ಸಂಚಿತ್ ಸುದೀಪ್ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ಸದ್ದು ಮಾಡ್ತಿಲ್ವಾ? ನಿರ್ಮಾಪಕರು ಹೇಳಿದ್ದಿಷ್ಟು
'ಮ್ಯಾಂಗೋ ಪಚ್ಚ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್ 5ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಚಿತ್ರದ ಸಣ್ಣ ಸಣ್ಣ ಟೀಸರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ 5 ತಿಂಗಳು ತಡವಾಗಿ ತೆರೆಗೆ ಬರ್ತಿದೆ.
ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಸುಪ್ರಿಯಾನ್ವಿ ಬ್ಯಾನರ್‌ಗಳ ಅಡಿಯಲ್ಲಿ 'ಮ್ಯಾಂಗೋ ಪಚ್ಚ' ಸಿನಿಮಾ ನಿರ್ಮಾಣವಾಗಿದೆ. ಕಿಚ್ಚ ಸುದೀಪ್ ಸಹೋದರಿ ಮಗ ಸಂಚಿತ್ ನಟನೆಯ ಮೊದಲ ಸಿನಿಮಾ ಇದು. ಮೈಸೂರು ಹಿನ್ನೆಲೆಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. 25 ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಕಥೆ ಸಾಗಲಿದೆ. ಅದಕ್ಕೆ ತಕ್ಕಂತೆ ಕೊಂಚ ರೆಟ್ರೊ ಲುಕ್‌ನಲ್ಲಿ ಸಿನಿಮಾ ಮೂಡಿ ಬಂದಿದೆ.

ಸಿನಿಮಾ ಬಿಡುಗಡೆ ಇನ್ನು 15 ದಿನ ಬಾಕಿಯಿದೆ. ಆದರೆ ಅಷ್ಟೇನು ಸದ್ದು ಮಾಡ್ತಿಲ್ಲ ಎನ್ನುವ ಚರ್ಚೆ ಶುರುವಾಗಿದೆ. ಕನ್ನಡ ಚಿತ್ರರಂಗವೇ ಕೊಂಚ ಡಲ್ ಆಗಿದೆ. ಐಪಿಎಲ್ ಭರಾಟೆ ನಡುವೆ ಯಾವುದೇ ದೊಡ್ಡ ಸಿನಿಮಾಗಳು ಬರ್ತಿಲ್ಲ. 'ಕೆಡಿ' ಸಿನಿಮಾ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಐಪಿಎಲ್ ಮುಗಿದ ಬಳಿಕ ಬರುತ್ತಿರುವ ಮೊದಲ ನಿರೀಕ್ಷಿತ ಕನ್ನಡ ಸಿನಿಮಾ 'ಮ್ಯಾಂಗೋ ಪಚ್ಚ'.
ಸಾಮಾನ್ಯವಾಗಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗುತ್ತಿದ್ದರೆ ತಿಂಗಳಿಗೂ ಮುನ್ನ ಪ್ರಚಾರ ಶುರುವಾಗುತ್ತದೆ. ಸಿನಿಮಾ ಬಗ್ಗೆ ಬಝ್ ಕ್ರಿಯೇಟ್ ಆಗಿ ಗಮನ ಸೆಳೆಯುತ್ತದೆ. ಎರಡು ದೊಡ್ಡ ಸಂಸ್ಥೆಗಳ ನಿರ್ಮಾಣದ ಸಿನಿಮಾ ಇದು. ಸ್ವತಃ ಸುದೀಪ್ ಚಿತ್ರತಂಡ ಬೆನ್ನಿಗೆ ನಿಂತಿದ್ದಾರೆ. ಆದರೂ ಯಾಕೋ ನಿರೀಕ್ಷಿತ ಮಟ್ಟದಲ್ಲಿ ಹೈಪ್ ಇಲ್ಲ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿ ನಿರ್ಮಾಪಕ ಕಾರ್ತಿಕ್ ಗೌಡ ಪ್ರತಿಕ್ರಿಯಿಸಿದ್ದಾರೆ.
'ಮ್ಯಾಂಗೋ ಪಚ್ಚ' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಬಳಿಕ ನಾವು ಪ್ರಚಾರ ಆರಂಭಿಸಿದ್ದೇವೆ. ದಿನದಿಂದ ದಿನ ಚಿತ್ರದ ಬಗ್ಗೆ ಹವಾ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸಣ್ಣ ಟೀಸರ್ ರಿಲೀಸ್ ಮಾಡಿದ್ದೇವೆ, ಶೀಘ್ರದಲ್ಲೇ ಟ್ರೇಲರ್ ಅನ್ನು ಬಿಡುಗಡೆ ಮಾಡ್ತೀವಿ. ಈಗಾಗಲೇ ಸಂಚಿತ್ ಸಿನಿಮಾ ಪ್ರಚಾರಕ್ಕೆ ಅಣಿಯಾಗಿದ್ದಾರೆ. ಸಾಕಷ್ಟು ಸಂದರ್ಶನಗಳು ಮತ್ತು ಇತರೆ ಪ್ರಚಾರ ಚಟುವಟಿಕೆಗಳು ನಡೆಯಲಿವೆ. ಈ ಸಿನಿಮಾ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ" ಎಂದು ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿಯಲ್ಲಿ ಮೂಡಿ ಬಂದಿರುವ 'ಮ್ಯಾಂಗೋ ಪಚ್ಚ' ಟ್ರೈಲರ್ ಮುನ್ನುಡಿ ಟೀಸರ್ ಗಮನ ಸೆಳೆಯುತ್ತಿದೆ. "ಮೈಸೂರು.. 2002.. ಊರು, ಟೈಮ್.. ಎರಡೂ ಚೇಂಜ್ ಆಗ್ತಿತ್ತು. ಅದೇ ಸಮಯದ ಕಥೆ ಇದು.. ಪದ್ಮ, ಸುಜಿ, ಶ್ಯಾಮ, ನಾಗಪ್ಪ, ಶ್ರೀಧರ್, ಮಹೇಂದ್ರ ಮುಖ್ಯವಾಗಿ ಮೈಸೂರು.. ಇವರೆಲ್ಲರೂ ಇಲ್ಲದೇ ಈ ಕಥೆನೇ ಇಲ್ಲ.. ಇವ್ನೇ ಪಚ್ಚ.. ಇದು ಇವನ ಕಥೆ" ಎಂದು ಸುದೀಪ್ ಪರಿಚಯ ಮಾಡಿಕೊಟ್ಟಿದ್ದಾರೆ.
ವಿವೇಕ ಎಂಬುವವರು 'ಮ್ಯಾಂಗೋ ಪಚ್ಚ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಹಾಗೂ ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಕಾಜಲ್ ಕುಂದರ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಮಯೂರ್ ಪಟೇಲ್, ಉಗ್ರಂ ಮಂಜು, ಪ್ರಶಾಂತ್ ಹಿರೇಮಠ್, ಹಂಸ ನಾರಾಯಣಸ್ವಾಮಿ ಚಿತ್ರದ ತಾರಾಗಣದಲ್ಲಿದ್ದಾರೆ.
ಡಾಲಿ ಧನಂಜಯ್ ಕೂಡ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈಗಾಗಲೇ 2 ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಶೀಘ್ರದಲ್ಲೇ ಮತ್ತೆರಡು ಸಾಂಗ್ಸ್ ಬರಲಿದೆ.


Click it and Unblock the Notifications