For Quick Alerts
  ALLOW NOTIFICATIONS  
  For Daily Alerts

  ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಬಗ್ಗೆ ಕವಿ ರಾಜ್ ಹೇಳಿದ ರೋಚಕ ಘಟನೆ

  |

  ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಇನ್ನಿಲ್ಲ ಎನ್ನುವ ವಿಚಾರವನ್ನು ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 1986ರ ವಿಶ್ವಕಪ್ ವಿಜೇತ ಮರಡೇನಾ ಅರ್ಜೆಂಟೀನಾದ ಖಾಸಗಿ ಆಸ್ಪತ್ರೆಯಲ್ಲಿ ನವೆಂಬರ್ 25ರಂದು ಕೊನೆಯುಸಿರೆಳಿದ್ದಾರೆ.

  ಮರಡೋನಾ ನಿಧನಕ್ಕೆ ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಫುಟ್ಬಾಲ್ ಮಾಂತ್ರಿಕನ ಬಗ್ಗೆ ಗೀತರಚನೆಕಾರ ಮತ್ತು ನಿರ್ದೇಶಕ ಕವಿ ರಾಜ್ ಸಹ ಸಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. ಮರಡೋನಾ ಬಗ್ಗೆ ರೋಚಕ ಘಟನೆಯನ್ನು ಬರೆದುಕೊಂಡಿರುವ ಕವಿ ರಾಜ್, ಡಿಯಾಗೋ ಮರಡೋನಾ ನನ್ನನ್ನು ಗೆಲ್ಲಿಸಿದ್ದ ಎಂದು ಹೇಳಿದ್ದಾರೆ. ಮುಂದೆ ಓದಿ..

  ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ನಿಧನಕ್ಕೆ ಕಂಬನಿ ಮಿಡಿದ ಸಿನಿ ತಾರೆಯರುಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ನಿಧನಕ್ಕೆ ಕಂಬನಿ ಮಿಡಿದ ಸಿನಿ ತಾರೆಯರು

  ಡಿಯಾಗೋ ಬಗ್ಗೆ ಕವಿರಾಜ್ ಮಾತುಗಳು

  ಡಿಯಾಗೋ ಬಗ್ಗೆ ಕವಿರಾಜ್ ಮಾತುಗಳು

  1996 -97 ಸಮಯ ಅನ್ಸುತ್ತೆ. ನಾನಾಗ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ. ನಿಗದಿತ ಶೈಕ್ಷಣಿಕ ಪುಸ್ತಕದ ಜ್ಞಾನಕ್ಕಿಂತ ಜನರಲ್ ನಾಲೆಡ್ಜ್ ಪುಸ್ತಕಗಳು ಮತ್ತು ಎಲ್ಲಾ ಮಾದರಿಯ ಪತ್ರಿಕೆಗಳಲ್ಲಿ ಗಳಲ್ಲಿ ವಿಪರೀತ ಆಸಕ್ತಿಯಿದ್ದ ನಾನು ಶಿವಮೊಗ್ಗದ ಕ್ವಿಜ್ (ರಸಪ್ರಶ್ನೆ ) ವಲಯದಲ್ಲಿ ಒಂಥರ ಫೆಡರರ್ ಆಗ. ಹೋದಲೆಲ್ಲಾ ಪ್ರಥಮ ಅಥವಾ ದ್ವಿತೀಯ ಸ್ಥಾನದಲ್ಲಿ ಗೆದ್ದು ಬರುತ್ತಿದ್ದೆ. ಬಹುಶಃ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಅದೊಂದು ಕ್ವಿಜ್ ಸ್ಪರ್ಧೆಯಲ್ಲಿ ಕೊನೆಯ ಸುತ್ತಿನಲ್ಲಿ ನಮಗೂ ಇನ್ನೊಂದು ತಂಡಕ್ಕೂ ಅಂಕಗಳು ಸಮನಾಗಿ ಬಂದು ಟೈ ಆಗಿಬಿಟ್ಟಿತ್ತು.

  ಟೈ ಬ್ರೇಕರ್ ಪ್ರಶ್ನೆ

  ಟೈ ಬ್ರೇಕರ್ ಪ್ರಶ್ನೆ

  ವಿಜೇತರನ್ನು ನಿರ್ಧರಿಸಲು ಒಂದು ಟೈ ಬ್ರೇಕರ್ ಪ್ರಶ್ನೆ. ಯಾರು ಮೊದಲು ಕರೆಗಂಟೆ ಒತ್ತುತ್ತಾರೋ ಅವರಿಗೆ ಉತ್ತರಿಸುವ ಅವಕಾಶ. ಅವಸರದಲ್ಲಿ ಕರೆಗಂಟೆ ಒತ್ತಿ ಅಕಸ್ಮಾತ್ ತಪ್ಪು ಉತ್ತರ ಹೇಳಿದರೆ ನೆಗೆಟಿವ್ ಅಂಕ ಗಳಿಸಿ ಎದುರಾಳಿ ತಂಡಕ್ಕೆ ನಾವೇ ನಮ್ಮ ಕೈಯ್ಯಾರೆ ಫುಟ್ಬಾಲಿನ ಉಡುಗೊರೆ ಗೋಲಿನಂತೆ 'ಉಡುಗೊರೆ ಗೆಲುವು' ಕೊಟ್ಟಂತೆ. ಇದೀಗ ಟೈ ಬ್ರೇಕರ್ ಪ್ರಶ್ನೆ ಅಂತಾ ಕ್ವಿಜ್ ಮಾಸ್ಟರ್ ಅನ್ನುತ್ತಿದ್ದಂತೆ ಹೃದಯ ಬಡಿತ ಏರುತ್ತಾ ನಮ್ಮ ಕಿವಿಗೆ ಕೇಳುವಷ್ಟು ಜೋರಾಗಿ ಇಡಿ ದೇಹದ ತುಂಬಾ ಹೃದಯ ಬಡಿತದ ಸದ್ದೇ ಮಾರ್ದನಿಸಿದಂತೆ. ಕ್ವಿಜ್ ಮಾಸ್ಟರ್ ಪ್ರಶ್ನೆ ಕೇಳಿಯೇ ಬಿಟ್ಟರು.

  ಈ ಪದ ಕೇಳಿದ್ದು ಅವತ್ತೇ ಮೊದಲು

  ಈ ಪದ ಕೇಳಿದ್ದು ಅವತ್ತೇ ಮೊದಲು

  ಫುಟ್ಬಾಲ್ ಜಗತ್ತಿನಲ್ಲಿ 'ಹ್ಯಾಂಡ್ಸ್ ಆಫ್ ಗಾಡ್' ಅನ್ನೋ ವಿಶೇಷಣ ಯಾವ ಆಟಗಾರನಿಗೆ ಸಂಬಂಧಿಸಿದ್ದು ? ಒಂದು ಕ್ಷಣ ಎಲ್ಲಾ ಅಯೋಮಯ, ಆತಂಕ. ನಿಜಾ ಎಂದರೆ ಆ ಪದ ನಾನು ಅವತ್ತೇ ಮೊದಲು ಕೇಳಿದ್ದು. ಆ ಹೊತ್ತಿಗೆ ಪುಟ್ಬಾಲ್ ಜಗತ್ತಿನಲ್ಲಿ ನಾನು ಕೇಳ್ಪಟ್ಟಿದ್ದು ಎರಡೇ ಹೆಸರು ಒಂದು ಆಗಲೇ ನಿವೃತ್ತಿ ಆಗಿದ್ದ ಪೀಲೇ ಇನ್ನೊಂದು ಆಗಿನ ಸೂಪರ್ ಸ್ಟಾರ್ ಡಿಯಾಗೋ ಮರಡೋನಾ. ಎದುರಿನ ತಂಡದ ಸ್ಪರ್ಧಿಗಳನ್ನು ನೋಡಿದರೆ ಅವರೂ ಆತಂಕದಲ್ಲಿ ಏನೋ ಗುಸುಗುಸು ಡಿಸ್ಕಸ್ ಮಾಡುತ್ತಿದ್ದಾರೆ.

  ದಸರಾ, ದೀಪಾವಳಿ ಅಪಭ್ರಂಶ: ಸಿನಿಸಾಹಿತಿ ಕವಿರಾಜ್ ಆಕ್ರೋಶದಸರಾ, ದೀಪಾವಳಿ ಅಪಭ್ರಂಶ: ಸಿನಿಸಾಹಿತಿ ಕವಿರಾಜ್ ಆಕ್ರೋಶ

  ಮೊದಲು ಕರೆಗಂಟೆ ಒತ್ತಿಯೇ ಬಿಟ್ಟೆ

  ಮೊದಲು ಕರೆಗಂಟೆ ಒತ್ತಿಯೇ ಬಿಟ್ಟೆ

  ಏನೋ ಉತ್ತರ ಹೇಳಲು ತಯಾರಿ ನಡೆಸುವಂತೆ ಕಾಣುತ್ತಿದ್ದಾರೆ. ಅಕಸ್ಮಾತ್ ಅವರು ಮೊದಲು ಕರೆಗಂಟೆ ಒತ್ತಿ ಸರಿ ಉತ್ತರ ಹೇಳಿಬಿಟ್ಟರೆ ಮುಗಿದೇ ಹೋಯಿತು. ನಾನು ಹೋರಾಡದೇ ಸೋತಂತೆ. ಏನು ಮಾಡೋದು ? ನನ್ನ ತಂಡದ ಇನ್ನೊಬ್ಬ ಸ್ಪರ್ಧಿಗೇ ಈ ಪ್ರಶ್ನೆಯ ಗಂಧಗಾಳಿಯು ಗೊತ್ತಿಲ್ಲ ಎಂದು ಅವನ ಮುಖವೇ ಹೇಳುತ್ತಿತ್ತು. ಆದರೂ ಏನೋ ಉತ್ತರಕ್ಕೆ ಹುಡುಕುವವನಂತೆ ಡೌ ಮಾಡುತ್ತಿದ್ದ. ಸರಿ ಆಗಿದ್ದಾಗಲಿ. ಹೋರಾಡಿಯೇ ಸೋಲೋಣ ಅಂತಾ ನಿಶ್ಚಯಿಸಿದವನೇ ಕರೆಗಂಟೆ ಒತ್ತಿಯೇ ಬಿಟ್ಟೇ.

  ಯೆಸ್..ಡಿಯಾಗೋ ಮರಡೋನಾ ಈಸ್ ದ ರೈಟ್ ಆನ್ಸರ್

  ಯೆಸ್..ಡಿಯಾಗೋ ಮರಡೋನಾ ಈಸ್ ದ ರೈಟ್ ಆನ್ಸರ್

  ಎದುರಿನ ತಂಡ ಸರಿ ಉತ್ತರ ಹೇಳಿಬಿಡುವನೇ ಎಂಬ ಹತಾಶೆಯಿಂದ ಬಿಟ್ಟ ಬಾಯಿ ಬಿಟ್ಟಂತೆ ನನ್ನನ್ನೇ ನೋಡುತ್ತಿತ್ತು ‌. "ಯೆಸ್... ಉತ್ತರ ಹೇಳಿ" ಎಂದು ಕ್ವಿಜ್ ಮಾಸ್ಟರ್ ನನ್ನತ್ತ ಕೈ ತೋರಿಸಿ ಸನ್ನೇ ಮಾಡಿದರು. ಆಗಿದ್ದಾಗಲೀ ಎಂದು ಗೊತ್ತಿದ್ದ ಎರಡು ಹೆಸರಲ್ಲಿ ಒಂದನ್ನು ಆಯ್ದುಕೊಂಡು ಹೇಳಿಯೇ ಬಿಟ್ಟೆ. "ಯೆಸ್.... ಡಿಯಾಗೋ ಮರಡೋನಾ ಈಸ್ ದ ರೈಟ್ ಆನ್ಸರ್..ಈ ಸ್ಪರ್ಧೆಯ ವಿಜೇತರು..." ಅಂತಾ ಉತ್ಸಾಹಭರಿತರಾಗಿ ಕ್ವಿಜ್ ಮಾಸ್ಟರ್ ಘೋಷಿಸುತ್ತಿದ್ದರೇ ನಾನು ಕೂತಲ್ಲೇ ಉಬ್ಬುತ್ತಾ ಉಬ್ಬುತ್ತಾ ಹಗುರಾಗಿ ಎಲ್ಲೋ ತೇಲುತ್ತಿದ್ದೆ.

  ಮರಡೋನಾ ನನ್ನನ್ನು ಗೆಲ್ಲಿಸಿಬಿಟ್ಟಿದ್ದ

  ಮರಡೋನಾ ನನ್ನನ್ನು ಗೆಲ್ಲಿಸಿಬಿಟ್ಟಿದ್ದ

  ಎದುರಾಳಿ ತಂಡದವರು ಮುಂದಿನ ಟೇಬಲ್ ಗುದ್ದಿ ಹತಾಶೆ ವ್ಯಕ್ತ ಪಡಿಸೋದು, ಜನರ ಚಪ್ಪಾಳೆ ಯಾವುದೋ ಕನಸಿನಲ್ಲಿ ನಡೆಯುತ್ತಿರುವ ದೃಶ್ಯದಂತೆ ಭಾಸವಾಗುತ್ತಿತ್ತು. ಅಳುಕ್ ಪುಳಕಲ್ಲಿ ಹೇಳಿದ್ದ ಉತ್ತರ ಕ್ಲಿಕ್ ಆಗಿ ಅಂತೂ ಇಂತೂ ಮರಡೋನಾ ನನ್ನನ್ನು ಗೆಲ್ಲಿಸಿಬಿಟ್ಟಿದ್ದ.

  ಹ್ಯಾಂಡ್ ಆಫ್ ಗಾಡ್ ಎಂದರೇನು?

  ಹ್ಯಾಂಡ್ ಆಫ್ ಗಾಡ್ ಎಂದರೇನು?

  ಆಮೇಲೆ ಹ್ಯಾಂಡ್ ಆಫ್ ಗಾಡ್ ಬಗ್ಗೆ ತಿಳಿದುಕೊಂಡಂತೆ ಅದು 1986 ರ ಫಿಫಾ ವಿಶ್ವ ಕಪ್ ಫುಟ್ಬಾಲಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೈಂಟೈನಾ ಮತ್ತು ಇಂಗ್ಲೆಂಡ್ ತಂಡಗಳ ಪಂದ್ಯದಲ್ಲಿ ನಡೆದ ಘಟನೆ. ಆ ಪಂದ್ಯದಲ್ಲಿ ಮರಡೋನಾ ಅರ್ಜೈಂಟೈನಾ ಪರ ಹೆಡರ್ ಮೂಲಕ ಮೊದಲ ಗೋಲ್ ದಾಖಲಿಸುವಾಗ ಚೆಂಡು ಮರಡೋನಾರ ಬಲಗೈಗೆ ಸವರಿತ್ತು. ನಿಯಮ ಪ್ರಕಾರ ಆ ಗೋಲ್ ಅಸಿಂಧು ಆಗಬೇಕಿತ್ತು. ಆದರೆ ರೆಫರಿ ಗಮನಕ್ಕೆ ಇದು ಬಾರದ ಕಾರಣ, ಈಗಿನಂತೆ ವೀಡಿಯೋ ರಿವ್ಯೂ ಇಲ್ಲದ ಕಾರಣ ಆ ಗೋಲನ್ನು ಮರಡೋನಾ ದಕ್ಕಿಸಿಕೊಂಡರು. ಮತ್ತು ಅದೇ ಗೋಲಿನ ಸಹಾಯದಿಂದ 2 - 1 ಅಂತರದಿಂದ ಅವರ ತಂಡ ಗೆದ್ದು ಸೆಮಿಫೈನಲ್ ಪ್ರವೇಶಿಸಲು ಕಾರಣರಾದರು.

  'ಸ್ವಲ್ಪ ನನ್ನ ತಲೆ ಮತ್ತು ಸ್ವಲ್ಪ ದೇವರ ಕೈ..'

  'ಸ್ವಲ್ಪ ನನ್ನ ತಲೆ ಮತ್ತು ಸ್ವಲ್ಪ ದೇವರ ಕೈ..'

  ಅಷ್ಟೇ ಅಲ್ಲದೆ ಮುಂದುವರಿದು ಆ ವರ್ಷದ ವಿಶ್ವಕಪ್ ಅನ್ನು ತನ್ನ ದೇಶಕ್ಕೆ ಗೆದ್ದು ಕೊಡುವಲ್ಲಿ ಮರಡೋನಾ ಪಾತ್ರ ದೊಡ್ಡದು. ಆ ಪಂದ್ಯದ ನಂತರ ಮರಡೋನಾ ಅವರೇ ಹೇಳಿದಂತೆ ಆ ಗೋಲ್ ದಾಖಲಿಸಲು ನೆರವಾಗಿದ್ದು "ಸ್ವಲ್ಪ ನನ್ನ ತಲೆ ಮತ್ತು ಸ್ವಲ್ಪ ದೇವರ ಕೈ (ಹ್ಯಾಂಡ್ಸ್ ಆಪ್ ಗಾಡ್). ಅಲ್ಲಿಂದ ಆ ಗೋಲ್ ಮತ್ತು ಮರಡೋನಾ ಅವರಿಗೆ ಹ್ಯಾಂಡ್ಸ್ ಆಪ್ ಗಾಡ್ ವಿಶೇಷಣ ಅಂಟಿಕೊಂಡಿತು. ಒಂದಷ್ಟು ವಿವಾದಗಳಿದ್ದರೂ ಮರಡೋನಾ ಶೋಷಿತರ ಪರ, ಸಮಾಜ ಪರ ನಿಲುವಿದ್ದವರು. ನಿನ್ನೆ ನಿಧನರಾದ ಇವರು ಕಾಲ್ಚೆಂಡಿನಾಟದ ಕಾಲ್ಚಳಕದಲ್ಲಿ ಸರಿಸಾಟಿಯಿಲ್ಲದ ವಿಶ್ವ ಕಂಡ ಸರ್ವಶ್ರೇಷ್ಠ ಕಿಲಾಡಿ ಎನ್ನುವುದರಲ್ಲಿ ನಿಸ್ಸಂಶಯ.

  English summary
  Kannada lyricist and Director Kavi Raj Remembers Football Legend Diego Maradona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X