ಕರ್ನಾಟಕಕ್ಕೆ ಬಂದರೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ-ಜೂ ಎನ್‌ಟಿಆರ್ ಕನ್ನಡ ಪ್ರೇಮ
ಒಂದು ಕಡೆ ಕನ್ನಡದವರಾಗಿ, ಕನ್ನಡದ ಅನ್ನವನ್ನು ತಿನ್ನುತ್ತಾ, ಕನ್ನಡದ ವಾತಾವರಣದಲ್ಲಿ ಬೆಳೆಯುವ ಅನೇಕರು ಕನ್ನಡ ಕಲಿಯಲು ಹಿಂದೇಟು ಹಾಕುತ್ತಾರೆ. ಕನ್ನಡ ಚಿತ್ರರಂಗದಿಂದನೇ ವೃತ್ತಿಯನ್ನು ಶುರು ಮಾಡಿ ಖ್ಯಾತಿಯ ಉತ್ತುಂಗಕ್ಕೇರಿದ ಹಲವರು ಕನ್ನಡ ಗೊತ್ತಿಲ್ಲ ಎನ್ನುತ್ತಾರೆ. ಇವರೆಲ್ಲರ ನಡುವೆ ಕಾಲ ಕಾಲಕ್ಕೆ ತಮ್ಮ ಕನ್ನಡಾಭಿಮಾನದ ಪ್ರದರ್ಶನವನ್ನು ಮಾಡುತ್ತಲೇ ಬಂದ ತೆಲುಗು ರಾಜ್ಯದ ತಾರಕ್ ಜ್ಯೂ.ಎನ್.ಟಿ.ಆರ್ ಇನ್ನೊಮ್ಮೆ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ. ಕನ್ನಡದ ಮಣ್ಣಿನಲ್ಲಿ ನಿಂತು ಕನ್ನಡವನ್ನು ಮಾತನಾಡಿದ್ದಾರೆ.
ಹೌದು, ಇಂದು (ಮಾರ್ಚ್ 8) ಬೆಂಗಳೂರಿನ ಮಹದೇವರಪುರದಲ್ಲಿರುವ ''ಕಿಮ್ಸ್ಆ'' ಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗಾಗಿ ಜೂ ಎನ್‌ಟಿಆರ್ ಬಂದಿದ್ದರು. ಇನ್ನೂ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಕಿಮ್ಸ್‌ಗೆ ಬೆಂಗಳೂರಿನಲ್ಲಿ ಮೊದಲ ಅಡಿಗಲ್ಲು ಹಾಕಿದ್ದೇ ನಂದಮೂರಿ ತಾರಕ ರಾಮರಾವ್. ಈ ಹಿನ್ನೆಲೆ ಕಿಮ್ಸ್ ಜೊತೆ ಅವಿನಾಭಾವ ಸಂಬಂಧ ಜ್ಯೂ.ಎನ್‌ಟಿಆರ್ ಗೆ ಇದೆ. ಈ ಬಂಧವೇ ಇಂದು (ಮಾರ್ಚ್ 8) ಇವರನ್ನು ಬೆಂಗಳೂರಿಗೆ ಕರೆತಂದಿತ್ತು.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಕರ್ನಾಟಕದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಕೆಲವು ತೆಲುಗು ಸ್ಟಾರ್ ಗಳಿಗೆ ಅಪಾರವಾದ ಅಭಿಮಾನಿಗಳಿದ್ದಾರೆ. ಆ ಪೈಕಿ ಜ್ಯೂ ಎನ್ ಟಿ ಆರ್ ಕೂಡ ಒಬ್ಬರು. ಈ ಹಿನ್ನೆಲೆ ಬೆಂಗಳೂರಿಗೆ ತಾರಕ್ ಬರುತ್ತಿರುವ ವಿಚಾರ ತಿಳಿದ ಅಭಿಮಾನಿಗಳು ಇಂದು (ಮಾರ್ಚ್ 8) ಸಾಗರೋಪಾದಿಯಲ್ಲಿ ಜಮಾಯಿಸಿದ್ದರು.
ಅಭಿಮಾನಿಗಳ ಅಭಿಮಾನದ ಜಾತ್ರೆಯನ್ನು ಕಂಡು ಅಲ್ಲಿದ್ದ ಪೊಲೀಸರು ಕೂಡ ಅರೆಕ್ಷಣ ಅವಕ್ಕಾದರು. ಜನ ಸಮೂಹ ನಿಯಂತ್ರಿಸಲು ಸಾಧ್ಯವಾಗದೇ ಲಾಠಿ ಪ್ರಹಾರವನ್ನು ಕೂಡ ಮಾಡಿದರು. ಹೀಗೆ ಅಭಿಮಾನಿಗಳ ಅಭಿಮಾನದ ಮಳೆಯಲ್ಲಿ ಮಿಂದೆದ್ದ ಜ್ಯೂ ಎನ್‌ಟಿಆರ್ ಆ ನಂತರ ತಮ್ಮ ಕನ್ನಡಾಭಿಮಾನದ ಪ್ರದರ್ಶನವನ್ನು ಮಾಡಿದರು. ಕನ್ನಡದಲ್ಲಿಯೇ ಭಾಷಣವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಜ್ಯೂ ಎನ್‌ಟಿಆರ್, ನನಗೆ ಕರ್ನಾಟಕಕ್ಕೆ ಬರುವುದೆಂದರೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತದೆ ಎಂದು ಹೇಳಿದರು. ನನ್ನ ತಾಯಿಯದ್ದು ಕುಂದಾಪುರ. ನನ್ನ ತಾಯಿ ಭಾಷೆ ಕನ್ನಡ. ಹಾಗಾಗಿ ಕರ್ನಾಟಕಕ್ಕೆ ಬರುವುದೆಂದರೆ ನನಗೆ ವಿಶೇಷ ಪ್ರೀತಿ ಎಂದು ಹೇಳಿದ ತಾರಕ್ ರಜೆಯ ಮಜಾ ಕಳೆಯಲು ಮಕ್ಕಳು ಊರಿಗೆ ಬಂದಂತಹ ಅನುಭವವಾಗುತ್ತದೆ. ಈ ಕಾರಣಕ್ಕಾಗಿಯೇ ಕರ್ನಾಟಕ ನನಗೆ ಯಾವಾಗಲೂ ತುಂಬಾ ಸ್ಪೆಷಲ್ ಎಂದು ಹೇಳಿದರು.
ಇದೇ ವೇಳೆ ಕಿಮ್ಸ್‌ನ ಸೇವೆಯನ್ನು ಕೂಡ ಕೊಂಡಾಡಿದ ಜ್ಯೂಎನ್‌ಟಿಆರ್ ''ಪೇಷೆಂಟ್ ಈಸ್ ಪ್ಯಾರಾಮೌಂಟ್'' ಎಂಬ ಧ್ಯೇಯ ವಾಕ್ಯದೊಂದಿಗೆ ಕಿಮ್ಸ್ನವರು ಸಲ್ಲಿಸುತ್ತಿರುವ ಸೇವೆಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ ಎಂದು ಹೇಳಿದರು. ಈ ಉದ್ಯಮದಲ್ಲಿ ಕಿಮ್ಸ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಇದೇ ಸಮಯದಲ್ಲಿ ಮಹಿಳಾ ದಿನಾಚರಣೆ ಬಗ್ಗೆ ಕೂಡ ಮಾತನಾಡಿದ ಜ್ಯೂ ಎನ್‌ಟಿಆರ್, ಮಹಿಳೆಯರನ್ನು ಹೇಗೆ ನೋಡಬೇಕು, ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಪದೇ ಪದೇ ನೆನಪು ಮಾಡಿಸುವ ಪರಿಸ್ಥಿತಿ ಇಂದು ಬಂದಿರುವುದು ಬೇಸರದ ವಿಷಯ ಎಂದು ಹೇಳಿದರು. ಮಹಿಳೆಯರಿಗೆ ಕೊಡಬೇಕಾದ ಗೌರವದ ಪಾಠ ಮನೆಯಿಂದಲೇ ಪ್ರಾರಂಭ ಆಗಬೇಕು, ನನ್ನ ಇಬ್ಬರು ಗಂಡು ಮಕ್ಕಳು ಸಹ ಹೆಣ್ಣು ಮಕ್ಕಳನ್ನು ಗೌರವಿಸುವ ವ್ಯಕ್ತಿಗಳಾಗಿಯೇ ಬೆಳೆಯಲಿದ್ದಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ಹೇಳಿದರು.
ಕೊನೆಯಲ್ಲಿ ಅಭಿಮಾನಿಗಳ ಅಭಿಮಾನಕ್ಕೆ ಕೂಡ ಬೆಲೆ ಕಟ್ಟಲು ಸಾಧ್ಯ ಇಲ್ಲ ಎಂದು ಹೇಳಿದ ಜ್ಯೂ ಎನ್‌ಟಿಆರ್, ನಾನೇ ಅದೃಷ್ಟವಂತ ಎಂದು ಹೇಳಿದರು. ನಿಮ್ಮ ಈ ಪ್ರೀತಿಗೆ ಜೀವನ ಪರ್ಯಂತ ಋಣಿಯಾಗಿರುತ್ತೇನೆ ಎಂದು ಹೇಳಿದರು.
ಸದ್ಯ ಜ್ಯೂಎನ್‌ಟಿಆರ್ ಬೆಂಗಳೂರಿಗೆ ಬಂದಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಜ್ಯೂ ಎನ್‌ಟಿಆರ್ ಅವರ ಕನ್ನಡ ಪ್ರೇಮ ಮತ್ತು ಅಭಿಮಾನಕ್ಕೆ ಮೆಚ್ಚುಗೆಯ ಮಹಾಪೂರ ಕೂಡ ಹರಿದು ಬರುತ್ತಿದೆ.


Click it and Unblock the Notifications











