ರೀ-ರೆಕಾರ್ಡಿಂಗ್ ವಿಚಾರದಲ್ಲಿ ಪ್ರೇಮ್ 'ಕೆಡಿ'- ದಿ ಡೆವಿಲ್ ವಿಶಿಷ್ಟ ದಾಖಲೆ
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭಿಸಿದ್ದಾರೆ. ಹಂಗೇರಿಯಾದ ಬುದಾಪೆಸ್ಟ್‌ನಲ್ಲಿ ಸದ್ಯ ಪ್ರೇಮ್ ಹಾಗೂ ಅರ್ಜುನ್ ಜನ್ಯಾ ಬೀಡು ಬಿಟ್ಟಿದ್ದಾರೆ. ಅಲ್ಲೇ ಚಿತ್ರದ ರೀ-ರೆಕಾರ್ಡಿಂಗ್ ನಡೀತಿದೆ.
ಜಗತ್ತಿನಲ್ಲೇ ಯಾವುದೇ ಚಿತ್ರಕ್ಕೂ ಕೆಲಸ ಮಾಡಿರದಷ್ಟು ಸಂಗೀತಗಾರರು, ವಾದ್ಯಕಲಾವಿದರು, 'ಕೆಡಿ' ಚಿತ್ರಕ್ಕೆ ಹಿನ್ನೆಲೆ ಸಂಗೀನ ನುಡಿಸುತ್ತಿದ್ದಾರೆ. ಲೈವ್ ರೆಕಾರ್ಡಿಂಗ್ ಮಾಡ್ತಿರೋ ಬಗ್ಗೆ ಶೀಘ್ರದಲ್ಲೇ ಲೈವ್ ಬಂದು ಮಾಹಿತಿ ನೀಡುವುದಾಗಿ ಪ್ರೇಮ್ ಹೇಳಿದ್ದಾರ. ಧ್ರುವ ಸರ್ಜಾ ನಿರ್ದೇಶನದ 'ಕೆಡಿ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಚಿತ್ರದ ಎರಡು ಸಾಂಗ್ ಬಂದು ಹಿಟ್ ಲಿಸ್ಟ್ ಸೇರಿದೆ.

ಇತ್ತೀಚೆಗೆ ಪ್ಯಾನ್ ಇಂಡಿಯಾ ಟೂರ್ ಮಾಡಿ 'ಕೆಡಿ' ಚಿತ್ರದ ಟೀಸರ್ ರಿಲೀಸ್ ಮಾಡಿತ್ತು ಚಿತ್ರತಂಡ. ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಕೂಡ ತಂಡದ ಜೊತೆ 5 ರಾಜ್ಯಗಳಿಗೆ ಭೇಟಿ ನೀಡಿದ್ದರು. ಟೀಸರ್ ರಿಲೀಸ್ ಮಾಡಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದರು. ಟೀಸರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಬಗ್ಗೆ ಗೊಂದಲ ಮುಂದುವರೆದಿದೆ.
ಕಳೆದ ವರ್ಷವೇ ಸಿನಿಮಾ ಬಿಡುಗಡೆ ಮಾಡುವುದಾಗಿ ಪ್ರೇಮ್ ಹೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ವರ್ಷ 7 ತಿಂಗಳು ಕಳೆದರೂ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಲಿಲ್ಲ. ಪ್ರೇಮ್‌ಗೆ ವರಲಕ್ಷ್ಮಿ ಹಬ್ಬದ ಸೆಂಟಿಮೆಂಟ್ ಜಾಸ್ತಿ. ಹಾಗಾಗಿ ಈ ಬಗ್ಗೆ ಹಬ್ಬಕ್ಕೆ ಸಿನಿಮಾ ತೆರೆಗೆ ಬರಬಹುದು ಎನ್ನುವ ನಿರೀಕ್ಷೆ ಇತ್ತು. ಅದು ಸುಳ್ಳಾಗಿದೆ.
ಈ ವರ್ಷ ಫಸ್ಟ್ ಹಾಫ್ ಕನ್ನಡ ಚಿತ್ರರಂಗಕ್ಕೆ ಹಿನ್ನಡೆಯಾಗಿತ್ತು. ಆದರೆ 'ಎಕ್ಕ' ಹಾಗೂ 'ಸು ಫ್ರಂ ಸೋ' ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಹುನಿರೀಕ್ಷಿತ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿವೆ. 'ಡೆವಿಲ್', '45', 'ಕಾಂತಾರ-1', 'ಲ್ಯಾಂಡ್‌ಲಾರ್ಡ್' ಹೀಗೆ ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್ ಸಿನಿಮಾಗಳು ಲಿಸ್ಟ್‌ನಲ್ಲಿದೆ. ವರ್ಷದ ಕೊನೆಗೆ ಸುದೀಪ್ ತಮ್ಮ ಹೊಸ ಸಿನಿಮಾ ಬಿಡುಗಡೆ ಮಾಡಲು ಮನಸ್ಸು ಮಾಡಿದ್ದಾರೆ. ಇದೆಲ್ಲದರ ನಡುವೆ ಪ್ರೇಮ್ ನಿರ್ದೇಶನದ 'ಕೆಡಿ' ಬಿಡುಗಡೆ ಯಾವಾಗ ಎನ್ನುವ ಚರ್ಚೆ ಶುರುವಾಗಿದೆ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ 'ಕೆಡಿ' ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. 70ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಒಂದಷ್ಟು ನೈಜ ಘಟನೆಗಳ ಹಿನ್ನೆಲೆಯಲ್ಲಿ ಪ್ರೇಮ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ರಗಡ್ ಅವತಾರದಲ್ಲಿ ಧ್ರುವ ಸರ್ಜಾ ಅಬ್ಬರಿಸಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ಚಿತ್ರದ ತಾರಾಗಣದಲ್ಲಿದ್ದಾರೆ. ಧ್ರುವ ಜೋಡಿಯಾಗಿ ರೀಷ್ಮ ನಾಣಯ್ಯ ನಟಿಸಿದ್ದಾರೆ. ಬಹಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಕಾರಣಾಂತರಗಳಿಂದ ತೆರೆಗೆ ಬರುವುದು ತಡವಾಗುತ್ತಲೇ ಇದೆ. ಸಿನಿರಸಿಕರು ಬೇಗ ಸಿನಿಮಾ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಲೇ ಬರ್ತಿದ್ದಾರೆ.
ಕಳೆದ ವರ್ಷ ಕೂಡ ಸಿನಿಮಾ ಬಿಡುಗಡೆ ವಿಚಾರದಲ್ಲಿ ಕೊಂಚ ಗೊಂದಲವಾಗಿತ್ತು. ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಯುಐ' ಹಾಗೂ ಸುದೀಪ್ ನಟನೆ 'ಮ್ಯಾಕ್ಸ್' ಸಿನಿಮಾಗಳು 4 ದಿನಗಳ ಅಂತರದಲ್ಲಿ ತೆರೆಗೆ ಬಂದಿತ್ತು. ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಟ್ಟಿತ್ತು. ಅಂತಿಮವಾಗಿ 'ಯುಐ' ಚಿತ್ರಕ್ಕೆ ಕೊಂಚ ಹಿನ್ನಡೆ ಆಗಿದ್ದು ಸುಳ್ಳಲ್ಲ. ಹಾಗಾಗಿ ಪ್ರೇಮ್ ಬೇಗ ಒಳ್ಳೆ ಡೇಟ್ ಘೋಷಣೆ ಮಾಡಬೇಕಿದೆ.


Click it and Unblock the Notifications











