ಅಭಿಮಾನಿಗಳೇ ನಮ್ಮನೆ ದೇವರೆಂದ ಬಿಗ್ ಬಾಸ್ ವಿನ್ನರ್ ; ಮುಂದೇನ್ಮಾಡ್ತಾರೆ ಗೊತ್ತಾ ಕಾರ್ತಿಕ್ ?
ಬಿಗ್ ಬಾಸ್ ಮುಕ್ತಾಯವಾಯಿತು.. ಮುಂದೇನು..? ಬಿಗ್ ಬಾಸ್ ಮನೆಯಲ್ಲಿ ಅಖಂಡ 112 ದಿನ ಕಳೆದು ಬಂದ ಎಲ್ಲ ಸ್ಫರ್ಧಿಗಳ ಮುಂದೆ ಇರುವ ಬಹುದೊಡ್ಡ ಪ್ರಶ್ನೆ ಇದು. ಇದಕ್ಕೆ ಅನೇಕರು ಉತ್ತರವನ್ನ ಕಂಡುಕೊಳ್ಳುವ ಪ್ರಯತ್ನವನ್ನ ಸದ್ಯಕ್ಕೆ ಮಾಡ್ತಿದ್ದಾರೆ. ಆ ಪೈಕಿ ಬಿಗ್ ಬಾಸ್ ಕಿರೀಟವನ್ನ ಮುಡಿಗೇರಿಸಿಕೊಂಡ ಕಾರ್ತಿಕ್ ಮಹೇಶ್, ಭವಿಷ್ಯದ ಬಗ್ಗೆ ಸ್ಪಷ್ಟವಾದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.
ಹೌದು, ಸಾಮಾನ್ಯವಾಗಿ ಹೊರ ಜಗತ್ತಿನಲ್ಲಿ ಒಳ್ಳೇ ಹೆಸರು ಮಾಡಿದ್ದವರೂ ಕೂಡ ಬಿಗ್ ಬಾಸ್ ಮನೆಯೊಳಗಿನ ವರ್ತನೆಗಳಿಂದ ಹೆಸರು ಕೆಡಿಸಿಕೊಂಡಿದ್ದು ಇದೆ. ಆದರೆ ಅದೆಂಥಾ ಸವಾಲು ಬಂದರೂ ತಾವು ತಾವಾಗೇ ಉಳಿದ, ಸಹಜವಾದ ವರ್ತನೆಗಳಿಂದ ಕನ್ನಡಿಗರ ಮನ ಗೆದ್ದ ಕಾರ್ತಿಕ್, ಸದ್ಯಕ್ಕೆ ಚಿತ್ರರಂಗದಲ್ಲಿ ಗಟ್ಟಿ ನೆಲೆಯೂರುವ ಮನಸ್ಸು ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸಿನಿಮಾ ಅವಕಾಶ ಕಾರ್ತಿಕ್ ಅವರನ್ನ ಅರಸಿ ಹೋಗ್ತಿವೆ. ಜಾಹೀರಾತುಗಳಲ್ಲಿ ನಟಿಸುವಂತೆ ಕೂಡ ಕೆಲವರು ಕಾರ್ತಿಕ್ ಹಿಂದೆ ದುಂಬಾಲು ಬಿದ್ದಿದ್ದಾರೆ. ಹಾಗಂಥ ಸಿಕ್ಕ ಸಿಕ್ಕಿದ್ದನ್ನೆಲ್ಲ ಕಾರ್ತಿಕ್ ಒಪ್ಪಿಕೊಳ್ತಿಲ್ಲ. ಅವರಸವೇ ಅಪಾಯಕ್ಕೆ ಕಾರಣವೆಂದು ಮನಗಂಡಿರುವ ಕಾರ್ತಿಕ್, ಒಳ್ಳೊಳ್ಳೆಯ ಆಫರ್‌ಗಳ ನಿರೀಕ್ಷೆಯಲ್ಲಿದ್ದಾರೆ. ನಿರ್ದೇಶಕರು ಯಾರೇ ಇರಲಿ, ನಿರ್ಮಾಪಕರು ಎಷ್ಟೇ ದೊಡ್ಡವರು ಇರಲಿ, ಅತ್ಯುತ್ತಮ ಕಥೆ ಸಿಕ್ಕರೆ ನಾನು ನಟಿಸಲು ಸಿದ್ಧವೆಂದಿದ್ದಾರೆ.

ಪಿ.ಆರ್.ಕೆ ಬ್ಯಾನರ್ ನಲ್ಲಿ ನಟಿಸುವ ಆಸೆ
ಇನ್ನೂ ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಸಂಸ್ಥೆಯಡಿ ನಿರ್ಮಾಣವಾಗುವ ಚಿತ್ರದಲ್ಲಿ ನಟಿಸಬೇಕೆಂಬ ಮಹದಾಸೆ ಕಾರ್ತಿಕ್ ಅವರದ್ದು. ಕೇವಲ ಇವರಿಗಷ್ಟೇ ಅಲ್ಲ, ಚಿತ್ರರಂಗಕ್ಕೆ ಬರುವ ಬಹುತೇಕರಿಗೆ ಇಂಥಹದ್ದೊಂದು ಆಸೆ ಇದ್ದೇ ಇರುತ್ತೆ. ಹೀಗಾಗಿಯೇ ನನಗೆ ಅವಕಾಶ ಸಿಕ್ಕರೆ ಖಂಡಿತ ಪಿಆರ್‌ಕೆ ಬ್ಯಾನರ್‌ನಲ್ಲಿ ಕೆಲಸ ಮಾಡುವೆ. ಅಪ್ಪು ಅವರು ತುಂಬ ಸರಳವಾಗಿ ಇರುತ್ತಿದ್ದರು. ಅವರಿಂದ ನಾವೆಲ್ಲ ಕಲಿತಿದ್ದೇವೆ ಎನ್ನುತ್ತಾರೆ ಕಾರ್ತಿಕ್ ಮಹೇಶ್ .
ಅಂದ್ಹಾಗೇ ಬಿಗ್ ಬಾಸ್ ಟ್ರೋಫಿ ಗೆದ್ದ ನಂತರ, ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದ ಕಾರ್ತಿಕ್ ಮಹೇಶ್, ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿ, ಅಲ್ಲಿ ಬಿಗ್ ಬಾಸ್ ಟ್ರೋಫಿ ಇರಿಸಿ, ಆಶೀರ್ವಾದ ಪಡೆದುಕೊಂಡರು. ಡಾ ರಾಜ್‌ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಇದೇ ಸಮಯದಲ್ಲಿ ತಮ್ಮ ಮುಂದಿನ ಯೋಚನೆ-ಯೋಜನೆ-ಗುರಿ ಬಗ್ಗೆ ಮಾತನಾಡಿರುವ ಕಾರ್ತಿಕ್ ಮಹೇಶ್, ನಾನು ಹುಟ್ಟಿದ್ದು ಚಾಮರಾಜನಗರದಲ್ಲಿ. ಹಾಗಾಗಿ, ನಾನು ಅಣ್ಣಾವ್ರ ಊರಿನ ಕಡೆಯವನು ಎಂದು ಹೇಳಿಕೊಳ್ಳುವುದಕ್ಕೆ ನನಗೆ ಬಹಳ ಹೆಮ್ಮೆ ಇದೆ. ನನ್ನ ಮೇಲೆ ಡಾ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರ ಆಶೀರ್ವಾದ ಇದೆ. ಒಂದು ಸಲ, ಅಪ್ಪು ಸರ್ ನನ್ನ ಡ್ಯಾನ್ಸ್ ನೋಡಿ ಖುಷಿಪಟ್ಟಿದ್ದರು. ಅದನ್ನು ನನಗೆ ಹೇಳಿದ್ದರು ಕೂಡ. ಆ ಡ್ಯಾನ್ಸ್ ಶೋವನ್ನು ಅವರೇ ಉದ್ಘಾಟಿಸಿದ್ದರು. ನನ್ನ 'ಡೊಳ್ಳು' ಸಿನಿಮಾದ ಒಂದಷ್ಟು ದೃಶ್ಯಗಳನ್ನು ನೋಡಿ, ಅಪ್ಪು ಸರ್ ಮೆಚ್ಚಿಕೊಂಡಿದ್ದರು ಎಂದು ನೆನಪುಗಳನ್ನು ಮೆಲುಕು ಹಾಕಿದರು ಕಾರ್ತಿಕ್.
ಅಭಿಮಾನಿಗಳಿಗೆ ಚಿರಋಣಿ
ಇನ್ನೂ ಅಭಿಮಾನಿಗಳೇ ನಮ್ಮನೆ ದೇವರು ಎನ್ನುವ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಅವರಲ್ಲಿ ಅಭಿಮಾನಿಗಳ ಜೊತೆ ಕಾಲ ಕಳಿಯಬೇಕೆಂಬ ಬಯಕೆ ಇದೆ. ಈ ಕಾರಣಕ್ಕೆ ಮೈಸೂರಿನಲ್ಲಿ ಮೀಟ್ & ಗ್ರೀಟ್ ಕಾರ್ಯಕ್ರಮ ಹಮ್ಮಿಕೊಳ್ಳುವ ಆಲೋಚನೆ ಮಾಡ್ತಿರುವ ಕಾರ್ತಿಕ್ ಈ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಸದ್ಯಕ್ಕೆ ಕಾರ್ತಿಕ್ ಅವರಿಗೆ ಕನ್ನಡ ಚಿತ್ರರಂಗ ಕರೆ ಮಾಡಲು ಆರಂಭ ಮಾಡಿದೆ. ಅವಕಾಶದ ಬಾಗಿಲು ಕೂಡ ತೆರೆಯುತ್ತಿದೆ. ಅಳೆದು ತೂಗಿ ಚಿತ್ರವನ್ನ ಆಯ್ಕೆ ಮಾಡಿಕೊಳ್ಳಲು ಮುಂದಾಗಿರುವ ಕಾರ್ತಿಕ್, ಯಾವ ಚಿತ್ರವನ್ನ ಒಪ್ಪಿಕೊಳ್ತಾರೆ ಎಂಬ ಪ್ರಶ್ನೆಗೆ ಸದ್ಯದಲ್ಲಿಯೇ ಉತ್ತರ ಸಿಗಲಿದೆ.


Click it and Unblock the Notifications











