Don't Miss!
- News
Morbi Bridge Collapse: ಗುಜರಾತ್ ಸೇತುವೆ ದುರಂತ: ನವೀಕರಣ ಸಂಸ್ಥೆಯ ಮುಖ್ಯಸ್ಥ ನ್ಯಾಯಾಲಯಕ್ಕೆ ಶರಣು!
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಚಾರಿ ವಿಜಯ್ ನಿಧನಕ್ಕೆ ಕಂಬನಿ ಮಿಡಿದ ರಾಜಕೀಯ ಗಣ್ಯರು
ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಗೆ ಸಿನಿಮಾ ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ವಿಜಯ್ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.
ಜೂನ್ 12ರಂದು ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಜಯ್ ತಲೆಗೆ ತೀವ್ರವಾದ ಏಟು ತಗುಲಿತ್ತು. ಬ್ರೈನ್ ಡೆಡ್ ಆಗಿದ್ದ ಕಾರಣ ವಿಜಯ್ ಬದುಕುಳಿಯುವುದು ಸಾಧ್ಯತೆ ಇರಲಿಲ್ಲ. ಕುಟುಂಬದವರು ವಿಜಯ್ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ವಿಜಯ್ ನಿಧನದಿಂದ ಇಡೀ ಚಿತ್ರರಂಗ ಶೋಕಸಾಗದಲ್ಲಿದೆ. ಸಿನಿ ಗಣ್ಯರು ಮಾತ್ರವಲ್ಲದೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ, ಸಚಿವ ಅರವಿಂದ್ ಲಿಂಬಾವಳಿ, ಡಿಸಿಎಂ ಅಶ್ವತ್ಥನಾರಾಯಣ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ
'ರಂಗಭೂಮಿ, ಸಿನಿಮಾ ರಂಗಗಳೆರಡರಲ್ಲೂ ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಭಗವಂತನು ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ಸಚಿವ ಅರವಿಂದ ಲಿಂಬಾವಳಿ
ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. 'ವಿಜಯ್ ತಮ್ಮ ಜೀವನ ಯಾನದ ಸಂಚಾರವನ್ನು ಅಪೂರ್ಣವಾಗಿಸಿ ಬದುಕು ತೊರೆದು ಹೋಗಿದ್ದಾರೆ. ಆದರೆ ಬದುಕಿನ ಸಂಚಾರದ ಹಾದಿಯಲ್ಲಿ ಅವರು ಅಂಗಾಂಗ ದಾನ ಮಾಡುವ ಮೂಲಕ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಇದು ಅತ್ಯಂತ ಭಾವನಾತ್ಮಕ, ಮನಮಿಡಿಯುವ ಸಂದರ್ಭ' ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಡಿಸಿಎಂ ಅಸ್ವತ್ಥ್ ನಾರಾಯಣ್
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. 'ಸಂಚಾರಿ ವಿಜಯ್ ಬದುಕಿ ಬರುತ್ತಾರೆ ಎಂಬ ವಿಶ್ವಾಸ ನಂಬಿಕೆ ನನಗಿತ್ತು. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಂತೆ ನಾನು ಕೂಡ ಪ್ರಾರ್ಥನೆ ಮಾಡಿದ್ದೆ. ಆದರೆ, ಎಲ್ಲರ ನಿರೀಕ್ಷೆ ಹುಸಿ ಮಾಡಿ ಅವರು ಅಗಲಿದ್ದಾರೆ. ಇದು ನನಗೆ ವೈಯಕ್ತಿಕವಾಗಿ ಬಹಳಷ್ಟು ದುಃಖ ಉಂಟು ಮಾಡಿದೆ. ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹಿರಿಮೆ ಅವರದ್ದು. ನಾನು ಅವನಲ್ಲ...ಅವಳು ಚಿತ್ರದಲ್ಲಿ ಅವರದ್ದು ಅಮೋಘ ನಟನೆ. ಅಷ್ಟೇ ಅಲ್ಲ ಅವರು ನಟಿಸಿದ ಎಲ್ಲ ಪಾತ್ರಗಳಲ್ಲೂ ಜೀವಿಸುತ್ತಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟ' ಎಂದಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ
'ವೈವಿಧ್ಯಮಯ ಪಾತ್ರಗಳ ಬೆನ್ನೇರಿ ಸಂಚರಿಸುತ್ತಿದ್ದ, ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ, ಅಪರೂಪದ ವ್ಯಕ್ತಿತ್ವದ ಸಂಚಾರಿ ವಿಜಯ್ ನಿರ್ಗಮನ ದುಃಖ ತರಿಸಿದೆ. ಶಂಕರ್ ನಾಗ್ ಇದ್ದಿದ್ದರೆ ಕನ್ನಡ ಚಿತ್ರರಂಗ ಮಹತ್ತರ ಸ್ಥಾನಕ್ಕೇರುತ್ತಿತ್ತು ಎಂದು ನಾವೆಲ್ಲ ಇಂದಿಗೂ ಬೇಸರಿಸಿಕೊಳ್ಳುತ್ತೇವೆ. ಭರವಸೆಯ ನಟ ವಿಜಯ್ ಕೂಡ ಅಂಥದ್ದೇ ನಿರಾಶೆ ಮೂಡಿಸಿಬಿಟ್ಟರು' ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ಧರಾಮಯ್ಯ
'ಪ್ರತಿಭೆ ಮತ್ತು ಮಾನವೀಯ ಗುಣ-ನಡತೆಗಳಿಂದ ಕಿರಿವಯಸ್ಸಿನಲ್ಲಿಯೇ ಎಲ್ಲರ ಮನಗೆದ್ದು ಮಿಂಚಿ ಮರೆಯಾದ ನಟ ಸಂಚಾರಿ ವಿಜಯ್ ಸಾವಿನಿಂದ ದುಃಖಿತನಾಗಿದ್ದೇನೆ. ವಿಜಯ್ ಕುಟುಂಬ ಮತ್ತು ಅಭಿಮಾನಿ ಬಳಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅಂಗಾಗದಾನದ ವಿಜಯ್ ಕುಟುಂಬದ ನಿರ್ಧಾರಕ್ಕೆ ನನ್ನ ನಮನಗಳು' ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.
Recommended Video

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
'ಸಂಚಾರಿ ವಿಜಯ್ ಅವರದು ಇನ್ನು ಚಿಕ್ಕ ವಯಸ್ಸು. ಈಗಷ್ಟೇ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಿದ್ದರು. ಯಾವುದೇ ಹಿನ್ನೆಲೆ ಬೆಂಬಲ ಇಲ್ಲದೆ, ತನ್ನ ಕಲೆ, ಪ್ರತಿಭೆ ಮೂಲಕ ಬೆಳೆಯುತ್ತಿದ್ದ ವಿಜಯ್ ಅವರ ಸಾವಿನ ಸುದ್ದಿ ಕೇಳಿ ನೋವಾಗಿದೆ' ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 'ಕೋವಿಡ್ ಸಂಕಷ್ಟದಲ್ಲಿ ತಮ್ಮ ಸ್ನೇಹಿತರ ಜತೆಗೂಡಿ ಬಡವರಿಗೆ ಆಹಾರ ಕಿಟ್ ನೀಡುವುದು, ಆಕ್ಸಿಜನ್ ಸರಬರಾಜು ಮಾಡುವುದು ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡಿ ಗಮನ ಸೆಳೆದಿದ್ದರು' ಎಂದು ಸ್ಮರಿಸಿದ್ದಾರೆ.