"ಅಣ್ಣಾವ್ರ ಕುಟುಂಬ ಇರೋದು ಉರಿಸೋಕೆ ಅಲ್ಲ.. ಉಳಿಸೋಕೆ, ಬೆಳೆಸೋಕೆ" ಕರವೇ ಶಿವರಾಮೇಗೌಡ!
'ಕ್ರಾಂತಿ' ಸಿನಿಮಾದ ಸಾಂಗ್ ರಿಲೀಸ್‌ಗೆಂದು ದರ್ಶನ್ ಹೊಸಪೇಟೆಗೆ ಹೋಗಿದ್ದರು. ಈ ವೇಳೆ ಕಿಡಿಗೇಡಿಗಳು ಇವರ ಮೇಲೆ ಚಪ್ಪಲಿ ಎಸೆದಿದ್ದರು. ಆ ಪ್ರಕರಣ ದೊಡ್ಡ ಮಟ್ಟಕ್ಕೆ ಚರ್ಚೆಯಾಗಿದ್ದು ಗೊತ್ತೇ ಇದೆ. ಶಿವಣ್ಣ ಸೇರಿದಂತೆ ಸ್ಯಾಂಡಲ್‌ವುಡ್‌ನ ನಟರು ಈ ಕೃತ್ಯವನ್ನು ಖಂಡಿಸಿದ್ದರು.
ದರ್ಶನ್ ಮೇಲೆ ಚಪ್ಪಲಿ ಎಸೆದಿದ ಘಟನೆ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಕಿಡಿಕಾರಿದ್ದರು. ತಮ್ಮ ನೆಚ್ಚಿನ ನಟನ ಮೇಲೆ ಪುನೀತ್ ಅಭಿಮಾನಿಗಳಿಂದಲೇ ಚಪ್ಪಲಿ ಎಸೆದಿದ್ದಾರೆಂದು ಆರೋಪಿಸಿದ್ದರು. ಇಲ್ಲಿಂದ ಇಬ್ಬರು ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದ ದೊಡ್ಡ ಫೈಟ್ ನಡೆದಿತ್ತು.
ಇನ್ನೊಂದು ಕಡೆ ದರ್ಶನ್ ಅಭಿಮಾನಿಗಳು ಅಣ್ಣಾವ್ರ ಕುಟುಂಬ ಹಾಗೂ ಪುನೀತ್ ರಾಜ್‌ಕುಮಾರ್ ವಿರುದ್ಧ ಕೆಟ್ಟಪದಗಳನ್ನು ಬಳಸಿ ನಿಂದಿಸುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು ಅಂತ ಪುನೀತ್ ಅಭಿಮಾನಿಗಳು ಫಿಲ್ಮ್ ಚೇಂಬರ್ ಮುತ್ತಿಗೆ ಹಾಕಿದ್ದರು. ಈಗ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇಗೌಡ ಪರೋಕ್ಷವಾಗಿ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ವಾಕ್ ದಾಳಿ ಮಾಡಿದ್ದಾರೆ. ಸಿನಿವುಡ್ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಣ್ಣಾವ್ರ ಕುಟುಂಬವನ್ನು ತೇಜೋವಧೆ ಮಾಡಿದರೆ ಸರ್ವನಾಶ ಆಗುತ್ತೀರಾ ಅಂತ ಕಿಡಿ ಕಾರಿದ್ದಾರೆ. ಆ ಸಂದರ್ಶನದ ಸಾರಾಂಶ ಇಲ್ಲಿದೆ.

'ಉರಿಸೋಕೆ ಬರೋರು ಸುಟ್ಟು ಭಸ್ಮ ಆಗುತ್ತಾರೆ'
"ರಾಜ್‌ಕುಮಾರ್ ಅವರ ಕುಟುಂಬದ ಮೇಲೆ ತೇಜೋವಧೆ ಮಾಡಿದ್ರೆ, ದೊಡ್ಡರಾಗಿಬಿಡ್ತೀನಿ ಅಂದ್ಕೊಂಡ್ರಾ? ಭ್ರಮೆಯೊಳಗೆ ಬದುಕುತ್ತೀರಾ ನೀವೆಲ್ಲ, ಸರ್ವನಾಶ ಆಗಿಬಿಡುತ್ತೀರ. ಕೊನೆಯದಾಗಿ ಹೇಳ್ತೀನಿ ಕೇಳಿ, ಅಣ್ಣಾವ್ರ ಕುಟುಂಬ ಇರೋದು ಉರಿಸೋಕೆ ಅಲ್ಲ. ಉಳಿಸೋಕೆ ಬೆಳೆಸೋಕೆ. ಯಾರು ಉರಿಸೋಕೆ ಬರುತ್ತಾರೆ, ಅವರು ಸುಟ್ಟು ಭಸ್ಮ ಆಗುತ್ತಾರೆ. ಅಣ್ಣಾವ್ರನ್ನು ಟಚ್ ಮಾಡೋಕೆ ಹೋದವರು ಏನೇನಾಗಿದ್ದಾರೆ ಅನ್ನೋದನ್ನು ಊಹಿಸಿಕೊಳ್ಳಿ ಸಾಕು." ಎಂದು ಶಿವರಾಮೇ ಗೌಡ ಕಿಡಿಕಾರಿದ್ದಾರೆ.

'ರಾಜ್‌ಕುಮಾರ್ ಭಕ್ತರು ಅಂತ ಮಾತಾಡುತ್ತಿಲ್ಲ'
"ಅಣ್ಣಾವ್ರ ಕುಟುಂಬ ಅಂದ್ರೆ ಉತ್ಪ್ರೇಕ್ಷಗೆ ರಾಜ್‌ಕುಮಾರ್ ಭಕ್ತರು ಅಂತ ಮಾತಾಡುತ್ತಿಲ್ಲ. ನಾನು ಯಾವತ್ತೂ ಯಾವ ಅಭಿಮಾನಿ ಸಂಘದಲ್ಲೂ ಗುರುತಿಸಿಕೊಂಡವನಲ್ಲ. ರಾಜ್‌ಕುಮಾರ್ ಅಭಿಮಾನಿಯಾಗಿ ಎಲ್ಲಾ ಕಡೆ ಗುರುತಿಸಿಕೊಂಡಿದ್ದೇನೆ. ಯಾರು ಅಣ್ಣಾವ್ರ ಕೆಲಸ ಮಾಡುತ್ತಾರೋ ಅಲೆಲ್ಲಾ ಗುರುತಿಸಿಕೊಂಡಿದ್ದೀನಿ. ಅಭಿಮಾನಿಗಳು ಅಂತ ಹೀಗಿರಬೇಕು ಅಂದುಕೊಳ್ಳುವಂತಹವರು ನಾಯಕ ನಟರು ಯೋಗ್ಯವಾಗಿದ್ದರೆ, ಅಭಿಮಾನಿಗಳನ್ನೂ ಯೋಗ್ಯವಾದ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ನಾಯಕ ನಟನೇ ಯೋಗ್ಯವಾಗಿಲ್ಲ ಅಂದ್ರೆ, ಅವನ ಅಭಿಮಾನಿಗಲು ಅದೇ ರೀತಿ ಇರುತ್ತಾರೆ."

'ಅಣ್ಣಾವ್ರ ಸಿನಿಮಾ ಪ್ರಭಾವ ಬೀರುತ್ತಿತ್ತು'
"ಆಗಿನ ಚಿತ್ರರಂಗ ಅಂದ್ರೆ, ಜನಸಾಮಾನ್ಯರ ಮೇಲೆ ಪ್ರಭಾವ ಬೀರುವ ಚಿತ್ರರಂಗ. ಒಂದು ಬಂಗಾರದ ಮನುಷ್ಯ ಸಿನಿಮಾ ನೋಡಿ ಅನೇಕ ಸರ್ಕಾರಿ ಅಧಿಕಾರಿಗಳು ತಮ್ಮ ಹುದ್ದೆಯನ್ನು ತ್ಯಜಿಸಿ, ರೈತರಾದಂತಹ ಉದಾಹರಣೆ ಇದೆ. ಒಂದು ಸತ್ಯಹರಿಶ್ಚಂದ್ರ ಸಿನಿಮಾವನ್ನು ನೋಡಿ ಸತ್ಯಕ್ಕೆ ಏನು ಮಹತ್ವವಿದೆ ಅನ್ನೋದನ್ನು ತಿಳಿದುಕೊಂಡಿದ್ದಾರೆ."

'ಪುನೀತ್ ಬಗ್ಗೆ ಮಾತಾಡಿದರೆ ತಪ್ಪಾಗುತ್ತೆ'
" ಪುನೀತ್ ಅವರ ವ್ಯಕ್ತಿತ್ವದ ಬಗ್ಗೆ ನಾನು ಹೇಳಿದರೆ ತಪ್ಪಾಗುತ್ತೆ. ಪುನೀತ್ ಅವರ ವ್ಯಕ್ತಿತ್ವದ ಬಗ್ಗೆ ಅವರ ಸಾಧನೆಗಳು, ಅವರಿಗೆ ಸಲ್ಲಿಸಿದಂತಹ ಕೀರ್ತಿಗಳು ಇವೆಲ್ಲವೂ ಸಾಕು ಅವರ ಸಾಧನೆ ಬಗ್ಗೆ ಹೇಳೋಕೆ. ಪುನೀತ್ ಅವರ ಅಭಿಮಾನಿಗಳು ಆ ದಿಕ್ಕಿನಲ್ಲಿಯೇ ಇರುತ್ತಾರೆ." ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇ ಗೌಡ ಸಂದರ್ಶನದಲ್ಲಿ ಮಾತಾಡಿದ್ದಾರೆ.


Click it and Unblock the Notifications











