twitter
    For Quick Alerts
    ALLOW NOTIFICATIONS  
    For Daily Alerts

    ಎರಡನೆ ಇನಿಂಗ್ಸ್‌ ಆರಂಭಿಸಿದ ಕವಿತಾ

    By Super
    |

    ದೇವೀರಿಯನ್ನು ಅಲೆದಾಡಲು ಬಿಟ್ಟು ಚಿಪ್ಪಿನಲ್ಲಿ ಹುದುಗಿಹೋಗಿದ್ದ ಕವಿತಾ ಲಂಕೇಶ್‌ ಮತ್ತೆ ಚಲನಶೀಲರಾಗಿದ್ದಾರೆ. ಅರ್ಥಾತ್‌ ಅವರು ಮತ್ತೊಂದು ಸಿನಿಮಾದ ಸಿದ್ಧತೆ ನಡೆಸಿದ್ದಾರೆ. ಅದನ್ನು ಅವರ ಎರಡನೆ ಇನಿಂಗ್ಸ್‌ ಅನ್ನಬಹುದು. ಮೊದಲ ಇನಿಂಗ್ಸ್‌ನಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿರುವ ಕವಿತಾ, ಎರಡನೆಯ ಇನಿಂಗ್ಸ್‌ನಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ.

    ಪ್ರಥಮ ಇನಿಂಗ್ಸ್‌ನಲ್ಲಿ ಕವಿತಾರದ್ದು ಸೀಮೋಲ್ಲಂಘನದ ಸಾಧನೆ. ನಿರ್ದೇಶಕರ ಚೊಚ್ಚಿಲ ಸಿನಿಮಾಕ್ಕೆ ಮೀಸಲಾದ ಅರವಿಂದನ್‌ ಪುರಸ್ಕಾರವನ್ನು ಸ್ವ ಸಾಮರ್ಥ್ಯದಿಂದಲೇ ದಕ್ಕಿಸಿಕೊಂಡ ಕವಿತಾ ಕನ್ನಡ ಸಿನಿಮಾ ಜಗತ್ತಿಗೆ ಪ್ರೇಮಾ ಕಾರಂತ್‌ ನಂತರ ಸಿಕ್ಕ ಪ್ರತಿಭಾನ್ವಿತ ಮಹಿಳಾ ದನಿಯಾಗಿದ್ದರು. ಆ ಕಾರಣದಿಂದಲೇ ಅವರು ಕನ್ನಡದ ಕಣ್ಣುಗಳಿಗೆ ಹೊಸ ಅಲೆಯಂತೆ ಭಾಸವಾಗಿದ್ದರು.

    ದೇವೀರಿ ಹಲವು ವಿಶೇಷಗಳ ಸಿನಿಮಾ. ಬಾಲಿವುಡ್‌ನ ಕಲಾತ್ಮಕ ಸಿನಿಮಾಗಳ ನಟಿ ಎಂದು ಪ್ರಸಿದ್ಧರಾದ ನಂದಿತಾದಾಸ್‌ರನ್ನು ಕನ್ನಡಕ್ಕೆ ಕರೆತಂದ ಅಗ್ಗಳಿಕೆ ಕವಿತಾರದ್ದು . ಅಷ್ಟು ಮಾತ್ರವಲ್ಲದೆ, ಕಥೆಯ ಕೇಂದ್ರ ಪಾತ್ರಕ್ಕೆ ಬಾಸ್ಕೋ ಮನೆಯಿಂದ ಮಂಜ ಅನ್ನುವ ಹುಡುಗನನ್ನು ಹೆಕ್ಕಿ ತಂದಿದ್ದರು. ಇವೆಲ್ಲಕ್ಕೂ ಕಳಸವಿಟ್ಟಂತೆ ಕವಿತಾ ಆರಿಸಿಕೊಂಡಿದ್ದ ಕಥಾವಸ್ತು ಲಂಕೇಶರ ಅಕ್ಕ ಕಾದಂಬರಿ. ಪರಿಣಾಮವಾಗಿ ದೇವೀರಿ ಹಲವು ಪ್ರಥಮಗಳನ್ನು ದಾಖಲಿಸಿತು. 1999-2000 ಸಾಲಿನ ಅತ್ಯುತ್ತಮ ಸಿನಿಮಾ ಎನ್ನುವ ರಾಜ್ಯ ಪ್ರಶಸ್ತಿಯನ್ನೂ ಪಡೆಯಿತು.

    ಲಂಡನ್‌, ಸಿಂಗಪುರ, ಶ್ರೀಲಂಕಾ, ರೋಟರ್‌ ಡ್ಯಾಂ ಗಳನ್ನು ಸುತ್ತಿರುವ ದೇವೀರಿ, ಇತ್ತೀಚೆಗೆ ತಾನೇ (ಮಾ.1) ಪೆನೇಷಿಯಾ ಫೆಸ್ಟಿವಲ್‌ ಡು ಫಿಲ್ಮ್‌ ಏಷಿಯಾಟಿಕ್‌ ಚಿತ್ರೋತ್ಸವದಲ್ಲಿ ಪಾಲ್ಗೊಂಡು ರಸಿಕರ ಮೆಚ್ಚುಗೆಗೆ ಪಾತ್ರವಾಗಿತ್ತು . ಆ ಮಟ್ಟಿಗೆ ದೇವೀರಿ ಅಲೆಮಾರಿಯ ಸಾಲಿಗೆ ಸೇರಿದವಳು. ಅಂದಹಾಗೆ, ಪ್ರಸ್ತುತ ಕವಿತಾ ಚಿತ್ರಿಸುತ್ತಿರುವ ಹೊಸ ಸಿನಿಮಾದ ಹೆಸರು ಕೂಡ ಅಲೆಮಾರಿ.

    ಅಲೆಮಾರಿ ಚಿತ್ರಕ್ಕೆ ಕವಿತಾ ಆರಿಸಿಕೊಂಡಿರುವ ವಸ್ತು ಕೂಡ ಭಿನ್ನವಾಗಿದೆ. ಲಂಬಾಣಿಗಳ ಬದುಕನ್ನು ಚಿತ್ರಿಸಲು ಕವಿತಾ ಮುಂದಾಗಿದ್ದಾರೆ. ದೇವೀರಿಯಲ್ಲಿ ಕೊಳಗೇರಿಯ ಬಗೆಬಗೆ ಮಗ್ಗುಲುಗಳನ್ನು , ಮನುಷ್ಯ ಸಂಬಂಧದ ವಿವಿಧ ನೆಲೆಗಳನ್ನು ಹಾಗೂ ಹಸಿವು, ಆಸೆ, ಕಾಮ, ಸಿಟ್ಟು ಮುಂತಾದ ಮನುಷ್ಯ ಸ್ವಭಾವಗಳನ್ನು ಕವಿತಾ ಸೆರೆಹಿಡಿದಿದ್ದರು. ಪ್ರಸ್ತುತ ಕೊಳಗೇರಿಯಿಂದ ಲಂಬಾಣಿ ತಾಂಡಕ್ಕೆ ಕವಿತಾ ಸಾಗಿದ್ದಾರೆ. ಕಥೆ ಅವರದ್ದೇ, ಮೊದಲಿನಂತೆ ನಿರ್ದೇಶಕರೂ ಹೌದು.

    ಬಿಜಾಪುರ ಜಿಲ್ಲೆಯ ಮೂಲೆಯ ಹಳ್ಳಿಗಳಲ್ಲಿನ ಲಂಬಾಣಿ ತಾಂಡಗಳಲ್ಲಿ ಚಿತ್ರೀಕರಣ ನಡೆಸಲು ಕವಿತಾ ಉದ್ದೇಶಿಸಿದ್ದಾರೆ. ಮಾರ್ಚ್‌ 26 ರಿಂದ ಚಿತ್ರೀಕರಣವೂ ಪ್ರಾರಂಭವಾಗುತ್ತಿದೆ. ಅಲೆಮಾರಿಯ ಪ್ರಮುಖ ಪಾತ್ರಗಳಿಗೆ ಸ್ಥಳೀಯರು ಹಾಗೂ ಸದ್ಯಕ್ಕೆ ಅಲೆಮಾರಿಗಳ ಸಾಲಿಗೆ ಸೇರದೆ ಕನ್ನಡದಲ್ಲೇ ನೆಲೆಸಿರುವ ಭಾವನಾ ಹಾಗೂ ಅನು ಪ್ರಭಾಕರ್‌ ಆಯ್ಕೆಯಾಗಿದ್ದಾರೆ. ಅಲ್ಲಿಗೆ, ಕೇವಲ ಬೊಂಬೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈರ್ವರು ನಟಿಯರಿಗೆ ಪ್ರತಿಭೆಯ ಹರವಿಕೊಳ್ಳಲೊಂದು ಅವಕಾಶ ಸಿಕ್ಕಂತಾಯಿತು.

    ಅಲೆಮಾರಿಯನ್ನು ಕವಿತಾ ಚಿತ್ರೀಕರಿಸುತ್ತಿರುವುದು ಎನ್‌ಎಫ್‌ಡಿಸಿಗೋಸ್ಕರ. ಅಲೆಮಾರಿ ಪ್ರಶಸ್ತಿಗಳನ್ನು ಗುರಿಯಾಗಿಟ್ಟುಕೊಂಡೇ ಸಿದ್ಧವಾಗುತ್ತಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅದೇನಾದರೂ ಇರಲಿ. ಲಂಕೇಶ್‌ ಪುತ್ರಿಯಾಗಿ ಕವಿತಾ ಅವರದ್ದು ಎತ್ತರದ ಬಿತ್ತರಗಳನ್ನು ಮುಟ್ಟುವ ಪ್ರಯತ್ನ .

    ಲಂಕೇಶರ ಜೇಷ್ಠ ಪುತ್ರಿ ಗೌರಿ ಲಂಕೇಶ್‌ ಪತ್ರಿಕೆಯ(ಸಂಪಾದಕಿ) ಸೊಗಡನ್ನು ಸೋಪು ಹಾಕಿ ತೊಳೆಯುತ್ತಿದ್ದಾರೆ, ಪತ್ರಿಕೆಯನ್ನು ಕ್ರೆೃಂ ಮಯವಾಗಿಸಿ ಅಲ್ಲಿನ ಸಾಂಸ್ಕೃತಿಕ ಜೀವಂತಿಕೆಯನ್ನು ಮಾಯವಾಗಿಸುತ್ತಿದ್ದಾರೆ ಎಂದು ಜಾಣ ಜಾಣೆಯರ ಕೆಂಗಣ್ಣಿಗೆ ಗುರಿಯಾಗಿರುವ ಸಂದರ್ಭದಲ್ಲಿ - ಗೌರಿಯ ಸೋದರಿ ಕವಿತಾ ತನ್ನದೇ ಮಾಧ್ಯಮದಲ್ಲಿ ಜನ ಮನ್ನಣೆ ಗಳಿಸುತ್ತಿದ್ದಾರೆ ಹಾಗೂ ಅಪ್ಪನ ಅವತಾರಗಳಲ್ಲಿ ಒಂದಾದ ಸಿನಿಮಾ ಮಾಧ್ಯಮದ ಪೂರ್ಣಾವಧಿ ವಾರಸುದಾರರಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಮತ್ತಷ್ಟು ಎತ್ತರಗಳು ಎಟುಕಲಿ.

    English summary
    After Deveeri kavita lankesh picks up Alemari
    Sunday, July 7, 2013, 15:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X