ಕನ್ನಡಿಗರ ಮೇಲೆ ಹಿಂದಿ ಹೇರಿಕೆ, ಕನ್ನಡದ ಪಾಠ ಮಾಡಿದ ನಿವೇದಿತಾ ಗೌಡ- ಮೊದಲು ನೀನು ಕನ್ನಡ ಕಲಿಯಮ್ಮ ಎಂದ ಜನ
ಒಂದು ಕಡೆ ಕನ್ನಡದವರಾಗಿ, ಕನ್ನಡದ ಅನ್ನವನ್ನು ತಿನ್ನುತ್ತಾ, ಕನ್ನಡದ ವಾತಾವರಣದಲ್ಲಿ ಬೆಳೆಯುವ ಅನೇಕರು ಕನ್ನಡ ಕಲಿಯಲು ಹಿಂದೇಟು ಹಾಕುತ್ತಾರೆ. ಕನ್ನಡ ಚಿತ್ರರಂಗದಿಂದನೇ ವೃತ್ತಿಯನ್ನು ಶುರು ಮಾಡಿ ಖ್ಯಾತಿಯ ಉತ್ತುಂಗಕ್ಕೇರಿದ ರಶ್ಮಿಕಾ ಮಂದಣ್ಣ ಸೇರಿ ಅನೇಕ ಕನ್ನಡತಿಯರು ಕನ್ನಡ ಗೊತ್ತಿಲ್ಲ ಎನ್ನುತ್ತಾರೆ. ಮತ್ತೂ ಕೆಲವರು ಕನ್ನಡ ಗೊತ್ತಿದ್ದರೂ ಕೂಡ ಮಾತನಾಡಲು ಕವಡೆ ಹಾಕುತ್ತಾರೆ. ಇನ್ನೂ ನಮ್ಮ ನೆಲದಲ್ಲಿ..
ಪರಭಾಷೆಯವರ ಹಾವಳಿ ಎಲ್ಲರಿಗೆ ಗೊತ್ತಿರುವಂತಹದ್ದೇ. ಅದೆಲ್ಲಿಂದಲೋ ಬಂದು ಕನ್ನಡಿಗರ ಮೇಲೆ ದರ್ಪ ತೋರಿಸುತ್ತಾರೆ. ಹಿಂದಿ ಹೇರಿಕೆ ಮಾಡುತ್ತಾರೆ. ಇವರೆಲ್ಲರಿಗೂ ನಿವೇದಿತಾ ಗೌಡ ಸದ್ಯ ಕನ್ನಡದ ಪಾಠ ಮಾಡಿದ್ದಾರೆ.

ಹೌದು. ಯಾರೇನೇ ಅಂದರು, ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ, ಕಾಲೆಳೆದರೂ... ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಉಫ್ ಎಂದು ಮುಂದೆ ಸಾಗುವ ಬಹುಮುಖ ಪ್ರತಿಭೆ ನಿವೇದಿತಾ ಗೌಡ ಚಿತ್ರವೊಂದನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು "ಮುದ್ದು ರಾಕ್ಷಸಿ". ಈ ಚಿತ್ರದ ಕಥಾನಾಯಕ ಬೇರೆ ಯಾರು ಅಲ್ಲ ಬದಲಿಗೆ ನಿವೇದಿತಾ ಗೌಡ ಅವರ ಮಾಜಿ ಪತಿ ಚಂದನ್ ಶೆಟ್ಟಿ ಎನ್ನುವುದು ವಿಶೇಷ.
ಸದ್ಯ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಚಿತ್ರತಂಡ ರಾಜ್ಯೋತ್ಸವದ ಪ್ರಯುಕ್ತ ಪ್ರಚಾರಕ್ಕೆ ಚಾಲನೆ ನೀಡಿದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಚಿತ್ರತಂಡ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಈ ವಿಡಿಯೋದಲ್ಲಿ ನಿವೇದಿತಾ ಗೌಡ ಹಿಂದಿವಾಲಾಗೆ ಕನ್ನಡದ ಪಾಠ ಮಾಡಿದ್ದಾರೆ.
ಕರ್ನಾಟಕ್ ಅಲ್ಲ ಕರ್ನಾಟಕ, ಕನ್ನಡ್ ಅಲ್ಲ ಕನ್ನಡ ಎಂದೆಲ್ಲಾ ಹಿಂದಿಯವನಿಗೆ ವಿಡಿಯೋದಲ್ಲಿ ತರಾಟೆಗೆ ತೆಗೆದುಕೊಂಡಿರುವ ನಿವೇದಿತಾ ಗೌಡ ತಮ್ಮ ಕನ್ಮಡಾಭಿಮಾನದ ಪ್ರದರ್ಶನವನ್ನು ಈ ಸಮಯದಲ್ಲಿ ಮಾಡಿದ್ದಾರೆ. ಆದರೆ. ಹಲವರಿಗೆ ನಿವೇದಿತಾ ಗೌಡ ಅವರ ಕನ್ನಡ ಪ್ರೇಮದ ಬಗ್ಗೆ ಹಲವರಲ್ಲಿ ಅನುಮಾನ ಇದೆ.
ಯಾಕೆಂದರೆ.. ಅಸಂಖ್ಯಾತರ ಬಾರ್ಬಿ ಡಾಲ್ ನಿವೇದಿತಾ ಗೌಡ ಈ ಹಿಂದೆ ಹಲವು ಇಂಗ್ಲಿಷ್ ಹಾಡುಗಳಿಗೆ ಹೆಚ್ಚೆಚ್ಚು ಹೆಜ್ಜೆ ಹಾಕಿದ್ದಾರೆ. ಇನ್ನು ಇಂಗ್ಲಿಷ್ ಹೊರತು ಪಡಿಸಿದರೆ ಪರಭಾಷೆಯ ಮೇಲಿರುವ ತಮ್ಮ ಪ್ರೀತಿಯನ್ನು ಕೂಡ ಇವರು ಹೊರ ಹಾಕಿದ್ದಾರೆ.

ನಿವೇದಿತಾ ಗೌಡ ಅವರ ಈ ನಡೆಯಿಂದ ಹಲವು ಬಾರಿ ಅನೇಕರು ಕನ್ನಡದ ಹಾಡುಗಳಿಗೆ ಡ್ಯಾನ್ಸ್ ಮಾಡುವಂತೆ ನಿವೇದಿತಾ ಅವರಲ್ಲಿ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ಆದರೂ ಕೂಡ ನಿವೇದಿತಾ ಗೌಡ ಈ ಬೇಡಿಕೆಗೆ ಮನವಿಗೆ ಮಣೆ ಹಾಕಿದ್ದು ಕಡಿಮೆಯೇ.
ಹೀಗಾಗಿ ಹಲವರು ಇವರ ಕನ್ನಡಾಭಿಮಾನವನ್ನು ಅನುಮಾನದಿಂದ ನೋಡುತ್ತಾರೆ. ಈಗಲೂ ಕೂಡ ನೋಡುತ್ತಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಸದ್ಯ ಹಲವರು ನಿವೇದಿತಾ ಅವರ ಈ ವಿಡಿಯೋಗೆ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಮೊದಲು ನೀವು ಕನ್ನಡ ಕಲಿಯಿರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನೀನ್ ಮೋದ್ಲು ಕಲಿ ಎಕ್ಕ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ನಿಂಗೆ ಕನ್ನಡ ಸರಿ ಅಗಿ ಬರಲ್ಲ ನಾವು ನೋಡಿವಿ ಬಿಗ್ ಬಾಸ್ ಮನೇಲಿ ಹೇಗೆ ಮಾತಾಡ್ತಿದೆ ಅಂತ ಎಂದು ಕಾಮೆಂಟ್ ಮಾಡಿದ್ದಾರೆ. ಇವಳಿಗೆ ಸ್ಪಷ್ಟವಾಗಿ ಕನ್ನಡ ಬರಲ್ಲ ಇದು ಆಕ್ಟಿಂಗ್ ಹೇಳಿ ಕೊಟ್ಟು ವಾಯ್ಸ್ ಡಬ್ಬಿಂಗ್ ಮಾಡಿಸಿದಾರೆ ಎಂದು ಇನ್ನೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ನಿಮಗೆ ರೀಲ್ಸ್ ಮಾಡೋಕೆ ಮಾತ್ರ ಬೇರೆ ಭಾಷೆ ಬೇಕು. ಆದರೆ ತೋರಿಸಿಕೊಳ್ಳೋಕೆ ಮಾತ್ರ ಕನ್ನಡ ಬೇಕು. ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಎಂಬ ಗಾದೆ ಮಾತು ನಿಮ್ಮಂತವರನ್ನು ನೋಡಿಯೇ ಮಾಡಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸದ್ಯ ನಿವೇದಿತಾ ಗೌಡ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications











