'ಬಿಗ್ ಬಾಸ್' ಮುಗಿದ್ಮೇಲೂ ತೊಂದರೆ ತಪ್ಪಿಲ್ಲ: ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗಕ್ಕೆ ಕವಿತಾ ದೂರು.!
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಹೆಚ್ಚು ವಿವಾದಕ್ಕೆ ಒಳಗಾದ ಸ್ಪರ್ಧಿಗಳ ಪೈಕಿ ಆಂಡ್ರ್ಯೂ ಅಲಿಯಾಸ್ ಆಂಡಿ ಕೂಡ ಒಬ್ಬರು. ಕ್ಯಾಮರಾದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಸಲುವಾಗಿಯೋ ಅಥವಾ ಫುಟೇಜ್ ಜಾಸ್ತಿ ಪಡೆಯುವ ಉದ್ದೇಶಕ್ಕಾಗಿಯೋ 'ಬಿಗ್ ಬಾಸ್' ಮನೆಯಲ್ಲಿ ಆಂಡಿ ಮಾಡಿದ ಗದ್ದಲ-ಗಲಾಟೆಗಳು ಒಂದೆರಡಲ್ಲ.
ಕಿಚ್ಚ ಸುದೀಪ್ ಮುಂದೆ ಹಲವು ಬಾರಿ ಕ್ಷಮೆ ಕೇಳಿದ್ದ ಆಂಡಿ ವಿರುದ್ಧ ಈಗಾಗಲೇ ಒಂದು ದೂರು ದಾಖಲಾಗಿತ್ತು. 'ಸೂಪರ್ ಹೀರೋಸ್ ವರ್ಸಸ್ ಸೂಪರ್ ವಿಲನ್ಸ್' ಟಾಸ್ಕ್ ನಲ್ಲಿ ಇತರೆ ಸ್ಪರ್ಧಿಗಳ ಕಣ್ಣಿಗೆ ಪರ್ಫ್ಯೂಮ್ ಸ್ಪ್ರೇ ಹೊಡೆದ ಆಂಡಿ ವಿರುದ್ಧ ಬಿಡದಿ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ರಿಜಿಸ್ಟರ್ ಆಗಿತ್ತು.
ಇದೀಗ ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಆಂಡ್ರ್ಯೂ ವಿರುದ್ಧ 'ಚಿನ್ನು' ಕವಿತಾ ಗೌಡ ಕಂಪ್ಲೇಂಟ್ ಕೊಟ್ಟಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೂ ಆಂಡ್ರ್ಯೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕವಿತಾ ಗೌಡ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ. ಮುಂದೆ ಓದಿರಿ...

ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರಂತೆ ಆಂಡ್ರ್ಯೂ
'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೂ ಕವಿತಾಗೆ ಆಂಡ್ರ್ಯೂ ಕಿರುಕುಳ ಕೊಡುತ್ತಿದ್ದಾರಂತೆ. ಎಲ್ಲೇ ಹೋದರೂ, ಕವಿತಾಗೆ ಆಂಡ್ರ್ಯೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿಗೆ ಕವಿತಾ ದೂರು ಕೊಟ್ಟಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಇದ್ದಾಗಲೂ ಕಿರಿಕಿರಿ.!
'ಬಿಗ್ ಬಾಸ್' ಮನೆಯಲ್ಲಿ ಇದ್ದಾಗಲೂ ಕವಿತಾ ಮತ್ತು ಆಂಡ್ರ್ಯೂ ನಡುವೆ ಎಲ್ಲವೂ ಸರಿ ಇರಲಿಲ್ಲ. ನಾಮಿನೇಷನ್ ಟಾಸ್ಕ್ ವೊಂದರಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಅದಾದ್ಮೇಲೆ ಆಂಡ್ರ್ಯೂ ಮತ್ತು ಕವಿತಾ ಮಧ್ಯೆ ಹಲವು ಬಾರಿ ಜಗಳ ಆಗಿತ್ತು. ಮಾತಿನ ಚಕಮಕಿ ನಡೆದಿತ್ತು.

ಗುರುದಾಸ್ ಶೆಣೈ ವಿರುದ್ಧವೂ ದೂರು.!
'ಬಿಗ್ ಬಾಸ್' ಮನೆಯಲ್ಲಿ ಇದ್ದಾಗ ಆಂಡ್ರ್ಯೂ ಕೊಡುತ್ತಿದ್ದ ಕಿರುಕುಳದ ಬಗ್ಗೆ 'ಬಿಗ್ ಬಾಸ್' ಮಾಸ್ಟರ್ ಮೈಂಡ್ ಗುರುದಾಸ್ ಶೆಣೈಗೆ ಕವಿತಾ ಗೌಡ ತಿಳಿಸಿದ್ದರಂತೆ. ಆದರೆ ಗುರುದಾಸ್ ಶೆಣೈ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಅವರ ವಿರುದ್ಧವೂ ಮಹಿಳಾ ಆಯೋಗಕ್ಕೆ ಕವಿತಾ ಕಂಪ್ಲೇಂಟ್ ಕೊಟ್ಟಿದ್ದಾರೆ.

ಮುಂದೇನಾಗುತ್ತೋ.?
'ಬಿಗ್ ಬಾಸ್' ಕಾರ್ಯಕ್ರಮದ ಫಿನಾಲೆ ದಿನ ಕವಿತಾ ಮತ್ತು ಆಂಡ್ರ್ಯೂ ರನ್ನ ಸುದೀಪ್ ಪ್ಯಾಚಪ್ ಮಾಡಿಸಿದ್ದರು. ಆದ್ರೆ, 'ಬಿಗ್ ಬಾಸ್' ಮುಗಿದ್ಮೇಲೂ ಕಿತ್ತಾಟ ಮುಗಿದ ಹಾಗೆ ಕಾಣುತ್ತಿಲ್ಲ. ಮುಂದೆ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೋ, ನೋಡಬೇಕು.


Click it and Unblock the Notifications











