ಬಾಯ್ಕಾಟ್ ಫೋನ್‌ಪೇ ಅಭಿಯಾನ; ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ
ಕರ್ನಾಟಕದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಮಸೂದೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ. ಕೆಲ ಖಾಸಗಿ ಕಂಪನೆಗಳು ಸರ್ಕಾರ ಈ ನಡೆಗೆ ವಿರೋಧ ವ್ಯಕ್ತಪಡಿಸಿವೆ.
ಕನ್ನಡಿಗರಿಗೆ ಮೀಸಲಾತಿ ಕುರಿತು ಫೋನ್ ಪೇ ಕಂಪನಿಯ ಸಿಇಒ ಸಮೀರ್ ನಿಗಮ್ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೆ 'ಫೋನ್ ಪೇ' ಬಾಯ್ಕಾಟ್ ಅಭಿಯಾನ ಆರಂಭವಾಗಿದೆ. ಹಲವರು ತಮ್ಮ ಫೋನ್‌ನಲ್ಲಿದ್ದ 'ಫೋನ್ ಪೇ' ಆಪ್ ಅನ್‌ಇನ್‌ಸ್ಟಾಲ್ ಮಾಡುತ್ತಿದ್ದಾರೆ. ಕನ್ನಡಿಗರ ಪರ, ಕನ್ನಡಿಗರ ಅಭಿಯಾನಕ್ಕೆ ಕಿಚ್ಚ ಸುದೀಪ್ ಸಾಥ್ ನೀಡುತ್ತಾರೆ ಎನ್ನಲಾಗ್ತಿದೆ.

ನಟ ಸುದೀಪ್ ಕೆಲ ದಿನಗಳಿಂದ 'ಫೋನ್ ಪೇ' ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಆಪ್ ಮೂಲಕ ಹಣ ವರ್ಗಾವಣೆ ಮಾಡಿದ್ದಾಗ ಸ್ಮಾರ್ಟ್ ಸ್ಪೀಕರ್‌ಗಳಲ್ಲಿ ಸುದೀಪ್ ಧ್ವನಿ ಕೇಳುತ್ತದೆ. ಫೋನ್ ಪೇ ಕಂಪನಿಯ ಸಿಇಒ ಸಮೀರ್ ನಿಗಮ್ತಮ್ಮ ಹೇಳಿಕೆ ವಾಪಸ್ ಪಡೆಯದಿದ್ದರೆ ಸುದೀಪ್ ಅಂಬಾಸಿಡರ್ ಆಗಿ ಮುಂದುವರೆಯದಿರಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಫೋನ್ ಪೇ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಟ ಸುದೀಪ್ ನಡೆ ಏನು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿತ್ತು. ನಟ ಸುದೀಪ್ ನಾಡು-ನುಡಿಯ ವಿಚಾರ ಬಂದಾಗ ಸದಾ ಮುಂದಿರುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. "ಕಂಪನಿ, ಹಣಕ್ಕಿಂತಾ ಕನ್ನಡಿಗನಾಗಿ ನನ್ನ ಸ್ವಾಭಿಮಾನ ಮುಖ್ಯ" ಎನ್ನುವುದು ಸುದೀಪ್ ನಿರ್ಧಾರ ಎನ್ನಲಾಗ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಕಿಚ್ಚ ತಮ್ಮ ನಿಲುವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.
ಇನ್ನು ಬಲ್ಲ ಮೂಲಗಳ ಮಾಹಿತಿ ಪ್ರಕಾರ, ನನಗೆ ದುಡ್ಡು ಅಥವಾ ಸಂಸ್ಥೆ ಮುಖ್ಯವಲ್ಲ.. ನನಗೆ ಕನ್ನಡದ ನೆಲ, ಜಲ, ಜನ ಮುಖ್ಯ ಎಂದು ಕಿಚ್ಚ ಗುಡುಗಿದ್ದಾರಂತೆ. ಕನ್ನಡ ಪರ ಹೋರಾಟಕ್ಕೆ ನಾನು ಸದಾ ಸಿದ್ಧ. 2023-24 ರಿಂದ 10 ವರ್ಷಕ್ಕೆ ಆಗಿರುವ ಅಗ್ರೀಮೆಂಟ್ ಅನ್ನೂ ಕ್ಯಾನ್ಸಲ್ ಮಾಡಿಕೊಂಡು ಹೊರ ಬರಲು ನಟ ಸುದೀಪ್ ಸಿದ್ಧರಾಗಿದ್ದಾರೆ ಎನ್ನಲಾಗ್ತಿದೆ.

ಸಮೀರ್ ಟ್ವೀಟ್‌ನಲ್ಲಿ ಏನಿದೆ?
"ನನಗೆ 46 ವರ್ಷ. 15ಕ್ಕಿಂತ ಅಧಿಕ ವರ್ಷ ಯಾವುದೇ ರಾಜ್ಯದಲ್ಲಿ ವಾಸಿಸಿಲ್ಲ. ನನ್ನ ತಂದೆ ಭಾರತೀಯ ನೌಕಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದಾದ್ಯಂತ ಹಲವು ಕಡೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪೆನಿಗಳನ್ನು ಸ್ಥಾಪಿಸಿದ್ದೇನೆ. 25 ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸವನ್ನು ನೀಡಿದ್ದೇನೆ. ನನ್ನ ಮಕ್ಕಳು ತವರು ನೆಲದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಇದು ನಾಚಿಕೆಗೇಡುತನ" ಎಂದು ಬರೆದುಕೊಂಡಿದ್ದರು.
ನಟ ಸುದೀಪ್ ಸದ್ಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗೆ ಬಂದಿದ್ದ ಟೀಸರ್ ಹಿಟ್ ಆಗಿತ್ತು. ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದ್ದು ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದಾರೆ. 'ಮ್ಯಾಕ್ಸ್' ಬಳಿಕ ಸುದೀಪ್ ತಮಿಳಿನ ಚೇರನ್ ನಿರ್ದೇಶನದಲ್ಲಿ ನಟಿಸೋ ಸಾಧ್ಯತೆಯಿದೆ. ತಮ್ಮದೇ ನಿರ್ದೇಶನದಲ್ಲಿ ಒಂದು ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ.


Click it and Unblock the Notifications











