KCC 2023: ಧನಂಜಯ್ vs ಉಪೇಂದ್ರ ಟೀಮ್ ನಡುವಿನ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್ ಆಗಿದ್ದಾರು?
ಕಳೆದ ಎರಡು ದಿನಗಳ ಕಾಲ ನಡೆದ ಕನ್ನಡ ಚಲನಚಿತ್ರ ಕಪ್ ( ಕೆಸಿಸಿ ) ಕ್ರಿಕೆಟ್ ಟೂರ್ನಿಗೆ ನಿನ್ನೆ ( ಫೆಬ್ರವರಿ 25 ) ತೆರೆ ಬಿದ್ದಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಿಯಲ್ಲಿ ಆರು ತಂಡಗಳು ಕಣಕ್ಕಿಳಿದಿದ್ದವು. ಆರು ತಂಡಗಳು ಲೀಗ್ ಹಂತದಲ್ಲಿ ತಲಾ ಎರಡು ಪಂದ್ಯಗಳನ್ನು ಆಡಿದವು ಹಾಗೂ ಅತಿಹೆಚ್ಚು ಪಂದ್ಯಗಳನ್ನು ಗೆದ್ದ ಎರಡು ತಂಡಗಳು ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟವು.
ಈ ಬಾರಿಯ ಕೆಸಿಸಿಯಲ್ಲಿ ಗಂಗಾ ವಾರಿಯರ್ಸ್ ತಂಡವನ್ನು ಧನಂಜಯ್ ಮುನ್ನಡೆಸಿದರೆ, ಕದಂಬ ಲಯನ್ಸ್ ತಂಡವನ್ನು ಗಣೇಶ್, ಒಡೆಯರ್ ಚಾರ್ಜರ್ಸ್ ತಂಡವನ್ನು ಶಿವ ರಾಜ್‌ಕುಮಾರ್, ಹೊಯ್ಸಳ ಈಗಲ್ಸ್ ತಂಡವನ್ನು ಕಿಚ್ಚ ಸುದೀಪ್, ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಉಪೇಂದ್ರ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಧ್ರುವ ಸರ್ಜಾ ಮುನ್ನಡೆಸಿದರು.

ಶಿವ ರಾಜ್‌ಕುಮಾರ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ತಂಡ ಯಾವುದೇ ಪಂದ್ಯವನ್ನೂ ಗೆಲ್ಲದೇ ಹೊರಬಿದ್ದರೆ, ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಲೀಗ್ ಹಂತದ ಎರಡೂ ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇನ್ನುಳಿದಂತೆ ಸುದೀಪ್ ನಾಯಕತ್ವದ ಹೊಯ್ಸಳ ಈಗಲ್ಸ್, ಉಪೇಂದ್ರ ನಾಯಕತ್ವದ ವಿಜಯನಗರ ಪೇಟ್ರಿಯಾಟ್ಸ್, ಗಣೇಶ್ ನಾಯಕತ್ವದ ಕದಂಬ ಲಯನ್ಸ್ ಹಾಗೂ ಧ್ರುವ ಸರ್ಜಾ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿದವು.
ಇನ್ನು ಅತಿಹೆಚ್ಚು ನೆಟ್ ರನ್ ರೇಟ್ ಹೊಂದಿದ್ದ ಕಾರಣ ಉಪೇಂದ್ರ ನಾಯಕತ್ವದ ವಿಜಯನಗರ ಪೇಟ್ರಿಯಾಟ್ಸ್ ತಂಡ ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ಹಾಗೂ ಉಪೇಂದ್ರ ನಾಯಕತ್ವದ ವಿಜಯನಗರ ಪೇಟ್ರಿಯಾಟ್ಸ್ ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗಂಗಾ ವಾರಿಯರ್ಸ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಕಳೆದ ಪಂದ್ಯಗಳಲ್ಲಿ ಅಬ್ಬರಿಸಿದಂತೆ ಫೈನಲ್ ಪಂದ್ಯದಲ್ಲಿ ನೂರರ ಗಡಿ ದಾಟದ ವಿಜಯನಗರ ಪೇಟ್ರಿಯಾಟ್ಸ್ ತಂಡ 10 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 81 ರನ್ ಕಲೆಹಾಕಿ ಗಂಗಾ ವಾರಿಯರ್ಸ್ ತಂಡಕ್ಕೆ 82 ರನ್‌ಗಳ ಗುರಿಯನ್ನು ನೀಡಿತು. ಇನ್ನು ಈ ಗುರಿಯನ್ನು ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ಯಶಸ್ವಿಯಾಗಿ ಬೆನ್ನತ್ತಿ ಗೆಲುವನ್ನು ಕಂಡು ಚಾಂಪಿಯನ್ ಎನಿಸಿಕೊಂಡಿದೆ. ಈ ಮೂಲಕ ಉಪೇಂದ್ರ ನಾಯಕತ್ವದ ವಿಜಯನಗರ ಪೇಟ್ರಿಯಾಟ್ಸ್ ರನ್ನರ್ ಅಪ್ ಆಗಿದೆ.

ಎಲ್ಲಾ ಪಂದ್ಯಗಳ ಫಲಿತಾಂಶ
ಈ ಬಾರಿಯ ಕೆಸಿಸಿ ಟೂರ್ನಿಯ ಎಲ್ಲಾ ಪಂದ್ಯಗಳ ಫಲಿತಾಂಶ ಈ ಕೆಳಕಂಡಂತಿದೆ..
* ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್ - ಗಂಗಾ ವಾರಿಯರ್ಸ್ ಗೆಲುವು
* ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್ - ಹೊಯ್ಸಳ ಈಗಲ್ಸ್ ಗೆಲುವು
* ಕದಂಬ ಲಯನ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್ - ಕದಂಬ ಲಯನ್ಸ್ ಗೆಲುವು
* ಕದಂಬ ಲಯನ್ಸ್ vs ವಿಜಯನಗರ ಪೇಟ್ರಿಯಾಟ್ಸ್ - ವಿಜಯನಗರ ಪೇಟ್ರಿಯಾಟ್ಸ್ ಗೆಲುವು
* ಗಂಗಾ ವಾರಿಯರ್ಸ್ vs ಒಡೆಯರ್ ಚಾರ್ಜರ್ಸ್ - ಗಂಗಾ ವಾರಿಯರ್ಸ್ ಗೆಲುವು
* ವಿಜಯನಗರ ಪೇಟ್ರಿಯಾಟ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್ - ರಾಷ್ಟ್ರಕೂಟ ಪ್ಯಾಂಥರ್ಸ್ ಗೆಲುವು
ಫೈನಲ್ ಪಂದ್ಯ: ಗಂಗಾ ವಾರಿಯರ್ಸ್ vs ವಿಜಯನಗರ ಪೇಟ್ರಿಯಾಟ್ಸ್ - ಗಂಗಾ ವಾರಿಯರ್ಸ್ ಗೆಲುವು


Click it and Unblock the Notifications











