ವಿಮೆ ಹಣಕ್ಕಾಗಿ ತನ್ನಂತೆ ಇದ್ದ ವ್ಯಕ್ತಿ ಕೊಲೆ; ರಜನಿಕಾಂತ್ ಚಿತ್ರ ನೋಡಿ ಹಾಸನ ದಂಪತಿ ದುಷ್ಕೃತ್ಯ!
ನಮ್ಮ ಸುತ್ತಾಮುತ್ತಾ ಸಾಕಷ್ಟು ಸಿನಿಮೀಯ ಘಟನೆಗಳು ನಡೆಯುತ್ತವೆ. ನಿಜ ಜೀವನದಲ್ಲಿ ನಡೆಯುವ ಘಟನೆಗಳನ್ನೇ ಆಧರಿಸಿ ಸಿನಿಮಾ ಕಥೆಗಳನ್ನು ಹೆಣೆಯಲಾಗುತ್ತದೆ. ಅದೇ ರೀತಿ ಸಿನಿಮಾ ಶೈಲಿಯಲ್ಲೇ ಕೆಲವು ಘಟನೆಗಳು ನಡೆಯುತ್ತದೆ. ಸಿನಿಮಾದಿಂದ ಪ್ರೇರಣೆಗೊಂಡು ಕೆಲವರು ದುಷ್ಕೃತ್ಯ ಎಸಗುವುದು ಇದೆ.
ಕಳೆದ ವರ್ಷ ಹಾಸನದಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಚಲನ ಸೃಷ್ಟಿಸಿತ್ತು. ಆದರೆ ಅದು ನಿಜವಾಗಿ ಅಪಘಾತ ಪ್ರಕರಣವಾಗಿರಲಿಲ್ಲ. ಇನ್ಶುರೆನ್ಸ್ ಹಣಕ್ಕಾಗಿ ದಂಪತಿ ಮಾಡಿದ ಪ್ಲ್ಯಾನ್ ಆಗಿತ್ತು. ಅದಕ್ಕಾಗಿ ತನ್ನಂತೆಯೇ ಇದ್ದ ವ್ಯಕ್ತಿ ಒಬ್ಬರನ್ನು ಕೊಲೆ ಮಾಡಿ, ತಾನೇ ಸತ್ತಂತೆ ನಟಿಸಿ ಮುನಿಸ್ವಾಮಿ ಗೌಡ ಎಂಬಾತ ಇನ್ಶುರೆನ್ಸ್ ಹಣ ಪಡೆಯುವ ನಾಟಕ ಮಾಡಿದ್ದ. ಈ ಪ್ರಯತ್ನದಲ್ಲಿ ದಂಪತಿ ಭಾಗಶಃ ಯಶಸ್ವಿ ಕೂಡ ಆಗಿದ್ದರು. ಆದರೆ ಪೊಲೀಸು ಹೆಚ್ಚಿನ ತನಿಖೆ ನಡೆಸಿದ ಬಳಿಕ ಅಸಲಿ ಸಂಗತಿ ಬೆಳಕಿಗೆ ಬಂದಿತ್ತು.

ರಜನಿಕಾಂತ್ ನಟನೆಯ ಸಿನಿಮಾ ನೋಡಿ ಮುನಿಸ್ವಾಮಿ ಗೌಡ ಇಂತಾದೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದು ಬಯಲಾಗಿದೆ. ಸಾಲದ ಸುಳಿಗೆ ಸಿಲುಕಿದ್ದ ಮುನಿಸ್ವಾಮಿ ಗೌಡ ಅದರಿಂದ ಹೊರ ಬರಲು ಒಂದು ದೊಡ್ಡ ಸಂಚು ರೂಪಿಸಿ ಕೊನೆಗೆ ಸಿಕ್ಕಿಬಿದ್ದಿದ್ದ.
ಏನಿದು ಪ್ರಕರಣ?
ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಸ್ವಾಮಿಗೌಡ, ಆತನ ಪತ್ನಿ ಶಿಲ್ಪಾರಾಣಿ, ಲಾರಿ ಚಾಲಕ ದೇವೇಂದ್ರ ನಾಯಕ್, ಸುರೇಶ್, ವಸಂತ್ ಈ ಸಂಚು ರೂಪಿಸಿದ್ದು ತನಿಖೆ ವೇಳೆ ತಿಳಿದು ಬಂದಿದೆ.

ಏನಿದು ಪ್ರಕರಣ?
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ವ್ಯಾಪ್ತಿಯಲ್ಲಿ, ಅಪಘಾತ ಎಂದು ಬಿಂಬಿಸಿ ವಿಮೆ ಪಡೆಯಲು ಮುನಿಸ್ವಾಮಿ ಹಾಗೂ ಶಿಲ್ಪಾ ರಾಣಿ ಎಂಬ ದಂಪತಿ ಸಂಚು ರೂಪಿಸಿದ್ದರು. ಅದಕ್ಕಾಗಿ ತನ್ನ ತದ್ರೂಪಿ ವ್ಯಕ್ತಿಯೊಬ್ಬನನ್ನು ಕೊಂದು ಮುನಿಸ್ವಾಮಿ ತಾನೇ ಸತ್ತಂತೆ ಬಿಂಬಿಸಿ 2 ಕೋಟಿ ರೂ. ವಿಮೆ ಹಣ ಪಡೆಯಲು ಯತ್ನಿಸಿದ್ದರು.
ತನ್ನಂತೆ ಇದ್ದ ಭಿಕ್ಷಕನೊಬ್ಬನನ್ನು ಮುನಿಸ್ವಾಮಿ ಲಾರಿ ಅಪಘಾತದಲ್ಲಿ ಕೊಲೆ ಮಾಡಿಸಿದ್ದರು. ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲರಹಳ್ಳಿ ಗೇಟ್ ಹತ್ತಿರ ಕಾರಿನ ಟೈರ್ ಬದಲಾಯಿಸುವಾಗ ಲಾರಿ ಗುದ್ದಿ ಸಾವು ಸಂಭವಿಸಿದೆ ಎಂದು ಒಂದು ದೂರು ದಾಖಲಾಗಿತ್ತು. ಅಪಘಾತದಲ್ಲಿ ಮೃತಪಟ್ಟಿರುವುದು ತನ್ನ ಗಂಡ ಮುನಿಸ್ವಾಮಿಗೌಡ ಎಂದು ಶಿಲ್ಪಾರಾಣಿ ಎಂಬ ಮಹಿಳೆ ದೂರು ನೀಡಿದ್ದಳು. ಇದು ನನ್ನ ಪತಿಯ ಶವ ಎಂದು ತೆಗದುಕೊಂಡು ಹೋಗಿ ಅಂತ್ಯಸಂಸ್ಕಾರ ಕೂಡ ಮಾಡಿ ಮುಗಿಸಿದ್ದಳು.
ಮೇಲ್ನೋಟಕ್ಕೆ ಮುನಿಸ್ವಾಮಿ ಪಂಚರ್ ಆಗಿದ್ದ ಕಾರಿನ ಟೈರ್ ಬದಲಿಸುವಾಗ ಲಾರಿ ಹರಿದು ಅಪಘಾತದಲ್ಲಿ ಸತ್ತಿದ್ದಾನೆ ಎಂದು ತಿಳಿದು ಬಂದಿತ್ತು. ಆದರೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದರು. ಮುಖ್ಯವಾಗಿ ಲಾರಿ ಚಾಲಕ ದೇವೇಂದ್ರನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಬೇರೊಬ್ಬ ವ್ಯಕ್ತಿಯನ್ನು ಅಪಘಾತ ನಡೆದಂತೆ ಹತ್ಯೆ ಮಾಡಿ ಮೃತದೇಹದ ಬಳಿಕ ಮುನಿಸ್ವಾಮಿ ಗೌಡನ ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿ ಇಟ್ಟು ನಂಬಿಸಲಾಗಿತ್ತು. ಆದರೆ ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಗಾಯದ ಗುರುತು ಇದ್ದಿದ್ದರಿಂದ ಪೊಲೀಸರಿಗೆ ಅನುಮಾನ ಬಂದಿತ್ತು.
ತನ್ನಂತೆ ಕಾಣುವ ಭಿಕ್ಷುಕನ್ನು ವಿಶ್ವಾಸಕ್ಕೆ ಪಡೆದು ಅಂದು ಅಪಘಾತದ ನಾಟಕವಾಡಿದ್ದ ಜಾಗಕ್ಕೆ ಮುನಿಸ್ವಾಮಿ ಕರೆದುಕೊಂಡು ಹೋಗಿದ್ದ. ಕಾರ್ ಪಂಚರ್ ಹಾಕುವಂತೆ ಹೇಳಿದ್ದ, ಅದೇ ಸಮಯದಲ್ಲಿ ಕುತ್ತಿಗೆಗೆ ಚೈನ್ ಹಾಕಿ ರಸ್ತೆ ಎಳೆದು ಬೀಳಿಸಿದ್ದ. ಪ್ಲ್ಯಾನ್ ಪ್ರಕಾರ ದೇವೇಂದ್ರ ನಾಯಕ್ ಲಾರಿಯನ್ನು ಭಿಕ್ಷುಕನ ಮೇಲೆ ಹರಿಸಿ ಕೊಲೆ ಮಾಡಿದ್ದರು. ಬಳಿಕ ಮುನಿಸ್ವಾಮಿ ತಲೆ ಮರೆಸಿಕೊಂಡಿದ್ದನು.
ಪ್ರಕರಣ ತನಿಖೆ ಏನಾಯ್ತು ಎಂದು ತಿಳಿದುಕೊಳ್ಳಲು ಅಜ್ಞಾತದಲ್ಲಿದ್ದ ಮುನಿಸ್ವಾಮಿ 10 ದಿನಗಳ ಬಳಿಕ ಹೊರಗೆ ಬಂದಿದ್ದ. ಈ ವೇಳೆ ಪ್ರಕರಣದ ಬಗ್ಗೆ ಗೊತ್ತಿದ್ದ ಸಿಪಿಐ ಶ್ರೀನಿವಾಸ್ ಎದುರು ಮುನಿಸ್ವಾಮಿ ಕಾಣಿಸಿಕೊಂಡಿದ್ದನು. ಮುನಿಸ್ವಾಮಿಯ ದೂರದ ಸಂಬಂಧಿಯಾಗಿದ್ದ ಶಿಡ್ಲಘಟ್ಟದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆತನ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗಿದ್ದರು. ಇನ್ಸ್‌ಪೆಕ್ಟರ್ ಸಹಾಯ ಪಡೆದು ಪ್ರಕರಣವನ್ನು ಬೇಗ ಮುಚ್ಚಿ ಹಾಕಲು ಮುನಿಸ್ವಾಮಿ ಗೌಡ ಭೇಟಿ ಮಾಡಲು ಹೋಗಿದ್ದ. ಬಳಿಕ ಅಸಲಿ ಸಂಗತಿ ತಿಳಿದು ಶ್ರೀನಿವಾಸ್ ಸಹಾಯದಿಂದ ಗಂಡಸಿ ಪೊಲೀಸರು ಮುನಿಸ್ವಾಮಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಅಸಲಿ ಸಂಗತಿ ಬಹಿರಂಗವಾಗಿದೆ.
ಹೊಸಕೋಟೆ ಬಳಿ ಮುನಿಸ್ವಾಮಿ ಗೌಡ ಟೈರ್ ಅಂಗಡಿಯನ್ನು ಹೊಂದಿದ್ದ. ಆದರೆ ಸ್ನೇಹಿತರ ಬಳಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಹೇಗಾದರೂ ಮಾಡಿ ಆ ಸಾಲದ ಶೂಲದಿಂದ ತಪ್ಪಿಸಿಕೊಳ್ಳಬೇಕು, ಅದಕ್ಕಾಗಿ ಭಾರೀ ಮೊತ್ತದ ಹಣ ಬೇಕು ಎಂದು ಈ ನಾಟಕ ಮಾಡಿದ್ದ. ತನ್ನ ಪತಿಯೇ ಸತ್ತಿದ್ದು ಎಂದು ಬಿಂಬಿಸಿ ಶಿಲ್ಪಾರಾಣಿ ಪ್ರಪಂಚವನ್ನು ನಂಬಿಸಿಬಿಟ್ಟಿದ್ದಳು. ಆದರೆ ಕೊನೆಗೆ ಅವರ ಲೆಕ್ಕಾಚಾರ ಎಲ್ಲಾ ಉಲ್ಟಾ ಆಗಿತ್ತು.
ತಲೈವಾ ಸಿನಿಮಾ ಸ್ಫೂರ್ತಿ
ರಜನಿಕಾಂತ್ ನಟನೆಯ ಸೂಪರ್ ಹಿಟ್ ಸಿನಿಮಾ 'ಶಿವಾಜಿ' ಸಿನಿಮಾ ಕಥೆ ಗೊತ್ತೇಯಿದೆ. ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ಕೊನೆ ಕೊನೆಗೆ ನಾಯಕ ಶಿವಾಜಿ ಆರುಮುಗಂ(ರಜನಿಕಾಂತ್) ತಾನು ಸತ್ತಂತೆ ಬಿಂಬಿಸಿ ಬಳಿಕ ಎಂ. ಜಿ ರಾಮಚಂದ್ರನ್ ಅವತಾರದಲ್ಲಿ ಬಂದು ವಿಲನ್‌ಗಳನ್ನು ಮಟ್ಟಹಾಕುವ ಕಥೆ ಚಿತ್ರದಲ್ಲಿದೆ. ಅದಕ್ಕಾಗಿ ಶಿವಾಜಿ ತಾನು ಸತ್ತಂತೆ ನಟಿಸುತ್ತಾನೆ. ಅದಕ್ಕೆ ಬೇಕಾದ ದಾಖಲೆಗಳನ್ನು ಸೃಷ್ಟಿಸುತ್ತಾನೆ. ತನ್ನನ್ನು ಹೋಲುವ ವ್ಯಕ್ತಿಯ ಶವವನ್ನು ಇಟ್ಟು ತಪ್ಪಿಸಿಕೊಳ್ಳುತ್ತಾನೆ. 2007ರಲ್ಲಿ ಬಂದಿದ್ದ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.
'ಶಿವಾಜಿ' ಚಿತ್ರದಿಂದಲೇ ಮುನಿಸ್ವಾಮಿ ಗೌಡ ಪ್ರೇರಣೆಗೊಂಡು ಈ ದುಷ್ಕೃತ್ಯ ಎಸಗಿರಬಹುದು ಎಂದು ಈಗ ಸುದ್ದಿ ಆಗುತ್ತಿದೆ. ಮಲಯಾಳಂನ 'ಕುರುಪ್' ಚಿತ್ರದಲ್ಲಿ ಇಂಥದ್ದೇ ಕಥೆ ಇದೆ. ಕೇರಳದಲ್ಲಿ ಸುಕುಮಾರ ಕುರುಪ್ ಎಂಬಾತ ವಿಮೆ ಹಣಕ್ಕಾಗಿ ತನ್ನನ್ನು ಹೋಲುವ ವ್ಯಕ್ತಿಯನ್ನು ಕೊಂದು ತಾನೇ ಸತ್ತಂತೆ ಪ್ರಪಂಚವನ್ನು ನಂಬಿಸಿದ್ದ. ಅದೇ ಘಟನೆ ಆಧರಿಸಿ ಆ ಸಿನಿಮಾ ಮಾಡಲಾಗಿತ್ತು.
6 ತಿಂಗಳಿಂದ ಮುನಿಸ್ವಾಮಿ ಗೌಡ ತನ್ನಂತೆ ಇರುವ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದನಂತೆ. ಬಳಿಕ ಭಿಕ್ಷುಕನನ್ನು ಆರಿಸಿಕೊಂಡಿದ್ದರು. ಆತನನ್ನು ತಮ್ಮ ಸಂಚಿನಂತೆ ಹತ್ಯೆ ಮಾಡಿದರೆ ತಪ್ಪಿಸಿಕೊಳ್ಳಬಹುದು ಎಂದು ಮುನಿಸ್ವಾಮಿ ಗೌಡ ಭಾವಿಸಿದ್ದ. ಎರಡು ತಿಂಗಳ ಕಾಲ ಆ ಭಿಕ್ಷುಕನ ಜೊತೆ ಸಂಪರ್ಕದಲ್ಲಿದ್ದರು.
ಇಬ್ಬರ ಬ್ಲಡ್ ಗ್ರೂಪ್ ಕೂಡ ಒಂದೇ ಆಗಿತ್ತು. ಹಾಗಾಗಿ ಪೋಸ್ಟ್‌ಮಾರ್ಟಂ ಮಾಡಿದಾಗಲೂ ಮೇಲ್ನೋಟಕ್ಕೆ ಯಾವುದೇ ಅನುಮಾನ ಬಂದಿರಲಿಲ್ಲ. ಇನ್ನು ಲಾರಿ ಡೈವರ್‌ಗೆ 5 ಲಕ್ಷ ರೂ. ಸುಪಾರಿ ನೀಡಿ ಮುನಿಸ್ವಾಮಿ ಗೌಡ ಒಪ್ಪಿಸಿದ್ದ. ಒಟ್ಟಾರೆ ತಾನು ಸತ್ತಂತೆ ನಟಿಸಿ, ತನ್ನ ಪತ್ನಿಗೆ ವಿಮೆ ಹಣ ಬಂದರೆ ಸಾಲ ತೀರಿಸಿ, ನೇಪಾಳ ಅಥವಾ ಉತ್ತರ ಭಾರತಕ್ಕೆ ಹೋಗಿ ಸೆಟ್ಲ್ ಆಗಬೇಕು ಎಂದು ಮುನಿಸ್ವಾಮಿ ಗೌಡನ ಪ್ಲ್ಯಾನ್ ಮಾಡಿದ್ದನು ಎಂದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದರು. ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದರು.
ಭಿಕ್ಷುಕನ ಗುರುತು ಪತ್ತೆ ಆಗಿಲ್ಲ
ಒಟ್ಟಾರೆ ಇಡೀ ಪ್ರಕರಣಕ್ಕೆ ತಾರ್ತಿಕ ಅಂತ್ಯ ಸಿಕ್ಕರೂ ಮೃತ ಭಿಕ್ಷುಕ ಯಾರು? ಆತ ಹಿನ್ನೆಲೆ ಏನು? ಎಂದು ಗೊತ್ತಾಗಿಲ್ಲ. ತನ್ನದಲ್ಲದ ತಪ್ಪಿಗೆ ಜೀವ ಬಿಟ್ಟ ಆ ಭಿಕ್ಷುಕನ ಗುರುತು ಇನ್ನು ಪತ್ತೆ ಆಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಆ ಭಿಕ್ಷುಕನ ಶವವನ್ನು ಹೂತು ಹಾಕಿ, ಮುನಿಸ್ವಾಮಿ ಹೆಸರು ಇರುವ ಸಮಾಧಿ ಕಲ್ಲನ್ನು ಹಾಕಲಾಗಿತ್ತು.


Click it and Unblock the Notifications











