'ಕೆಟ್ಟೋದೆ ಕೆಟ್ಟೋದೆ' ಅಂತ ದರ್ಶನ್ ಜೊತೆ ಕುಣಿದಿದ್ದ ರಕ್ಷಿತಾ, ಬಳಿಕ ಏನಾಯ್ತು? ಯಾರು ಕಾಮೆಂಟ್ ಮಾಡ್ಲೇಬಾರ್ದಾ?
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ವಿವಾದಕ್ಕೆ ಸಿಲುಕಿದೆ. ಅದಕ್ಕೆ ಕಾರಣ 'ಸರ್ಸೆ ಸರ್ಸೆ' ಸಾಂಗ್ ಸಾಹಿತ್ಯ. ಕನ್ನಡದಲ್ಲಿ ಸ್ವತಃ ಪ್ರೇಮ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅಶ್ಲೀಲ, ಅಸಭ್ಯ ಸಾಹಿತ್ಯದ ಬಗ್ಗೆ ಭಾರೀ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದೆ. ಯೂಟ್ಯೂಬ್‌ನಿಂದ ಹಿಂದಿ ವರ್ಷನ್ ಸಾಂಗ್ ಡಿಲೀಟ್ ಮಾಡಲಾಗಿದೆ. ಹಾಡಿನಲ್ಲಿ ಹೆಜ್ಜೆ ಹಾಕಿರುವ ನಟಿ ನೋರಾ ಫತೇಹಿ ಕೂಡ ಈಗ ಉಲ್ಟಾ ಹೊಡೆದಿದ್ದಾರೆ.
'ಸರ್ಸೆ ಸರ್ಸೆ' ಹಾಡಿನ ಡಬಲ್ ಮೀನಿಂಗ್ ಸಾಹಿತ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಒಂದ್ಕಾಲದಲ್ಲಿ ಅದ್ಭುತ ಹಾಡುಗಳನ್ನು ಕೊಟ್ಟಿದ್ದ ಪ್ರೇಮ್ ಈಗ ಇಷ್ಟು ಕೀಳು ಅಭಿರುಚಿಯ ಹಾಡು ಬರೆದಿದ್ದು ಯಾಕೆ? ಎಲ್ಲಾ ಪಬ್ಲಿಸಿಟಿ ಗಿಮಿಕ್ಕಾ? ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಡಿನಲ್ಲಿ ಅಂತಹ ತಪ್ಪೇನು ಇಲ್ಲ, ಜನ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ, ನೀವು ಹೆದರಬೇಡಿ ಎಂದು ಮತ್ತೆ ಕೆಲವರು ಪ್ರೇಮ್ ಬೆಂಬಲಕ್ಕೆ ನಿಂತಿದ್ದಾರೆ.

ರಕ್ಷಿತಾ ಕೂಡ ಪತಿ ಪ್ರೇಮ್ ಪರ ಬ್ಯಾಟ್ ಬೀಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದರು. ಜೀ-ಕನ್ನಡ ನ್ಯೂಸ್ ವಾಹಿನಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ಹಂತಕ್ಕೆ ತಪ್ಪು ಒಪ್ಪಿಕೊಂಡರೂ, ಯಾರು ಮಾಡದ ತಪ್ಪು ಪ್ರೇಮ್ ಮಾಡಿಲ್ಲ ಎಂದು ಸಮರ್ಥನೆ ಕೊಟ್ಟಿದ್ದಾರೆ. ಹಾಡಿನ ಸಾಹಿತ್ಯ ಸರಿನಾ? ತಪ್ಪಾ? ಎನ್ನುವುದು ಬೇರೆ ಚರ್ಚೆ. ಆದರೆ ಹಾಡು ಕೇಳಿ ಜನ ಸರಿ, ತಪ್ಪು ಹೇಳಬಾರದಾ? ಹೇಗೆ ಇದ್ದರೂ ಚೆನ್ನಾಗಿದೆ ಎಂದು ಚಪ್ಪಾಳೆ ಮಾತ್ರ ತಟ್ಟಬೇಕಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.
"ಪೀಲಿಂಗ್ಸ್', 'ಡ್ರೀಮಮ್ ವೇಕಪಂ', 'ಚೋಲಿ ಕೆ ಪೀಚೆ ಕ್ಯಾಹೈ' ರೀತಿಯ ಹಾಡುಗಳು ಬಂದಾಗ ಸರಿ ಅನ್ನಿಸಿತ್ತು. ಸಿನಿಮಾದಲ್ಲಿ ಪಾತ್ರಗಳು ಲೈಂಗಿಕ ವಿಷಯಗಳ ಬಗ್ಗೆ ಮಾತನಾಡಿದ್ರು ಅದು ಸರಿ ಅನ್ನಿಸಿತು.. ಆದರೆ ಒಂದು ಹಾಡು ಮಾತ್ರ ದೊಡ್ಡ ಸುದ್ದಿಯಾಗ್ತಿದೆ. ನಾನು ಇದನ್ನು ಸಮರ್ಥಿಸುತ್ತಿಲ್ಲ... ಸುಮ್ನೆ ಕೇಳ್ತಿದ್ದೀನಿ" ಎಂದು ರಕ್ಷಿತಾ ಪ್ರೇಮ್ ಪೋಸ್ಟ್ ಮಾಡಿದ್ದರು. ಈಗ ಜನ ಕೂಡ ಸುಮ್ನೆ ಕೇಳ್ತಿದ್ದಾರೆ ಅಷ್ಟೇ.. ತಪ್ಪು ಇಲ್ಲದೇ ಇದ್ದಿದ್ದರೆ ಹಿಂದಿ ಹಾಡನ್ನು ಯೂಟ್ಯೂಬ್‌ನಿಂದ ತೆಗೆದಿದ್ದು ಯಾಕೆ? ಹೋರಾಟ ಮಾಡಬೇಕಿತ್ತಲ್ವಾ? ಎನ್ನುವ ವಾದ ಶುರು ಮಾಡಿದ್ದಾರೆ.

'ಖಳ್ ನಾಯಕ್' ಸಿನಿಮಾ ಬಂದಾಗ 'ಚೋಲಿ ಕೆ ಪೀಚೆ ಕ್ಯಾಹೈ' ಹಾಡು ಕೂಡ ವಿವಾದ ಸೃಷ್ಟಿಸಿತ್ತು. ಅದು ರಕ್ಷಿತಾ ಅವರಿಗೆ ಗೊತ್ತಿಲ್ಲ ಅನ್ನಿಸುತ್ತೆ. ಈಗ ಸೋಶಿಯಲ್ ಮೀಡಿಯಾ ಮೂಲಕ ಜನರಿಗೆ ಅಭಿಪ್ರಾಯ ತಿಳಿಸಲು ವೇದಿಕೆ ಸಿಕ್ಕಿದೆ. ಆ ಮೂಲಕ ಸರಿ ಅಥವಾ ತಪ್ಪು ಎನ್ನುವ ಅಭಿಪ್ರಾಯ ಕ್ರೂಡೀಕರಣವಾಗುತ್ತಿದೆ. ಚರ್ಚೆ ಹೆಚ್ಚಾಗಿದೆ. ವಿವಾದದ ಕಾವು ಹೆಚ್ಚಾಗುತ್ತಿದೆ ಅಷ್ಟೆ. ಮೊದಲಿನಿಂದಲೂ ಸಿನಿಮಾಗಳಲ್ಲಿ ಅಸಭ್ಯ ಸಂಭಾಷಣೆ, ಸಾಹಿತ್ಯ ಕಂಡು ಬಂದಾಗ ಚರ್ಚೆ ನಡೆದಿದೆ. ಪತ್ರಿಕೆಗಳಲ್ಲಿ ವಿಮರ್ಶಾತ್ಮಕ ಲೇಖನಗಳು ಬಂದಿವೆ. 'ಅಯ್ಯ' ಚಿತ್ರದಲ್ಲಿ ಸ್ವತಃ ರಕ್ಷಿತಾ ಅವರು ಹೆಜ್ಜೆ ಹಾಕಿದ್ದ ಹಾಡೊಂದಕ್ಕೆ ಸೆನ್ಸಾರ್ ಮಂಡಳಿ ಬ್ರೇಕ್ ಹಾಕಿತ್ತು. ಹಾಡನ್ನು ತೆಗೆದು ಹಾಕಬೇಕು ಎಂದು ಚಿತ್ರತಂಡಕ್ಕೆ ಸೂಚಿಸಿತ್ತು.
ಅದಾಗಲೇ ಚಿತ್ರೀಕರಣ ಮಾಡಿಬಿಟ್ಟಿದ್ದ ಆ ಹಾಡಿನ ಸಾಹಿತ್ಯ ರಾತ್ರೋರಾತ್ರಿ ಬದಲಾಗಿತ್ತು. ಮಧ್ಯರಾತ್ರಿ ಹಾಡನ್ನು ಹಾಡಿಸಿ ಎಡಿಟ್ ಮಾಡಿಸಿ ಸೆನ್ಸಾರ್ ಸರ್ಟಿಫಿಕೇಟ್ ಪಡೆದು ಸಿನಿಮಾ ಬಿಡುಗಡೆ ಮಾಡುವಂತಾಗಿತ್ತು. ಹೌದು.. ದರ್ಶನ್ ಹಾಗೂ ರಕ್ಷಿತಾ ನಟಿಸಿದ್ದ 'ಅಯ್ಯ' ಚಿತ್ರದ 'ಕೆಟ್ಟೋದೆ ಕೆಟ್ಟೋದೆ' ಹಾಡು ವಿವಾದ ಸೃಷ್ಟಿಸುವ ಸುಳಿವು ಸಿಕ್ಕಿತ್ತು. ಸೆನ್ಸಾರ್ ಮಂಡಳಿ ಸಲಹೆಯಂತೆ ಅದನ್ನು ಬದಲಿಸಲಾಗಿತ್ತು.
'ಅಯ್ಯ' ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಸಂಗೀತ ಸಂಯೋಜಿಸಿ ಹಾಡುಗಳಿಗೆ ಸಾಹಿತ್ಯವನ್ನು ರಚಿಸಿದ್ದರು. ಸಿನಿಮಾ ಬಿಡುಗಡೆಗೆ 2 ದಿನ ಬಾಕಿ ಇದ್ದಾಗ ಸೆನ್ಸಾರ್ ಮಂಡಳಿ ಈ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಡು ಇಲ್ಲದೇ ಸಿನಿಮಾ ಬಿಡುಗಡೆ ಮಾಡಲು ವಿತರಕರಾದ ಜಯಣ್ಣ, ಭೋಗೇಂದ್ರ ಹಿಂದೇಟು ಹಾಕಿದ್ದರು. ಆಗ ಗೀತ ಸಾಹಿತಿ ಕೆ. ಕಲ್ಯಾಣ್ ಇದಕ್ಕೊಂದು ಉಪಾಯ ಹುಡುಕಿದ್ದರು. ಅದಾಗಲೇ ಚಿತ್ರೀಕರಣವಾಗಿದ್ದ ಹಾಡಿಗೆ ಸಾಹಿತ್ಯ ಬದಲಿಸಿ, ಹೊಸದಾಗಿ ಹಾಡಿಸಿ ಸೇರಿಸಲಾಗಿತ್ತು. 'ಕೆಟ್ಟೋದೆ ಕೆಟ್ಟೋದೆ' ಎಂದು ಚಿತ್ರೀಕರಿಸಿದ್ದ ಹಾಡು ಬಳಿಕ 'ರಕ್ಷಿತಾ ರಕ್ಷಿತಾ ನನ್ನ ಕಿಸ್ಸು ಸಿಕ್ಕಿತಾ... ದರ್ಶನ್ನು ದರ್ಶನ್ನು ನಿನ್ ಮಾತೇ ಚಿಕ್ಕನ್ನು" ಎಂದು ಪ್ರೇಕ್ಷಕರ ಮುಂದೆ ಬಂದಿತ್ತು.
'ಕೆಡಿ' ಸಿನಿಮಾ ಹಾಡು ಇಷ್ಟೆಲ್ಲಾ ಚರ್ಚೆ ಹುಟ್ಟಾಕ್ಕಿದ್ರು, ಪ್ರೇಮ್ ಹಾಗೂ ರಕ್ಷಿತಾ ಸಮರ್ಥನೆ ಕೊಡುತ್ತಿದ್ದಾರೆ. ಸಿನಿಮಾ ತಾರೆಯರು ಕೂಡ ಪ್ರಶ್ನಾತೀತರಲ್ಲ. ತಪ್ಪಾಗಿದ್ದರೆ ಒಪ್ಪಿಕೊಳ್ಳಬೇಕು. ಸರಿ ಇದ್ದರೆ ವಾದಿಸಬೇಕು, ಅದು ಬಿಟ್ಟು ಆ ಸಿನಿಮಾದಲ್ಲಿ ಬಂದಿದೆ, ಈ ಚಿತ್ರದ ಹಾಡು ಬಂದಾಗ ಯಾಕೆ ಕೇಳಲಿಲ್ಲ, ನಮ್ಮನ್ನು ಮಾತ್ರ ಕೇಳೋದ್ಯಾಕೆ? ಎಂದು ವಾದ ಮಾಡುತ್ತಿರುವುದು ಸರಿಯಲ್ಲ ಎನ್ನುವುದು ಕೆಲವರ ಪ್ರಶ್ನೆ.


Click it and Unblock the Notifications











