ಬೆದರಿಕೆ ಹಾಕಿದ್ದಾರೆ ಎಂದು ದರ್ಶನ್ ವಿರುದ್ಧ ದೂರು; ಕ್ಷಮೆ ಕೇಳಬೇಕು ಎಂದು ಆಗ್ರಹ
'ಕಾಟೇರ' ಸಿನಿಮಾ ಟೈಟಲ್ ವಿವಾದ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ 'ಕಾಟೇರ' ಕಥೆ ಬರೆಸಿದ್ದು ನಾನು, ಟೈಟಲ್ ಕೊಟ್ಟಿದ್ದು ನಾನು ಎಂದು ಹೇಳಿದ್ದರು. ಇದಕ್ಕೆ ನಟ ದರ್ಶನ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. 'ಕಾಟೇರ' 50 ದಿನಗಳ ಸಂಭ್ರಮಾಚರಣೆ ವೇದಿಕೆಯಲ್ಲಿ ಉಮಾಪತಿ ವಿರುದ್ಧ ದರ್ಶನ್ ಚಾಟಿ ಬೀಸಿದ್ದರು.
ದರ್ಶನ್ ಮಾತನಾಡಿ "ಕೆಲವರು ಕಥೆ ನಾನು ಮಾಡಿಸಿದೆ. ಟೈಟಲ್ ನಾನು ಕೊಟ್ಟೆ ಅಂತ ಹೇಳ್ತಾರೆ. ಅಯ್ಯೋ ತಗಡೇ. ನಿನಗೆ 'ರಾಬರ್ಟ್' ಕಥೆ ಕೊಟ್ಟದ್ದೇ ನಾವು. ಯಾಕಂದರೆ ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಇದೇ ರೀತಿ ಒಂದ್ಸಲ ಸಿಕ್ಕಿಹಾಕಿಕೊಂಡು ಹೇಳಿಸಿಕೊಂಡು ಬುದ್ದಿ ಕಲಿಯಲಿಲ್ಲ, ಅಂದ್ರೆ ನಾವು ಏನು ಹೇಳೋಣ. ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು?" ಎಂದಿದ್ದರು. ಇದೀಗ ದರ್ಶನ್ ಹೇಳಿಕೆ ಖಂಡಿಸಿ ಕರ್ನಾಟಕ ಪ್ರಜಾ ಪರವೇದಿಕೆ ಸಂಘಟನೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ನಟ ದರ್ಶನ್ 'ಗುಮ್ಮಿಸ್ಕೋತೀಯ' ಎಂದು ಬೆದರಿಕೆ ಹಾಕಿದ್ದಾರೆ. ಇದು ಕಾನೂನು ಬಾಹಿರ. ತಮ್ಮ ಹೇಳಿಕೆಗೆ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಳಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕರ್ನಾಟಕ ಪ್ರಜಾಪರ ವೇದಿಕೆ ಹಾಗೂ ನೂರಾರು ಕನ್ನಡಪರ ಸಂಘಟನೆಗಳುಳ್ಳ ಕನ್ನಡಿಗರ ಒಕ್ಕೂಟದಿಂದ ದರ್ಶನ್ ಮನೆಯ ಮುಂದೆ ಉಗ್ರ ಹೋರಾಟ ಮಾಡಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.
"ಸಾರ್ವಜನಿಕ ವೇದಿಕೆಯಲ್ಲಿ ನಿರ್ಮಾಪಕನಿಗೆ ತಗಡೇ, ಗುಮುಸ್ಕೊತಿಯ ಪದ ಬಳಸಿದ್ದು ತಪ್ಪು. ದರ್ಶನ್ ಯಾವ ಅಭಿಮಾನಿಗಳಿಗೆ ಮಾದರಿಯಾಗ್ತಾರೆ.. ದರ್ಶನ್ ಬಂಡವಾಳ ಗೊತ್ತಿದೆ ಸಾಕ್ಷಿ ಎಲ್ಲವೂ ಇದೆ. ಗುಮ್ಮುಸ್ಕೊತಿಯ ಅಂದ್ರೆ ಕೊಲೆ ಬೆದರಿಕೆಗೆ ಇದ್ದಂತೆ" ಎಂದು ಕರ್ನಾಟಕ ಪ್ರಜಾಪರ ವೇದಿಕೆಯ ರಾಜ್ಯಾಧ್ಯಕ್ಷ ಕನ್ನಡ ಶಫಿ ಹೇಳಿದ್ದಾರೆ.
ಇನ್ನು ದರ್ಶನ್ ಹೇಳಿಕೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸಹ ತಿರುಗೇಟು ನೀಡುತ್ತಾ ಬರುತ್ತಿದ್ದಾರೆ. "ದರ್ಶನ್ ಅವರಿಗೆ ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಾವೆಲ್ಲ ತಗಡುಗಳು ತಗಡುಗಳಾಗೇ ಇರಬೇಕಲ್ವಾ? ಎಂದು ಮರುಪ್ರಶ್ನೆ ಹಾಕಿದ್ದಾರೆ.

'ರಾಬರ್ಟ್' ಸಿನಿಮಾ ಕೂಡ ಅವರದ್ದೇ, ಕಥೆ ಕೊಟ್ಟವರು ಅವ್ರೇ. ಅವರೇ ದುಡ್ಡು ಹಾಕಿದ್ದು. ನಾನು ನಿರ್ಮಾಪಕನಾಗಿರಲಿಲ್ಲ, ಆ ಚಿತ್ರಕ್ಕೆ ನಾನು ಡಮ್ಮಿ ನಿರ್ಮಾಪಕ ಆಗಿದ್ದೆ ಎಂದು ವ್ಯಂಗ್ಯವಾಡಿದ್ದಾರೆ. ಅವರೆಲ್ಲ ದೊಡ್ಡ ವ್ಯಕ್ತಿಗಳು, ಮಾತನಾಡಿದ್ದಾರೆ, ಮಾತನಾಡಲಿ ಬಿಡಿ, 'ಕಾಟೇರ' ಟೈಟಲ್ ಯಾರ ಬ್ಯಾನರ್ ಅಲ್ಲಿ ರಿಜಿಸ್ಟರ್ ಆಯ್ತು ಎನ್ನುವುದು ವಾಣಿಜ್ಯ ಮಂಡಳಿಯಲ್ಲಿ ಮಾಹಿತಿ ಸಿಗುತ್ತದೆ.
'ಮದಗಜ' ಸಿನಿಮಾ ಟೈಟಲ್ ನಿರ್ಮಾಪಕ ರಾಮಮೂರ್ತಿ ಬಳಿ ಇತ್ತು, ನೀವು 'ಮದಗಜ' ಕೊಡಿ, ನಾನು 'ಕಾಟೇರ' ಕೊಡ್ತೀನಿ ಅನ್ನೋ ಒಪ್ಪಂದದ ಮೇಲೆ ಟೈಟಲ್ ಕೊಟ್ಟೆ' ಎಂದು ಉಮಾಪತಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಡಿಸೆಂಬರ್ 29ಕ್ಕೆ ತೆರೆಕಂಡಿತ್ತು. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಸದ್ಯ ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಿ ಸದ್ದು ಮಾಡುತ್ತಿದೆ. ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ಒಂದ್ಕಾಲದಲ್ಲಿ ಬಹಳ ಆತ್ಮೀಯರಾಗಿದ್ದರು. 25 ಕೋಟಿ ರೂ. ಲೋನ್ ಲಡಾಯಿ ಪ್ರಕರಣದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಬಳಿಕ ಒಬ್ಬರೂ ದೂರಾಗಿದ್ದರು.


Click it and Unblock the Notifications











