ಕೊನೆಯ ಬಾಲ್ ನಲ್ಲಿ ಫೈನಲ್ ಗೆದ್ದ ಗಣೇಶ್: 6 ಎಸೆತದ ರೋಚಕ ಕಥೆ
'ಕನ್ನಡ ಚಲನಚಿತ್ರ ಕಪ್' ಎರಡನೇ ಆವೃತ್ತಿ ಯಶಸ್ವಿಯಾಗಿ ಮುಗಿದಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದ 'ಒಡೆಯರ್ ಚಾರ್ಜರ್ಸ್' ತಂಡ ಕೆಸಿಸಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ತೀರಾ ರೋಚಕವಾಗಿ ನಡೆದ ಈ ಪಂದ್ಯದಲ್ಲಿ ಒಡೆಯರ್ ಚಾರ್ಜರ್ಸ್ ಕೊನೆಯ ಎಸೆತದಲ್ಲಿ ಗೆಲುವಿನ ಗುರಿ ಮುಟ್ಟಿದರು. ಅಲ್ಲಿಯವರೆಗೂ ಈ ಪಂದ್ಯ ಯಾರು ಗೆಲ್ತಾರೆ ಎಂಬುದು ನಿರ್ಧರಿಸಲು ಸಾಧ್ಯವೇ ಇರಲಿಲ್ಲ.
ಮೊದಲು ಬ್ಯಾಟ್ ಮಾಡಿದ್ದ ಯಶ್ ಸಾರಥ್ಯದ 'ರಾಷ್ಟ್ರಕೂಟ ಪ್ಯಾಂಥರ್ಸ್' 123 ರನ್ ಗಳ ಟಾರ್ಗೆಟ್ ನೀಡಿದ್ದರು. ಈ ಮೊತ್ತವನ್ನ ಬೆನ್ನತ್ತಿದ ಗಣೇಶ್ ಪಡೆ ಅಂತಿಮ ಕ್ಷಣದ ವರೆಗೂ ಪೈಪೋಟಿ ನಡೆಸಿ ವಿಜಯಲಕ್ಷ್ಮಿಯನ್ನ ಒಲಿಸಿಕೊಂಡಿತು.
ಇಡೀ ಪಂದ್ಯದ ಫಲಿತಾಂಶ ನಿರ್ಧಾರವಾಗಿದ್ದೇ ಕೊನೆಯ ಆರು ಎಸೆತಗಳಲ್ಲಿ. ಪ್ರತಿಯೊಂದು ಬಾಲಿನಲ್ಲೂ ರೋಚಕತೆ ಹೆಚ್ಚುತ್ತಿತ್ತು. ಒಂದು ಬಾಲ್ ನಲ್ಲಿ ವಿಜಯಲಕ್ಷ್ಮಿ ಯಶ್ ತಂಡಕ್ಕೆ ಹೋದ್ರೆ, ಇನ್ನೊಂದು ಬಾಲ್ ನಲ್ಲಿ ವಿಜಯಲಕ್ಷ್ಮಿ ಗಣೇಶ್ ಕಡೆ ವಾಲುತ್ತಿತ್ತು. ಹಾಗಿದ್ರೆ, ಕೊನೆಯ ಓವರ್ ನಲ್ಲಿ ಗೆಲ್ಲಲು ಎಷ್ಟು ರನ್ ಬೇಕಿತ್ತು. ಯಾರು ಮೈದಾನದಲ್ಲಿದ್ದರು. ಹೇಗಿತ್ತು ಆಟ.? ಮುಂದೆ ಓದಿ.....
ಚಿತ್ರಗಳ ಕೃಪೆ: ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು. ಟ್ವಿಟ್ಟರ್-ಫೇಸ್ ಬುಕ್

ಕೊನೆಯ ಓವರ್ ನಲ್ಲಿ 8 ರನ್ ಬೇಕಿತ್ತು
'ಒಡೆಯರ್ಸ್ ಜಾರ್ಜರ್ಸ್' ತಂಡಕ್ಕೆ ಕೊನೆಯ ಓವರ್ ನಲ್ಲಿ 8 ರನ್ ಬೇಕಿತ್ತು. ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಮತ್ತು ನಟ ನಿರೂಪ್ ಭಂಡಾರಿ (ರಂಗಿತರಂಗ) ಕ್ರೀಸ್ ನಲ್ಲಿದ್ದರು. 'ರಾಷ್ಟ್ರಕೂಟ ಪ್ಯಾಂಥರ್ಸ್' ಪರವಾಗಿ ನವೀನ್ ರಘು ಬೌಲಿಂಗ್ ದಾಳಿ ಮಾಡಿದರು.

ಮೊದಲ ಎಸೆತದಲ್ಲಿ ಒಂದು ರನ್
ಕೊನೆಯ ಓವರ್ ನಲ್ಲಿ ಮೊದಲ ಎಸೆತವನ್ನ ಎದುರಿಸಿದ ನಟ ನಿರೂಪ್ ಭಂಡಾರಿ, ಒಂದು ರನ್ ಮಾತ್ರ ಕಲೆ ಹಾಕಿದ್ರು. ಆದ್ರೆ, ಈ ರನ್ ಬಂದಿದ್ದು ಅದೃಷ್ಟ. ಯಾಕಂದ್ರೆ, ನಿರೂಪ್ ಭಂಡಾರಿ ಅವರ ಬ್ಯಾಟಿನಿಂದ ರನ್ ಬಂದಿಲ್ಲ. ಟೈ ಪ್ಯಾಡ್ ಗೆ ತಾಗಿ ಒಂದು ರನ್ ಬಂತು. ರನ್ ಕದಿಯುವ ಯತ್ನದಲ್ಲಿ ದಿಲ್ಶಾನ್ ರನ್ ಔಟ್ ಆಗುವ ಸಾಧ್ಯತೆ ಇತ್ತು. ಜಸ್ಟ್ ಮಿಸ್ ಆಯ್ತು.

ಎರಡನೇ ಎಸೆತವೂ ಒಂದೇ ರನ್
ನವೀನ್ ರಘು ಅವರು ಎಸೆತ ಎರಡನೇ ಬಾಲ್ ದಿಲ್ಶಾನ್ ಎದುರಿಸಿದರು. ದೊಡ್ಡ ಹೊಡೆತಕ್ಕೆ ಕೈ ಹಾಕಿದ ದಿಲ್ಶಾನ್ ಕೇವಲ ಒಂದು ರನ್ ಮಾತ್ರ ಗಳಿಸಿದರು. ಅಲ್ಲಿಗೆ 'ಒಡೆಯರ್ ಚಾರ್ಜರ್ಸ್' ತಂಡಕ್ಕೆ ಉಳಿದ ನಾಲ್ಕು ಎಸೆತದಲ್ಲಿ 6 ರನ್ ಬೇಕಾಗಿರುತ್ತೆ.

ಮೂರನೇ ಬಾಲ್ ನಲ್ಲಿ ದಿಲ್ಶಾನ್ ಔಟ್
ಮೂರನೇ ಎಸೆತವನ್ನ ನಟ ನಿರೂಪ್ ಭಂಡಾರಿ ಎದುರಿಸಿದರು. ದೊಡ್ಡ ಹೊಡೆತ ಬಾರಿಸಲು ಹೋಗಿ ಕ್ಯಾಚ್ ನೀಡಿದರು. ಆದ್ರೆ, ಈ ಕ್ಯಾಚ್ ಚೆಲ್ಲಿದ ಕೃಷ್ಣ ನಾನ್ ಸ್ಟ್ರೈಕ್ ನಿಂದ ಓಡುತ್ತಿದ್ದ ದಿಲ್ಶಾನ್ ಅವರನ್ನ ರನ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಅಲ್ಲಿಗೆ ಮೂರನೇ ಎಸೆತದಲ್ಲಿ ರನ್ ಬಂದಿಲ್ಲ. ಆದ್ರೆ, ದಿಲ್ಶಾನ್ ಅಂತಹ ಮುಖ್ಯವಾದ ವಿಕೆಟ್ ಕಳೆದುಕೊಂಡ ಒಡೆಯರ್ ತಂಡ ಸೋಲಿನ ಕಡೆ ಮುಖ ಮಾಡಿತು.

ನಾಲ್ಕನೇ ಎಸೆತದಲ್ಲಿ ಎರಡು ರನ್
ದಿಲ್ಶಾನ್ ಸ್ಥಾನಕ್ಕೆ ರಿತೇಶ್ ಭಟ್ಕಳ್ ಕ್ರೀಸ್ ಗೆ ಬಂದರು. ನವೀನ್ ರಘು ಅವರ ನಾಲ್ಕನೇ ಎಸೆತ ಎದುರಿಸಿದ ರಿತೇಶ್ ಬೌಂಡರಿ ಹೊಡೆಯುವ ಪ್ರಯತ್ನ ಮಾಡಿದರು. ಆದ್ರೆ, ಎರಡು ರನ್ ಗಳಿಸಿದರು. ಅಲ್ಲಿಗೆ ಎರಡು ಬಾಲ್ ಗೆ ನಾಲ್ಕು ರನ್ ಬೇಕಾಯಿತು.
ಕೆಸಿಸಿ 2018: ಶಿವಣ್ಣ ಬಳಗ 'ಪ್ಯಾಟ್ರಿಯೋಟ್ಸ್'ಗೆ 7 ವಿಕೆಟ್ ಭರ್ಜರಿ ಜಯ

ಐದನೇ ಎಸೆತದಲ್ಲಿ ಎರಡು ರನ್
ಎರಡು ಎಸೆತದಲ್ಲಿ ನಾಲ್ಕು ರನ್ ಬೇಕಿತ್ತು. ಐದನೇ ಬಾಲ್ ಎದುರಿಸಿದ ರಿತೇಶ್ ಭಟ್ಕಳ್ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸುವ ಪ್ರಯತ್ನ ಮಾಡಿದರು. ಆದ್ರೆ, ಎರಡು ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾದರು. ಈ ವೇಳೆ ಎರಡನೇ ರನ್ ಕದಿಯುವ ಪ್ರಯತ್ನಲ್ಲಿ ನಾನ್ ಸ್ಟ್ರೈಕ್ ಕಡೆ ಓಡುತ್ತಿದ್ದ ನಿರೂಪ್ ಭಂಡಾರಿ ರನ್ ಔಟ್ ಆಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಮಿಸ್ ಆಯ್ತು.
ಕೆಸಿಸಿ 2018: ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ಫೈನಲ್ ಗೆ

ಕೊನೆಯ ಬಾಲ್ ನಲ್ಲಿ ಸಿಕ್ಸರ್
ಕೊನೆಯ ಒಂದು ಎಸೆತದಲ್ಲಿ ಒಡೆಯರ್ಸ್ ಜಾರ್ಜರ್ಸ್ ತಂಡ ಗೆಲ್ಲಲು ಎರಡು ರನ್ ಬೇಕಿತ್ತು. ನವೀನ್ ಹಾಕಿದ ಬಾಲ್ ನ್ನ ನೇರವಾಗಿ ಸಿಕ್ಸರ್ ಬಾರಿಸುವ ಮೂಲಕ ರಿತೇಶ್ ಭಟ್ಕಳ್ ಗೆಲುವನ್ನ ಸಂಭ್ರಮಿಸಿದರು. ಅಲ್ಲಿಗೆ ಎರಡನೇ ಆವೃತ್ತಿಯ ಕೆಸಿಸಿ ಟ್ರೋಫಿಯನ್ನ ಚೊಚ್ಚಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ತಂಡ ಮುಡಿಗೇರಿಸಿಕೊಂಡಿತು.


Click it and Unblock the Notifications











