ಕನ್ನಡಾಭಿಮಾನ ಮೆರೆದ ಚಿತ್ರ ಸಾಹಿತಿ ಕವಿರಾಜ್
ಸಿನಿಮಾ ಗೀತರಚನೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಸಾಹಿತಿಗಳಲ್ಲಿ ಕವಿರಾಜ್ ಅವರ ಹೆಸರು ಯಾವಗಲೂ ಕೇಳಿ ಬರುತ್ತಿದೆ. ಈಗಿನ ಯುವ ಜನತೆಯ ಮನಸ್ಸು ಮುಟ್ಟುವಂತಹ ಹಾಡುಗಳನ್ನು ಬರೆಯುವುದರಲ್ಲಿ ಕವಿರಾಜ್ ಮೊದಲಿಗರು. ಹಾಡುಗಳನ್ನು ಬರೆಯುವುದರ ಜೊತೆಯಲ್ಲಿ ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಕವಿರಾಜ್ ಕನ್ನಡ ಭಾಷೆ ಎಲ್ಲರ ಬಾಯಲ್ಲೂ ಬರಬೇಕು ಎಂದು ಪ್ರತಿ ನಿತ್ಯ ಹೋರಾಟ ಮಾಡುತ್ತಾರೆ.
ಅದಕ್ಕಗಿಯೇ ಸಮಯ ಮೀಸಲಿಟ್ಟು 'ಕಂಕಣ' ಎನ್ನುವ ತಂಡ ಕಟ್ಟಿಕೊಂಡು ಬೆಂಗಳೂರಿನ ಮಾಲ್ ಗಳಲ್ಲಿ ಐಟಿ ಬಿಟಿ ಕಂಪನಿಗಳ ಮುಂದೆ ನಿಂತು ವಿಭಿನ್ನ ರೀತಿಯಲ್ಲಿ ಭಾಷೆಯ ಮೇಲಿರುವ ತಮ್ಮ ಅಭಿಮಾನ ಹಾಗೂ ಗೌರವವನ್ನು ವ್ಯಕ್ತಪಡಿಸುತ್ತಾರೆ. ಸದ್ಯ ಕವಿರಾಜ್ ಉನ್ನತ ಶಿಕ್ಷಣ ಸಚಿವರಾದ ಜಿ ಟಿ ದೇವೇಗೌಡ ಅವರ ಪರವಾಗಿ ಮಾತನಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದಾರೆ.
"ಜಿ ಟಿ ದೇವೇಗೌಡರು ಮಂತ್ರಿ ಆಗಿರುವುದು ಕನ್ನಡ ಆಡಳಿತ ಭಾಷೆಯಾದ ಕರ್ನಾಟಕದಲ್ಲಿ, ಇಂಗ್ಲೆಂಡ್ ನಲ್ಲಿ ಅಲ್ಲಾ.ಇಂಗ್ಲೀಷ್ ಬರಲೇಬೇಕೆಂಬ ಯಾವ ನಿಯಮವೂ ಇಲ್ಲಿಲ್ಲ. ಇಷ್ಟಕ್ಕೂ ಇಂಗ್ಲೀಷ್ ಬೇರೆ ಭಾಷೆಗಳಂತೆ ಒಂದು ಭಾಷೆಯಷ್ಟೇ, ಅದೇ ಜ್ಞಾನವಲ್ಲ. ಜಗತ್ತಿನ ಅತ್ಯಂತ ಮುಂದುವರಿದ ರಾಷ್ಟ್ರಗಳಾದ ಜಪಾನ್, ಚೀನಾ , ಪ್ರಾನ್ಸ್, ಸ್ವಿಟ್ಜರ್ಲೆಂಡ್, ಸ್ಪೇನ್, ಇಟಲಿ, ಹೀಗೆ ನೂರಾರು ದೇಶಗಳಲ್ಲಿ ಇಂಗ್ಲೀಷ್ ಗೇ ನೆಲೆಯೇ ಇಲ್ಲ.

ಇಂತಹ ನೂರಾರು ದೇಶಗಳ ಅಧ್ಯಕ್ಷರಿಗೂ ಇಂಗ್ಲೀಷ್ ಬರುವುದಿಲ್ಲ. ಇಂಗ್ಲೀಷರಿಂದ ಆಳಿಸಿಕೊಂಡ ಗುಲಾಮಿ ಮನಸ್ಥಿತಿಯ ನಮ್ಮಲ್ಲಿ ಮಾತ್ರ ಇಂಗ್ಲೀಷ್ ಗೇ ವಿಶೇಷ ಸ್ಥಾನಮಾನ". ಎಂದಿದ್ದಾರೆ. ಇತ್ತೀಚಿಗಷ್ಟೆ ವಿದೇಶಿ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿ ಟಿ ದೇವೇಗೌಡರು ಅವರು ಬಟ್ಲರ್ ಇಂಗ್ಲೀಷ್ ಮಾತನಾಡಿದರು ಎಂದು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅನೇಕರು ವ್ಯಂಗ್ಯ ಮಾಡಿದ್ದರು. ಆದ್ದರಿಂದ ಕವಿರಾಜ್ ಈ ಬಗ್ಗೆ ಸ್ಟೇಟಸ್ ಹಾಕಿದ್ದಾರೆ. ಕವಿರಾಜ್ ಅವರ ಮಾತಿಗೆ ಸಾಕಷ್ಟು ಜನರು ಧ್ವನಿಗೂಡಿಸಿದ್ದು ನಿಮ್ಮ ಅಭಿಪ್ರಾಯ ಸರಿಯಾಗಿದೆ. ಭಾಷೆ ಒಂದು ಸಂವಹನಕ್ಕೆ ಅಷ್ಟೇ.. ಎಂದಿದ್ದಾರೆ.


Click it and Unblock the Notifications











