ಕಿಚ್ಚ, ಗೇಲ್ ಜೆರ್ಸಿ ಮೇಲೂ ಪುನೀತ್, ಅಪ್ಪು ಫೋಟೊ ಜತೆ ರೈನಾ ಪೋಸ್; ಕೆಸಿಸಿ ಪುನೀತಮಯ!
ಕಳೆದ ನಾಲ್ಕು ವರ್ಷಗಳಿಂದ ನಡೆಯದಿದ್ದ ಚಂದನವನದ ಕಲಾವಿದರ ಕ್ರಿಕೆಟ್ ಲೀಗ್ ಕನ್ನಡ ಚಲನಚಿತ್ರ ಕಪ್ ( ಕೆಸಿಸಿ ) ಈ ವರ್ಷ ಯಶಸ್ವಿಯಾಗಿ ನಡೆದಿದೆ. ಫೆಬ್ರವರಿ 24ರಂದು ಆರಂಭಗೊಂಡ ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಟೂರ್ನಿ ನಿನ್ನೆ ( ಫೆಬ್ರವರಿ 25 ) ನಡೆದ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಂಡಿದೆ. ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಒಟ್ಟು ಆರು ತಂಡಗಳ ಪೈಕಿ ಉಪೇಂದ್ರ ನಾಯಕತ್ವದ ವಿಜಯನಗರ ಪೇಟ್ರಿಯಾಟ್ಸ್ ಹಾಗೂ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ಫೈನಲ್ ತಲುಪಿದ್ದವು.
ಈ ಮಹಾ ಸೆಣಸಾಟದಲ್ಲಿ ವಿಜಯನಗರ ಪೇಟ್ರಿಯಾಟ್ಸ್ ವಿರುದ್ಧ ಗಂಗಾ ವಾರಿಯರ್ಸ್ ಭರ್ಜರಿ ಜಯ ಸಾಧಿಸುವುದರ ಮೂಲಕ ಟ್ರೋಫಿ ಎತ್ತಿ ಹಿಡಿದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ನಡೆಯುತ್ತಿರುವ ಮೊದಲ ಟೂರ್ನಿಯಾಗಿದ್ದು, ಟೂರ್ನಿಯಲ್ಲಿ ಪುನೀತ್ ರಾಜ್‌ಕುಮಾರ್‌ಗೆ ದೊಡ್ಡ ಮಟ್ಟದಲ್ಲಿಯೇ ಗೌರವ ಸಲ್ಲಿಸಲಾಗಿದೆ.

ಪುನೀತ್ ನಿಧನ ಹೊಂದಿದ ಬಳಿಕ ಬಿಡುಗಡೆಯಾದ ಬಹುತೇಕ ಎಲ್ಲಾ ಚಿತ್ರಗಳು ಹಾಗೂ ಕಿರುಚಿತ್ರಗಳು ಮತ್ತು ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಫೋಟೊವನ್ನು ಮೊದಲು ಪ್ರದರ್ಶಿಸಿ ಗೌರವ ಸಲ್ಲಿಸಲಾಗಿದೆ. ಅದೇ ರೀತಿ ಈ ಕೆಸಿಸಿ ಟೂರ್ನಿಯಲ್ಲಿಯೂ ಸಹ ಪುನೀತ್ ರಾಜ್‌ಕುಮಾರ್ ಅವರ ಫೋಟೊವನ್ನು ಕಣಕ್ಕಿಳಿದ ಪ್ರತಿ ತಂಡ ಪ್ರತಿಯೊಬ್ಬ ಆಟಗಾರನ ಜೆರ್ಸಿ ಮೇಲೆ ಹಾಕಿ ಗೌರವ ಸಲ್ಲಿಸಲಾಗಿದೆ.
ಕೆಸಿಸಿ ಆಯೋಜನೆ ಮಾಡಿದವರ ಈ ನಡೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಹಾಗೂ ಸಿನಿ ರಸಿಕರ ಮೆಚ್ಚುಗೆ ಪಡೆದುಕೊಂಡಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಪ್ರತಿಯೊಂದು ತಂಡದಲ್ಲೂ ಒಬ್ಬ ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟಿಗನನ್ನು ಸೇರಿಸಿಕೊಳ್ಳಲಾಗಿತ್ತು. ಇವರೂ ಸಹ ಪುನೀತ್ ರಾಜ್‌ಕುಮಾರ್ ಭಾವಚಿತ್ರವಿರುವ ಜೆರ್ಸಿ ತೊಟ್ಟು ಕಣಕ್ಕಿಳಿದರು. ಕ್ರಿಸ್ ಗೇಲ್, ಹರ್ಷಲ್ ಗಿಬ್ಸ್, ಬ್ರಿಯಾನ್ ಲಾರಾ, ಸುರೇಶ್ ರೈನಾ ಹಾಗೂ ತಿಲಕರತ್ನೆ ದಿಲ್‌ಶಾನ್ ಅಪ್ಪು ಫೋಟೊ ಇರುವ ಜೆರ್ಸಿ ಧರಿಸಿ ಕಣಕ್ಕಿಳಿದ ಚಿತ್ರಗಳನ್ನು ಅಪ್ಪು ಅಭಿಮಾನಿಗಳು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಸುರೇಶ್ ರೈನಾ ಕಾರ್ ಒಂದರ ಹಿಂಬದಿಯ ಗಾಜಿಗೆ ಹಾಕಿಸಲಾಗಿದ್ದ ಪುನೀತ್ ರಾಜ್‌ಕುಮಾರ್ ಭಾವಚಿತ್ರದ ಮುಂದೆ ನಿಂತು ಪೋಸ್ ನೀಡುತ್ತಾ ಫೋಟೊ ತೆಗೆಸಿಕೊಂಡಿರುವ ಫೋಟೊವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಪ್ಪು ಫೋಟೊ ಇರುವ ಬಾವುಟಗಳು ಹಾಗೂ ಬೋರ್ಡ್ ಹಿಡಿದು ಅಪ್ಪುವನ್ನು ಸಂಭ್ರಮಿಸಿದ್ದಾರೆ.

ಅಂತಿಮವಾಗಿ ಟೂರ್ನಿ ಮುಕ್ತಾಯವಾದ ಬಳಿಕ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡ ತಾವು ಗೆದ್ದ ಟ್ರೋಫಿಯನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಿತು. ಹೀಗೆ ಕೆಸಿಸಿ ಪುನೀತಮಯವಾಗಿತ್ತು. ಕಳೆದ ಬಾರಿಯ ಕನ್ನಡ ಚಲನಚಿತ್ರ ಕಪ್ ಟೂರ್ನಿ ನಡೆದಾಗ ಭಾಗವಹಿಸಿದ್ದ ಪುನೀತ್ ರಾಜ್‌ಕುಮಾರ್ ಇದೇ ಗಂಗಾ ವಾರಿಯರ್ಸ್ ತಂಡದ ನಾಯಕನಾಗಿದ್ದರು. ಹೀಗೆ ತಾನು ಮುನ್ನಡೆಸಿದ್ದ ತಂಡದಿಂದ ಪುನೀತ್ ಅವರಿಗೆ ಗೌರವ ಅರ್ಪಣೆ ಆಗಿದೆ.
ಇದೇ ದಿನ ಮಧ್ಯಾಹ್ನ ಬಿಡುಗಡೆಗೊಂಡ ಡಾಲಿ ಧನಂಜಯ್ ನಟನೆಯ ಚಿತ್ರ ಹೊಯ್ಸಳದ ಸಳ ಸಳ ಹೊಯ್ಸಳ ಹಾಡು ಬಿಡುಗಡೆಗೊಂಡಿತ್ತು. ಈ ಹಾಡಿನಲ್ಲಿ ಚಿತ್ರಮಂದಿರದಲ್ಲಿ ಕುಳಿತಿದ್ದ ಆರೋಪಿಯೋರ್ವನನ್ನು ಅಲ್ಲಿಗೆ ನುಗ್ಗಿ ಧನಂಜಯ್ ಹೊಡೆದು ಹೊರಗೆ ಎಳೆ ತರುವ ದೃಶ್ಯವಿದೆ. ಆ ಚಿತ್ರಮಂದಿರದಲ್ಲಿಯೂ ಸಹ ಪುನೀತ್ ನಟನೆಯ ರಾಜಕುಮಾರ ಚಿತ್ರ ಪ್ರದರ್ಶನಗೊಳ್ಳುತ್ತಿರುತ್ತದೆ ಹಾಗೂ ಧನಂಜಯ್ ನಡೆದು ಬರುವಾಗ ಹಿಂಬದಿಯ ಪರದೆ ಮೇಲೆ ಪುನೀತ್ ಕೂಡ ನಡೆದು ಬರುವ ದೃಶ್ಯ ಪ್ರದರ್ಶನವಾಗುತ್ತಿರುತ್ತದೆ. ಈ ಒಂದು ದೃಶ್ಯ ಸಹ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಮೆಚ್ಚುಗೆ ಪಡೆದುಕೊಂಡಿದೆ.


Click it and Unblock the Notifications











