‘ಸರ್ಸೆ ನಿನ್ನ ಸೆರಗ’ ಎಂದ 'ಕೆಡಿ' ವಿರುದ್ಧ ಕೆರಳಿ ಕೆಂಡವಾದ ಕೇಂದ್ರ ಸರ್ಕಾರ ; ಕೂಡಲೇ ಹಾಡು ತೆಗೆಯುವಂತೆ ಖಡಕ್ ಎಚ್ಚರಿಕೆ
ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಮಾನವನ ಹಕ್ಕುಗಳಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಡಿಪಾಯ. ಅದೇ ಮಾನವನ ಅಸ್ತಿತ್ವದ ಬೇರು. ಆದರೆ ಈಗೀಗ .. ಅಭಿವ್ಯಕ್ತಿ ಹೆಸರಿನಲ್ಲಿ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳನ್ನು ಹೆಚ್ಚಾಗಿ ತೋರಿಸಲಾಗುತ್ತಿದೆ. ಅಶ್ಲೀಲ ಪದಪುಂಜಗಳನ್ನೆಲ್ಲಾ ಪೋಣಿಸಿ ಮನರಂಜನೆಯ ಹೆಸರಿನಲ್ಲಿ ಮಾರುವ ಪ್ರಯುತ್ನ ನಡೆಯುತ್ತಿದೆ.
ಇದಕ್ಕೆ ಜ್ವಲಂತ ಉದಾಹರಣೆಯಂತೆ ಸದ್ಯ ಕಣ್ಮುಂದೆ ಇರುವ''ಕೆಡಿ'' ಚಿತ್ರದ ಹಾಡು ಹಲರವರನ್ನು ಕೆರಳಿಸಿದೆ. ''ಸರ್ಸೆ ನಿನ್ನ ಸೆರಗ'' ಹಾಡಿನ ಸಾಲುಗಳನ್ನು ಕೇಳಿ ಕೇವಲ ಕರುನಾಡು ಮಾತ್ರವಲ್ಲ ಇಡೀ ದೇಶವೇ ಕೆಂಡ ಕಾರುತ್ತಿದೆ.

ಇನ್ನೂ ಕನ್ನಡದಲ್ಲಿ ''ಕೆಜಿಎಫ್'' ಬಂದ ನಂತರ ಹಲವರು ಕನ್ನಡ ಚಿತ್ರಗಳ ಕುರಿತು ಅಭಿಮಾನದ ಮಾತುಗಳನ್ನಾಡುತ್ತಿದ್ದರು. ಅದರಲ್ಲಿಯೂ ಉತ್ತರ ಭಾರತದಲ್ಲಿ ಕನ್ನಡ ಚಿತ್ರಕ್ಕೆ ಅಭಿಮಾನಿ ಬಳಗವೇ ಹುಟ್ಟಿಕೊಂಡಿತ್ತು.
ಆದರೆ ಈಗ ''ಸರ್ಸೆ ನಿನ್ನ ಸೆರಗ''ದ ಹಿಂದಿ ಹಾಡು ಸರಿಕೆ ಚುನಾರ್ ಕೇಳಿ ಹೊಗಳುತ್ತಿದ್ದವರೇ ತೆಗಳುತ್ತಿದ್ದಾರೆ. ತಮ್ಮ ನೆಲದಲ್ಲಿ ಹಿಂದೆ ಬಂದಿದ್ದ ಹಾಡುಗಳನ್ನೆಲ್ಲಾ ಮರೆತು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ಧಾರೆ. ಕನ್ನಡ ಚಿತ್ರರಂಗವನ್ನು ಹೀನಾಮಾನವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಸದ್ಯ ಎದ್ದಿರುವ ಈ ಆಕ್ರೋಶದ ಅಲೆ ಎಷ್ಟಿದೆ ಅಂದರೆ ಈಗಾಗಲೇ ಹಿಂದಿಯಲ್ಲಿ ಈ ಹಾಡನ್ನು ಯೂಟ್ಯೂಬ್‌ದಿಂದ ಕಿತ್ತೆಸೆಯಲಾಗಿದೆ. ಆದರೂ ಕೂಡ ಪ್ರೇಮ್ ತಪ್ಪನ್ನೂ ಒಪ್ಪಿಕೊಳ್ಳುತ್ತಿಲ್ಲ. ತಪ್ಪಾಯ್ತು ಕ್ಷಮಿಸಿ ಎಂದು ಕೂಡ ಹೇಳುತ್ತಿಲ್ಲ. ಬದಲಿಗೆ ಹಾಡನ್ನು ತೆರೆಯ ಮೇಲೆ ನೋಡಿದಾಗ ಅದರ ನಿಜವಾದ ಅರ್ಥ ಎಲ್ಲರಿಗೆ ಅರ್ಥವಾಗುತ್ತೆ ಎಂಬ ವಾದ ಮಾಡುತ್ತಿದ್ಧಾರೆ. ಬರೀ ಸಾಹಿತ್ಯ ಕೇಳಿ ಹೀಗೆ ವಿರೋಧ ಮಾಡಿದರೆ ಹೇಗೆ..? ಈ ದೃಷ್ಠಿಕೋನ ನನಗೆ ಅರ್ಥ ಆಗುತ್ತಿಲ್ಲ ಎಂದು ಹೇಳುತ್ತಿದ್ಧಾರೆ.
ಹೀಗಿರುವಾಗ ಇದೀಗ ಈ ಹಾಡು ಕೇಂದ್ರ ಸರ್ಕಾರವನ್ನು ಕೂಡ ಕೆರಳಿಸಿದೆ. ಇದಕ್ಕೆ ಪುರಾವೆ ಎನ್ನುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೆನ್ಸಾರ್ ಮಂಡಳಿಗೆ (CBFC) ಸೂಚನೆ ನೀಡಿದೆ. ಸಾರ್ವಜನಿಕ ಸಭ್ಯತೆಗೆ ಧಕ್ಕೆ ತರುವಂತಹ ಈ ಹಾಡನ್ನು ಯೂಟ್ಯೂಬ್ ಸೇರಿದಂತೆ ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕುವಂತೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ ಎಂದು ''ಇಂಡಿಯಾ ಟುಡೇ''.. ''ಮಾತೃಭೂಮಿ'' ಸೇರಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ.

ಇನ್ನೂ ''ಕೆಡಿ''ಯ ಈ ಹಾಡಿನ ವಿರುದ್ದ ದೆಹಲಿಯಲ್ಲಿ ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ. ನೋರಾ ಫತೇಹಿ, ಸಂಜಯ್ ದತ್, ಹಿಂದಿ ಗೀತರಚನೆಕಾರ ರಕೀಬ್ ಆಲಂ ಮತ್ತು ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮತ್ತೊಂದು ಕಡೆ ಕರ್ನಾಟಕ ಮಹಿಳಾ ಆಯೋಗ ಕೂಡ ''ಕೆಡಿ'' ವಿರುದ್ಧ ಕೆರಳಿ ಕೆಂಡವಾಗಿದೆ. ಸೆನ್ಸಾರ್ ಮಂಡಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ. ಸಿನಿ ವರ್ಕರ್ ಆಸೋಯೇಶನ್ ಕೂಡ ಸಿಬಿಎಫ್‌ಸಿ ಹಾಗೂ ಕೇಂದ್ರ ಪ್ರಸಾರ ಹಾಗೂ ಮಾಹಿತಿ ಸಚಿವಾಲಯಕ್ಕೆ ದೂರು ನೀಡಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಈ ವಿಚಾರ ಗಂಭೀರವಾಗಿ ಪರಿಗಣಿಸುವಂತೆ ಮನವಿಯನ್ನು ಮಾಡಿದೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC)ಕೂಡ ''ಕೆಡಿ'' ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ.
ಹೀಗೆ ''ಕೆಡಿ'' ಸುತ್ತ ಮುತ್ತ ವಿವಾದದ ಹುತ್ತ ಬೆಳೆದಿದೆ. ನಿರ್ದೇಶಕ ಜೋಗಿ ಪ್ರೇಮ್ ಮತ್ತು ನಿರ್ಮಾಣ ಸಂಸ್ಥೆ ಕೆವಿನ್ ಮೇಲೆ ನೋಟಿಸ್‌ಗಳ ಸುರಿಮಳೆಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಹಿಂದಿಯಲ್ಲಿ ಹಾಡು ಡಿಲೀಟ್ ಆಗಿದ್ದು ಬೇರೆ ಭಾಷೆಗಳಲ್ಲಿ ಹಾಡನ್ನು ಯಾವತ್ತು ಡಿಲೀಟ್ ಮಾಡಲಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











