ಸುಪ್ರೀಂ ಮೇಲ್ಮನವಿ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆ; ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಾರಾ ದರ್ಶನ್?
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆಂದು ದರ್ಶನ್ ಪರ ಹಿರಿಯ ವಕೀಲರಾದ ಸಿ. ವಿ. ನಾಗೇಶ್ ವಾದವನ್ನು ಮಂಡಿಸಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಒಂದಿಷ್ಟು ಷರತ್ತುಗಳನ್ನು ವಿಧಿಸಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದರು.
ಇದೇ ಬೆನ್ನಲ್ಲೇ ಪೊಲೀಸರು ದರ್ಶನ್ ಮಧ್ಯಂತ ಜಾಮೀನು ಅರ್ಜಿಯನ್ನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಸಂಬಂಧ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಚ್ಚರಿ ಮೂಡಿಸುವ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಬಳಿಕ ಮತ್ತೆ ದರ್ಶನ್ ಬಳಗದಲ್ಲಿ ಆತಂಕ ಶುರುವಾಗಿದೆ.

ದರ್ಶನ್ ಮಧ್ಯಂತರ ಜಾಮೀನು ರದ್ದು ಮಾಡಲು ಸುಪ್ರೀಂ ಕೋರ್ಟ್ ಮೊರೆ ಹೋಗಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಇದಕ್ಕೆ ಗೃಹ ಇಲಾಖೆಯ ಅನುಮತಿ ಬೇಕಿದೆ. ಈ ಸಂಬಂಧ ಇಂದು (ನವೆಂಬರ್ 13) ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಪ್ರಶ್ನೆ ಮಾಡಲಾಗಿತ್ತು. ಈ ಪ್ರಶ್ನೆಗಳಿಗೆ ಉತ್ತರಿಸಿದ ಗೃಹ ಸಚಿವ ಮೇಲ್ಮನವಿ ಸಲ್ಲಿಸುವುದಕ್ಕೆ ಯಾವುದೇ ರೀತಿಯ ವಿಳಂಬ ಆಗಿಲ್ಲ. ಆದರೆ, ಯಾವಾಗ ಸಲ್ಲಿಸಬೇಕು ಅನ್ನುವುದನ್ನು ಗೃಹ ಇಲಾಖೆಯ ಕಾರ್ಯದರ್ಶಿ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಆದರೆ, "ಮೇಲ್ಮನವಿಯನ್ನು ಸಲ್ಲಿಸುವುದಾದರೆ ಸಲ್ಲಿಸಿ ಎಂದು ನಾನೂ ಹೇಳಿದ್ದೇನೆ" ಎಂದು ಡಾ. ಜಿ ಪರಮೇಶ್ವರ್ ಹೇಳಿದ್ದು ಅಚ್ಚರಿ ಮೂಡಿಸಿದೆ. ಒಂದು ವೇಳೆ ಪೊಲೀಸರಿಗೆ ಅನುಮತಿ ಸಿಕ್ಕು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಮುಂದಾದರೆ, ದರ್ಶನ್ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಈ ಹೇಳಿಕೆ ಬಳಿಕ ರೇಣುಕಾಸ್ವಾಮಿ ಹತ್ಯೆ ಕೇಸ್ ದರ್ಶನ್‌ಗೆ ಮತ್ತಷ್ಟು ಕಠಿಣವಾಗುತ್ತಾ? ಅನ್ನೋ ಆತಂಕವಂತೂ ಮೂಡಿದೆ.
ದರ್ಶನ್‌ಗೆ ತೀವ್ರ ಬೆನ್ನು ನೋವು ಇದ್ದು, ಶಸ್ತ್ರ ಚಿಕಿತ್ಸೆ ಆಗಬೇಕು ಅನ್ನುವ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆಯಲಾಗಿತ್ತು. ಅಲ್ಲದೆ ನ್ಯಾಯಾಧೀಶರು ದರ್ಶನ್ ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದು. ಆದರೆ, ಅವರ ಆರೋಗ್ಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿ, ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು.

ಆದ್ರೀಗ ದರ್ಶನ್ ಶಸ್ತ್ರ ಚಿಕಿತ್ಸೆಗೆ ಒಪ್ಪುತ್ತಿಲ್ಲ ಅನ್ನುವ ಸುದ್ದಿ ಓಡಾಡುತ್ತಿದೆ. ದರ್ಶನ್ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಬಿಜಿಎಸ್ ಆಸ್ಪತ್ರೆಯ ವೈದ್ಯರು ಕಾಲಿನ ಸ್ಪರ್ಶ ಕಡಿಮೆ ಆಗಿದೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ದರ್ಶನ್ ಮಧ್ಯಂತರ ಜಾಮೀನು ಪ್ರಕರಣ ಮುಂದಿನ ದಿನಗಳಲ್ಲಿ ಜಟೀಲ ಆಗುವ ಸಾಧ್ಯತೆ ಹೆಚ್ಚಿದೆ. ದರ್ಶನ್ ಆರು ವಾರಗಳ ಜಾಮೀನು ಮುಗಿದ ಬಳಿಕ ಏನು ಮಾಡುತ್ತಾರೆ? ಅನಾರೋಗ್ಯ ಹಿನ್ನೆಲೆಯಲ್ಲಿ ಇನ್ನೂ ನಾಲ್ಕೈದು ತಿಂಗಳು ಜಾಮೀನು ಬೇಕೆಂದು ಮತ್ತೆ ಮನವಿ ಸಲ್ಲಿಸುತ್ತಾರಾ? ಸದ್ಯಕ್ಕೆ ಕುತೂಹಲ.
ಆದರೆ, ಪೊಲೀಸರಿಗೆ ಗೃಹ ಇಲಾಖೆಯಿಂದ ಅನುಮತಿ ಸಿಕ್ಕು ಮಧ್ಯಂತರ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ ಮುಂದೇನು? ಅಲ್ಲಿ ಮಧ್ಯಂತರ ಜಾಮೀನು ರದ್ದು ಮಾಡಿದರೆ ದರ್ಶನ್ ಮುಂದಿನ ನಡೆಯೇನು? ಈ ಎಲ್ಲಾ ಪ್ರಶ್ನೆಗಳು ಈಗ ದರ್ಶನ್ ಅಭಿಮಾನಿಗಳನ್ನು ಕಾಡುವುದಕ್ಕೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ, ಗೃಹ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಬಗ್ಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ಕುತೂಹಲ.


Click it and Unblock the Notifications











