KCC 2023: ಕೃಷ್ಣ ಅಬ್ಬರದ ಅರ್ಧಶತಕ; ಫೈನಲ್‌ಗೆ ಗಂಗಾ ವಾರಿಯರ್ಸ್, ಇನ್ಯಾವ ತಂಡ ಫೈನಲ್ ತಲುಪುತ್ತೆ?
ಪ್ರಸ್ತುತ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕನ್ನಡ ಚಲನಚಿತ್ರರಂಗ ಕಪ್ ( ಕೆಸಿಸಿ ) ಟೂರ್ನಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ಮೂರು ಪಂದ್ಯಗಳು ಜರುಗಿದ್ದು, ಇಂದು ( ಫೆಬ್ರವರಿ 25 ) ಮೂರು ಪಂದ್ಯಗಳು ನಡೆದಿವೆ.
ಇಂದಿನ ಮೊದಲ ಪಂದ್ಯ ಹಾಗೂ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಉಪೇಂದ್ರ ನಾಯಕತ್ವದ ವಿಜಯನಗರ ಪೇಟ್ರಿಯಾಟ್ಸ್ ಹಾಗೂ ಗಣೇಶ್ ನಾಯಕತ್ವದ ಕದಂಬ ಲಯನ್ಸ್ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕದಂಬ ಲಯನ್ಸ್ ರಾಜೀವ್ ಸ್ಪೋಟಕ ಆಟದ ನೆರವಿನಿಂದ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 120 ರನ್ ಕಲೆಹಾಕಿ ಎದುರಾಳಿ ವಿಜಯನಗರ ಪೇಟ್ರಿಯಾಟ್ಸ್‌ಗೆ 121 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಇನ್ನು ಈ ಗುರಿಯನ್ನು ಬೆನ್ನತ್ತಿದ ವಿಜಯನಗರ ಪೇಟ್ರಿಯಾಟ್ಸ್ ಹರ್ಷಲ್ ಗಿಬ್ಸ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಗೆದ್ದು ಬೀಗಿದೆ. ಹರ್ಷಲ್ ಗಿಬ್ಸ್ 32 ಎಸೆತಗಳಲ್ಲಿ 84 ರನ್ ಚಚ್ಚಿದರು.

ಇನ್ನು ಈ ಪಂದ್ಯ ಮುಗಿದ ಬೆನ್ನಲ್ಲೇ ದಿನದ ಎರಡನೇ ಪಂದ್ಯ ಹಾಗೂ ಟೂರ್ನಿಯ ಐದನೇ ಪಂದ್ಯದಲ್ಲಿ ಶಿವ ರಾಜ್‌ಕುಮಾರ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ಹಾಗೂ ಡಾಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ಮುಖಾಮುಖಿಯಾದವು. ಪಂದ್ಯದಲ್ಲಿ ಟಾಸ್ ಗೆದ್ದ ಒಡೆಯರ್ ಚಾರ್ಜರ್ಸ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗಂಗಾ ವಾರಿಯರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂಗೆ ಮೊದಲು ಬ್ಯಾಟಿಂಗ್ ಮಾಡಿದ ಗಂಗಾ ವಾರಿಯರ್ಸ್ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 113 ರನ್ ಕಲೆ ಹಾಕಿ ಒಡೆಯರ್ ಚಾರ್ಜರ್ಸ್ ತಂಡಕ್ಕೆ 114 ರನ್‌ಗಳ ಗುರಿಯನ್ನು ನೀಡಿತು.
ಗಂಗಾ ವಾರಿಯರ್ಸ್ ಪರ ಡಾರ್ಲಿಂಗ್ ಕೃಷ್ಣ 29 ಎಸೆತಗಳಲ್ಲಿ 58 ರನ್ ಬಾರಿಸಿ ಅಬ್ಬರಿಸಿದರು. ಇನ್ನು ಗಂಗಾ ವಾರಿಯರ್ಸ್ ನೀಡಿದ್ದ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಒಡೆಯರ್ ಚಾರ್ಜರ್ಸ್ ಸೋಲನ್ನು ಅನುಭವಿಸಿತು. ಇನ್ನು ನಿನ್ನೆ ನಡೆದಿದ್ದ ಪಂದ್ಯದಲ್ಲಿ ಸುದೀಪ್ ನಾಯಕತ್ವದ ಹೊಯ್ಸಳ ಈಗಲ್ಸ್ ವಿರುದ್ಧ ಗೆದ್ದು ಈಗ ಒಡೆಯರ್ ಚಾರ್ಜರ್ಸ್ ವಿರುದ್ಧವೂ ಸಹ ಗೆದ್ದು ಲೀಗ್ ಹಂತದ ತನ್ನ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ಗಂಗಾ ವಾರಿಯರ್ಸ್ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.

ಅತ್ತ ನಿನ್ನೆ ನಡೆದ ಪಂದ್ಯದಲ್ಲಿ ಹೊಯ್ಸಳ ಈಗಲ್ಸ್ ವಿರುದ್ಧ ಸೋತು, ಈಗ ಗಂಗಾ ವಾರಿಯರ್ಸ್ ವಿರುದ್ಧವೂ ಸಹ ಸೋತಿರುವ ಶಿವ ರಾಜ್‌ಕುಮಾರ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಇನ್ನೂ ಸಹ ಒಂದು ಪಂದ್ಯ ಬಾಕಿ ಇದ್ದು, ಈ ಪಂದ್ಯ ಮುಕ್ತಾಯವಾದ ಬಳಿಕ ಯಾವ ತಂಡ ಫೈನಲ್ ತಲುಪಿ ಗಂಗಾ ವಾರಿಯರ್ಸ್ ವಿರುದ್ಧ ಸೆಣಸಾಡಲಿದೆ ಎಂಬುದು ತಿಳಿಯಲಿದೆ.
ಇಲ್ಲಿಯವರೆಗಿನ ಪಂದ್ಯಗಳು ಹಾಗೂ ಫಲಿತಾಂಶ
* ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್ - ಗಂಗಾ ವಾರಿಯರ್ಸ್ ಗೆಲುವು
* ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್ - ಹೊಯ್ಸಳ ಈಗಲ್ಸ್ ಗೆಲುವು
* ಕದಂಬ ಲಯನ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್ - ಕದಂಬ ಲಯನ್ಸ್ ಗೆಲುವು
* ಕದಂಬ ಲಯನ್ಸ್ vs ವಿಜಯನಗರ ಪೇಟ್ರಿಯಾಟ್ಸ್ - ವಿಜಯನಗರ ಪೇಟ್ರಿಯಾಟ್ಸ್ ಗೆಲುವು
* ಗಂಗಾ ವಾರಿಯರ್ಸ್ vs ಒಡೆಯರ್ ಚಾರ್ಜರ್ಸ್ - ಗಂಗಾ ವಾರಿಯರ್ಸ್ ಗೆಲುವು
* ವಿಜಯನಗರ ಪೇಟ್ರಿಯಾಟ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್ - ಪಂದ್ಯ ಇನ್ನೂ ಮುಗಿದಿಲ್ಲ.
ಸದ್ಯ ಎರಡೂ ಪಂದ್ಯಗಳನ್ನೂ ಸಹ ಗೆದ್ದಿರುವ ಗಂಗಾ ವಾರಿಯರ್ಸ್ ಫೈನಲ್ ಪ್ರವೇಶಿಸಿದ್ದು, ಮತ್ತೊಂದು ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ವಿಜಯನಗರ ಪೇಟ್ರಿಯಾಟ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್ ಪಂದ್ಯದಲ್ಲಿ ವಿಜಯನಗರ ಪ್ಯಾಂಥರ್ಸ್ ಗೆದ್ದರೆ ಆ ತಂಡ ಸಹ ಎರಡು ಪಂದ್ಯಗಳನ್ನು ಗೆದ್ದಂತಾಗಲಿದ್ದು, ಫೈನಲ್ ತಲುಪಲಿದೆ. ಒಂದು ವೇಳೆ ರಾಷ್ಟ್ರಕೂಟ ಪ್ಯಾಂಥರ್ಸ್ ಗೆದ್ದರೆ ರಾಷ್ಟ್ರಕೂಟ ಪ್ಯಾಂಥರ್ಸ್, ಕದಂಬ ಲಯನ್ಸ್, ಹೊಯ್ಸಳ ಈಗಲ್ಸ್ ಹಾಗೂ ವಿಜಯನಗರ ಪೇಟ್ರಿಯಾಟ್ಸ್ ತಂಡಗಳ ನಡುವೆ ಪೈಪೋಟಿ ಉಂಟಾಗಲಿದೆ.


Click it and Unblock the Notifications











