾಲಯ ಅರ್ಜಿದಾರರ ವಿರುದ್ದ ಕ್ರಿಮಿನಲ್ ಪ್ರಕ್ರಿಯೆ ಮುಂದುವರೆಸುವುದು ಕಾನೂನಿನ ದುರ್ಬಳಕೆಯಾಗುತ್ತೆ ಎಂದು ಆದೇಶದಲ್ಲಿ ಹೇಳಿದೆ.
ಅಂದ್ಹಾಗೇ 2020ರಲ್ಲಿ ಕೊರೊನಾದಿಂದ ಜನ ಕಂಗಾಲಾದ ಸಮಯದಲ್ಲಿ ರಾಗಿಣಿ ಹಾಗೂ ಇತರರು ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪಾರ್ಟಿ ಆಯೋಜಿಸಿ, ಡ್ರಗ್ ಪೆಡ್ಲರ್‌ಗಳ ಮೂಲಕ ಅಲ್ಲಿಗೆ ಬರುವ ಉದ್ಯಮಿಗಳು, ನಟ-ನಟಿಯರು, ಸಾಫ್ಟ್‌ವೇರ್ ಉದ್ಯೋಗಿಗಳು ಸೇರಿ ಇತರರಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದಾರೆ ಎನ್ನುವ ಆರೋಪ ಮಾಡಲಾಗಿತ್ತು. ಈ ಮೂಲಕ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ ಎಂದು ಸಿಸಿಬಿಯ ಎಸಿಪಿ ಕೆ.ಸಿ.ಗೌತಮ್ ಅವರಿಂದ ಕಾಟನ್ ಪೇಟೆ ಠಾಣೆಯಲ್ಲಿ 2020ರ ಸೆ.4ರಂದು ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಶಿವಪ್ರಕಾಶ್, ರಾಗಿಣಿ ದ್ವಿವೇದಿ, ವೀರೇನ್ ಖನ್ನಾ, ಪ್ರಶಾಂತ್ ರಂಕ, ವೈಭವ್ ಜೈನ್, ಆದಿತ್ಯ ಆಳ್ವ, ಲೂಮ್ ಪೆಪ್ಪರ್, ಪ್ರಶಾಂತ್ ರಾಜು, ಅಶ್ವಿನ್, ಅಭಿಸ್ವಾಮಿ, ರಾಹುಲ್ ತೋನ್ಸೆ ಮತ್ತು ವಿನಯ್ ವಿರುದ್ಧ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಷೇಧ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಈ ಪ್ರಕರಣ ದಾಖಲಾಗಿ ನಾಲ್ಕು ವರ್ಷಗಳಾದರೂ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಈ ಹಿನ್ನೆಲೆ ನಟಿ ರಾಗಿಣಿ ಅವರು ಆರೋಪದಿಂದ ಮುಕ್ತರಾಗಿದ್ದಾರೆ. ಡ್ರಗ್ಸ್ ಕೇಸ್‌ನಿಂದ ಹೊರ ಬಂದಿದ್ದಾರೆ.


Click it and Unblock the Notifications











