'RRR' ಸಿನಿಮಾ ವಿರುದ್ಧ ಕರವೇ ಪ್ರತಿಭಟನೆ: ಪೋಸ್ಟರ್ ಹರಿದ ಕಾರ್ಯಕರ್ತರು
'RRR' ಸಿನಿಮಾ ಬಿಡುಗಡೆ ಆಗಲು ಒಂದೇ ದಿನ ಬಾಕಿ ಇರುವಾಗ ಸಿನಿಮಾದ ವಿರುದ್ಧ ಭಾರಿ ಆಕ್ರೋಶ ರಾಜ್ಯದಲ್ಲಿ ಕೇಳಿ ಬರುತ್ತಿದೆ.
'RRR' ಸಿನಿಮಾದಿಂದಾಗಿ ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾಕ್ಕೆ ಸಮಸ್ಯೆ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಿನಿಮಾದ ವಿರುದ್ಧ ಹಠಾತ್ ಪ್ರತಿಭಟನೆ ಆರಂಭಿಸಿದ್ದಾರೆ.
ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದವರು ಇಂದು 'RRR' ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸಿದ್ದು ನಗರದ ತ್ರಿವೇಣಿ ಸೇರಿದಂತೆ ಕೆಲವು ಚಿತ್ರಮಂದಿರಗಳ ಮುಂದೆ ಹಾಕಲಾಗಿದ್ದ 'RRR' ಸಿನಿಮಾದ ಪೋಸ್ಟರ್‌ಗಳನ್ನು ಹರಿದಿದ್ದಾರೆ. ಜೊತೆಗೆ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ತ್ರಿವೇಣಿ ಚಿತ್ರಮಂದಿರ ಮುಂದೆ ಧರಣಿ ಸಹ ನಡೆಸಿದ್ದಾರೆ.
'RRR' ಸಿನಿಮಾದ ಬಿಡುಗಡೆಯನ್ನು ವಿರೋಧಿಸಿ ಕರವೇಯ ಪ್ರವೀಣ್ ಶೆಟ್ಟಿ ಹಾಗೂ ಬೆಂಬಲಿಗರು ಪ್ರತಿಭಟನಾ ಮೆರವಣಿಗೆಯನ್ನು ಮಾಡಿದ್ದಾರೆ. ಮಾಧ್ಯಮದವರೊಟ್ಟಿಗೆ ಈ ಬಗ್ಗೆ ಮಾತನಾಡಿರುವ ಪ್ರವೀಣ್ ಶೆಟ್ಟಿ, ''RRR' ಸಿನಿಮಾವು ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ನಡೆಸಿ, ಸಿಎಂ, ಆರೋಗ್ಯ ಸಚಿವ, ಶಿವರಾಜ್ ಕುಮಾರ್ ಅವರನ್ನು ಕರೆಸಿ ಅವರ ಹೆಗಲ ಮೇಲೆ ಬಂದೂಕು ಇರಿಸಿ ಕನ್ನಡ ಸಿನಿಮಾಕ್ಕೆ ಗುರಿ ಮಾಡಿ ಹೊಡೆಯುವ ಕಾರ್ಯ ಮಾಡುತ್ತಿದ್ದಾರೆ'' ಎಂದಿದ್ದಾರೆ.

ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ: ಪ್ರವೀಣ್ ಶೆಟ್ಟಿ
''ಕನ್ನಡ ಚಿತ್ರರಂಗ ಈಗಾಗಲೇ ಸಂಕಷ್ಟದಲ್ಲಿದೆ. ಇಂಥಹಾ ಸಮಯದಲ್ಲಿ ಕನ್ನಡ ಸಿನಿಮಾವನ್ನು ಎತ್ತಂಗಡಿ ಮಾಡಿ ಆ ಜಾಗಕ್ಕೆ ಪರಭಾಷೆಯ ಸಿನಿಮಾ ಹಾಕುವುದು ಸರಿಯಲ್ಲ. ಪುನೀತ್ ಅವರ ಕೊನೆಯ ಚಿತ್ರದೊಂದಿಗೆ ಅಭಿಮಾನಿಗಳು ಭಾವನಾತ್ಮಕವಾಗಿ ಸಂಪರ್ಕ ಹೊಂದಿದ್ದಾರೆ. ಪುನೀತ್ ಕೊನೆಯ ಸಿನಿಮಾವನ್ನು ಮಟ್ಟಹಾಕುವ ಕಾರ್ಯವನ್ನು 'RRR' ಮಾಡುತ್ತಿದೆ'' ಎಂದಿದ್ದಾರೆ ಪ್ರವೀಣ್ ಶೆಟ್ಟಿ.

150 ಚಿತ್ರಮಂದಿರಗಳಿಗೆ ಇಳಿಸಿದ್ದಾರೆ: ಪ್ರವೀಣ್ ಶೆಟ್ಟಿ
''450 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ 'ಜೇಮ್ಸ್' ಸಿನಿಮಾವನ್ನು 150 ಚಿತ್ರಮಂದಿರಗಳಿಗೆ ಇಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿರುವ ಎಲ್ಲ ಚಿತ್ರಮಂದಿರಗಳನ್ನು ವಶಪಡಿಸಿಕೊಳ್ಳುವ ಕೆಲಸವನ್ನು ನೀವು ಮಾಡಿದರೆ ಕನ್ನಡ ಚಿತ್ರರಂಗ ಏನಾಗಬೇಕು? ಇಷ್ಟಕ್ಕೂ ಮೀರಿ 'RRR' ಅನ್ನು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ನಾವು ಚಿತ್ರಮಂದಿರಕ್ಕೆ ಹೋಗುತ್ತೇವೆ. ಅಲ್ಲಿ ಏನಾಗುತ್ತದೆ ಎಂಬುದನ್ನು ನೀವೇ ನೋಡಿವಿರಂತೆ'' ಎಂದು ಎಚ್ಚರಿಕೆ ನೀಡಿದರು ಪ್ರವೀಣ್ ಶೆಟ್ಟಿ.

ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದ ಸಿನಿಮಾ ತೆಗೆಯಲಾಗುತ್ತಿದೆ: ಪ್ರವೀಣ್ ಶೆಟ್ಟಿ
''ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನಿಮಾವನ್ನು ತೆಗೆದುಬಿಟ್ಟರೆ ಕನ್ನಡ ಚಿತ್ರರಂಗ ಏನಾಗಬೇಕು? ಇವರೇನು ನಮ್ಮ ಸಿನಿಮಾಗಳಿಗೆ ಆಂಧ್ರದಲ್ಲಿ, ತೆಲಂಗಾಣದಲ್ಲಿ, ತಮಿಳುನಾಡು, ಕೇರಳಗಳಲ್ಲಿ ಚಿತ್ರಮಂದಿರ ಕೊಡುತ್ತಾರಾ? ನಮ್ಮ ಸಿನಿಮಾಗಳಿಗೆ ಕರ್ನಾಟಕದಲ್ಲಿ ಅಷ್ಟೆ ಮಾರುಕಟ್ಟೆ ಇದೆ. ಹೀಗಿರುವಾಗ ಇವರು ಇಲ್ಲಿಯೂ ನಮ್ಮಿಂದ ನಮ್ಮ ಚಿತ್ರಮಂದಿರಗಳನ್ನು ಕಿತ್ತುಕೊಂಡರೆ ಹೇಗೆ?'' ಎಂದು ಪ್ರವೀಣ್ ಶೆಟ್ಟಿ ಪ್ರಶ್ನೆ ಮಾಡಿದರು.

ಕನ್ನಡ ಸಿನಿಮಾಗಳನ್ನು ಉಳಿಸುವುದು ನಮ್ಮ ಜವಾಬ್ದಾರಿ: ಪ್ರವೀಣ್
ಚಿತ್ರಮಂದಿರಗಳ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತೆ ಸಿಎಂ ಅವರು ವಾಣಿಜ್ಯ ಮಂಡಳಿಗೆ ಮನವಿ ಮಾಡಿರುವ ವಿಚಾರವಾಗಿ ಮಾತನಾಡಿರುವ ಪ್ರವೀಣ್ ಶೆಟ್ಟಿ, ''ಸಿಎಂ ಅವರ ನಿಲವನ್ನು ಸ್ವಾಗತಿಸುತ್ತೇನೆ. ಸಿಎಂ ಅವರು ಕನ್ನಡಪರವಾಗಿದ್ದಾರೆ. ಕನ್ನಡ ಸಿನಿಮಾವನ್ನು, ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಇಂದು ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಯಾವ ಸ್ಥಿತಿಯಲ್ಲಿದ್ದಾರೆ. ಅವರಿಗೆ ತೆರಿಗೆ ಮಾಫಿ ಎಲ್ಲಿ ಮಾಡಿದ್ದೀರಿ.


Click it and Unblock the Notifications











