'ರಾಘವೇಂದ್ರ ಸ್ಟೋರ್ಸ್' ಫಸ್ಟ್ ವೀಕೆಂಡ್ ಕಲೆಕ್ಷನ್ ಎಷ್ಟು? ಮಾಹಿತಿ ನೀಡಿದ ಕಾರ್ತಿಕ್ ಗೌಡ
ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನವರಸನಾಯಕನ ಹಾಸ್ಯರಸ ಪಾಕಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಹಾಸ್ಯದ ಜೊತೆ ಜೊತೆಗೆ ಚಿತ್ರದಲ್ಲಿ ಒಂದೊಳ್ಳೆ ಸಂದೇಶವನ್ನು ಕೂಡ ಚಿತ್ರತಂಡ ತೆರೆಗೆ ತಂದಿದೆ. ಹೊಂಬಾಳೆ ಸಂಸ್ಥೆ ಬಹಳ ಸೊಗಸಾಗಿ ಸಿನಿಮಾ ನಿರ್ಮಿಸಿ ಅಷ್ಟೇ ಚೆನ್ನಾಗಿ ಪ್ರಚಾರ ಮಾಡಿ ಥಿಯೇಟರ್‌ಗೆ ತಂದಿದೆ.
ವಯಸ್ಸು 40 ದಾಟಿದ ಹಯವದನನ ಮದುವೆ ಪ್ರಸಂಗವನ್ನು ಬಹಳ ತಮಾಷೆಯಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಬರೀ ಮದುವೆ ಅಲ್ಲ, ಮದುವೆ ನಂತರ ಎದುರಾಗುವ ಸಮಸ್ಯೆಗಳ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ. ಚಿತ್ರದಲ್ಲಿ ಹಯವದದನ ಕೈ ಹಿಡಿಯುವ ವೈಜಯಂತಿ ಪಾತ್ರದಲ್ಲಿ ಶ್ವೇತಾ ಶ್ರೀವಾಸ್ತವ್ ನಟಿಸಿದ್ದಾರೆ. ಹಯವದನನ ತಂದೆಯಾಗಿ ದತ್ತಣ್ಣ, ಸ್ನೇಹಿತರ ಪಾತ್ರಗಳಲ್ಲಿ ರವಿಶಂಕರ್ ಗೌಡ ಹಾಗೂ ಮಿತ್ರಾ ಮಿಂಚಿದ್ದಾರೆ. ಫ್ಯಾಮಿಲಿ ಸಮೇತ ಸಿನಿಮಾ ನೋಡಿ ಪ್ರೇಕ್ಷಕರು ಎಂಜಾಯ್ ಮಾಡಬಹುದು. ರಸಬಾಳೆ ಎನ್ನುವ ಊರಿನಲ್ಲಿ ನಡೆಯುವ ಕಥೆ ಸವಿಯಲು ಬಹಳ ರಸವತ್ತಾಗಿದೆ.

ಎಲೆಕ್ಷನ್ ಭರಾಟೆ, ಐಪಿಎಲ್ ಆರ್ಭಟದ ನಡುವೆ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ತೆರೆಗೆ ಬಂದಿದೆ. ಇತ್ತೀಚೆಗೆ ದೊಡ್ಡ ಸಿನಿಮಾಗಳು ಇಲ್ಲದೇ ಜನ ಥಿಯೇಟರ್‌ಗೆ ಬರ್ತಿಲ್ಲ ಎನ್ನುವಂತಾಗಿದೆ. ಕೆಲವರು ದೊಡ್ಡ ಸಿನಿಮಾಗಳನ್ನು ತೆರೆಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮಯದಲ್ಲಿ ರಿಲೀಸ್ ಆಗಿರುವ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಕಲೆಕ್ಷನ್ ಬಗ್ಗೆ ಭಾರೀ ನಿರೀಕ್ಷೆಯಿದೆ. ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದು ಸುಳ್ಳಲ್ಲ. ಹಾಗಾಗಿ ಕಲೆಕ್ಷನ್ ಎಷ್ಟಾಗಿರಬಹುದು ಅನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.
ಫಸ್ಟ್ ವೀಕೆಂಡ್ ಸಿನಿಮಾ 1.1 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವ ಟ್ವೀಟ್‌ವೊಂದಕ್ಕೆ ನಿರ್ಮಾಪಕರಾದ ಕಾರ್ತಿಕ್ ಗೌಡ ಪ್ರತಿಕ್ರಿಯಿಸಿದ್ದಾರೆ. ಆ ಟ್ವೀಟ್‌ನ ರೀಟ್ವೀಟ್ ಮಾಡಿರುವ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಅದಕ್ಕಿಂತಲೂ ಹೆಚ್ಚು ಎಂದು ಪ್ರತಿಕ್ರಿಯಿಸಿದ್ದಾರೆ. ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಖಚಿತ ಮಾಹಿತಿ ನೀಡದೇ ಇದ್ದರೂ 1. 1 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಕಂಡಿದೆ ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಕಾರ್ತಿಕ್ ಗೌಡ ಟ್ವೀಟ್ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ 'ಗುರುದೇವ್ ಹೊಯ್ಸಳ' ಹಾಗೂ 'ಶಿವಾಜಿ ಸುರತ್ಕಲ್' ಸಿನಿಮಾಗಳ ಕಲೆಕ್ಷನ್ ಬಗ್ಗೆಯೂ ಇದೇ ರೀತಿ ಸ್ಪಷ್ಟನೆ ನೀಡಿದ್ದರು.
ನಟ ಜಗ್ಗೇಶ್ ಸ್ಯಾಂಡಲ್‌ವುಡ್‌ನಲ್ಲಿ ಮಿಮಿಮಮ್ ಗ್ಯಾರೆಂಟಿ ನಟ ಎನಿಸಿಕೊಂಡಿದ್ದಾರೆ. ಇವತ್ತಿಗೂ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು, ನಿರ್ದೇಶಕರು ಮುಗಿಬೀಳುತ್ತಾರೆ. ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡಿರುವ ಜಗ್ಗಣ್ಣ ತಮ್ಮ ಕಾಮಿಡಿ ಟೈಮಿಂಗ್ ಹಾಗೂ ಹಾವಭಾವಗಳಿಂದ ಪ್ರೇಕ್ಷರನ್ನು ರಂಜಿಸುತ್ತಾ ಬರ್ತಿದ್ದಾರೆ. ಸದ್ಯ 'ರಾಘವೇಂದ್ರ ಸ್ಟೋರ್ಸ್' ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಅದಕ್ಕೆ ಸ್ಪಷ್ಟ ನಿದರ್ಶನ.

ಅಡುಗೆ ಭಟ್ಟ ಹಯವದನನ ಪಾತ್ರದಲ್ಲಿ ಜಗ್ಗೇಶ್ ಪ್ರೇಕ್ಷಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ. ಹಾಸ್ಯದ ಜೊತೆ ಜೊತೆಗೆ ಸಮಾಜದ ಕೆಲ ಸಮಸ್ಯೆಗಳ ಬಗ್ಗೆಯೂ ಚಿತ್ರದಲ್ಲಿ ಚರ್ಚಿಸಲಾಗಿದೆ. ಇನ್ನು ಇಡೀ ಸಿನಿಮಾ ತಮಾಷೆಯಾಗಿ ಸಾಗಿದರೂ ಕೊನೆಯ 5 ನಿಮಿಷ ನೋಡುಗರನ್ನು ಭಾವುಕರನ್ನಾಗಿಸುತ್ತದೆ. ಸಿಂಪಲ್ ಕಥೆಯನ್ನು ಬಹಳ ಕ್ರಿಸ್ಪಿಯಾಗಿ ಕಟ್ಟಿಕೊಟ್ಟು ನಿರ್ದೇಶಕರು ಗೆದ್ದಿದ್ದಾರೆ.
ಹೊಂಬಾಳೆ ಸಂಸ್ಥೆಯ ಖಾತೆಗೆ 'ರಾಘವೇಂದ್ರ ಸ್ಟೋರ್ಸ್' ಮೂಲಕ ಮತ್ತೊಂದು ಹಿಟ್ ಸಿನಿಮಾ ಸೇರಿಕೊಂಡಂತಾಗಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ಆನಂದ್‌ರಾಮ್ ಕಥೆಗೆ ಪೂರಕವಾಗಿದೆ. ಪ್ರೇಕ್ಷಕರಂತೂ ಸಿನಿಮಾವನ್ನು ಮೆಚ್ಚಿಕೊಂಡಾಡುತ್ತಿದ್ದಾರೆ.


Click it and Unblock the Notifications











