ಪ್ರೇಮ್ - ಧ್ರುವ 'KD' ಸಿನಿಮಾ ಸೆಕೆಂಡ್ ಸಾಂಗ್ ರಿಲೀಸ್; "ಸೆಟ್ಟಾಗ್ತಿದೆ".. ಆದ್ರೆ..
ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ನಟನೆಯ ಸಿನಿಮಾ 'KD'. ಬಹಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಸದ್ಯ ಚಿತ್ರದ 2ನೇ ಹಾಡು ರಿಲೀಸ್ ಆಗಿ ಸದ್ದು ಮಾಡ್ತಿದೆ.
ಡೈರೆಕ್ಟರ್ ಪ್ರೇಮ್ ಸಿನಿಮಾ ಗೆಲ್ಲುತ್ತೋ ಇಲ್ವೋ ಸಾಂಗ್ಸ್ ಅಂತೂ ಹಿಟ್ ಲಿಸ್ಟ್ ಸೇರಿಬಿಡುತ್ತೆ. ಅವರ ಎಲ್ಲಾ ಸಿನಿಮಾಗಳ ಆಲ್ಬಮ್ ಚಾರ್ಟ್ ಬಸ್ಟರ್ ಎನಿಸಿಕೊಂಡಿದೆ. 'KD' ಚಿತ್ರದ ಮೊದಲ ಹಾಡು 'ಶಿವನೆ ನಿನ್ನಾಟ ಬಲ್ಲವರು' ಗುಂಗಿನಿಂದ ಸಿನಿರಸಿಕರು ಇನ್ನು ಹೊರ ಬಂದಿಲ್ಲ. ಅಷ್ಟರಲ್ಲೇ 'ಸೆಟ್ಟಾಗಲ್ಲ ಹೋಗೆ ನಂಗೂ ನಿಂಗೂ' ಅನ್ನೋ ಹೊಸ ಸಾಂಗ್ ಸದ್ದು ಮಾಡಲು ಆರಂಭಿಸಿದೆ.

ರೆಟ್ರೋ ಶೈಲಿಯ ಸಿನಿಮಾ ಇದು. ಅದಕ್ಕೆ ತಕ್ಕಂತೆ ಒಂದು ಮೆಲೋಡಿ ಸಾಂಗ್ ಕಂಪೋಸ್ ಮಾಡಿದ್ದಾರೆ ಅರ್ಜುನ್ ಜನ್ಯಾ. ಸ್ವತಃ ಪ್ರೇಮ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಬಾಲಿವುಡ್ ರ್ಯಾಪರ್ ಮಿಕಾ ಸಿಂಗ್ ದನಿಯಲ್ಲಿ ಸಾಂಗ್ ಕಿಕ್ ಕೊಡ್ತಿದೆ. ಸದ್ಯ ಲಿರಿಕಲ್ ವೀಡಿಯೋ ಸಾಂಗ್ ಮಾತ್ರ ರಿಲೀಸ್ ಆಗಿದ್ದು ಧ್ರುವ, ರೀಷ್ಮಾ ಸಿಂಪಲ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ.
ಕಳೆದೊಂದು ವಾರದಿಂದ 'ಸೆಟ್ಟಾಗಲ್ಲ ಹೋಗೆ ನಂಗೂ ನಿಂಗೂ' ಸಾಂಗ್ ಪ್ರೋಮೊ ವೈರಲ್ ಆಗಿತ್ತು. ಒರಾಯನ್ ಮಾಲ್‌ನಲ್ಲಿ ಅದ್ಧೂರಿಯಾಗಿ ಸಾಂಗ್ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಡೀ ಚಿತ್ರತಂಡ ಈ ವೇಳೆ ಹಾಜರಿದ್ದು ಹಾಡಿನ ಬಗ್ಗೆ ಮಾತನಾಡಿದೆ. 5 ಭಾಷೆಗಳಲ್ಲಿ ಸಾಂಗ್ ರಿಲೀಸ್ ಮಾಡಲಾಗಿದೆ. ಹಿಂದಿಯಲ್ಲಿ ಕೂಡ ಮಿಕಾ ಸಿಂಗ್ ಹಾಡು ಹಾಡಿದ್ದಾರೆ. ಇನ್ನುಳಿದಂತೆ ತಮಿಳು, ತೆಲುಗಿನಲ್ಲಿ ನಕಾಶ್ ಅಜಿಜ್, ಮಲಯಾಳಂನಲ್ಲಿ ಟಿಪ್ಪು ಹಾಡಿಗೆ ದನಿಯಾಗಿದ್ದಾರೆ.
ಯೂರೋಪ್‌ನಲ್ಲಿ ಆರ್ಕೆಸ್ಟ್ರಾ ಮಾಡಿಸಿ, ಅಲ್ಲೇ ಕೋರಸ್ ಹಾಡಿಸಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ 'ಸೆಟ್ಟಾಗಲ್ಲಾ' ಸಾಂಗ್ ಕಂಪೋಸ್ ಮಾಡಲಾಗಿದೆ. ಅದರಲ್ಲೂ ವಿಷಲ್ ರೀತಿ ಬರುವ ಮ್ಯೂಸಿಕ್ ಅಂತೂ ಕೆಲವರಿಗೆ ಬಹಳ ಕಾಡುತ್ತದೆ. ಒಟ್ಟಾರೆ ಸಾಂಗ್ ಸಖತ್ ಕಿಕ್ ಕೊಡ್ತಿದೆ. ಮೊದಲಿಗೆ ಕೇಳಿದಾಗ ಓಕೆ ಓಕೆ ಎನಿಸುತ್ತದೆ. ಆಮೇಲೆ ಪದೇ ಪದೆ ಕೇಳಬೇಕು ಎನಿಸಿ ಗುನುಗುವಂತೆ ಮಾಡುತ್ತದೆ. ರಾಹುಲ್ ಸಾಂಗ್‌ಗೆ ಕೊರಿಯೋಗ್ರಫಿ ಮಾಡಿದ್ದಾರೆ.
'ಜೋಗಿ' ಚಿತ್ರದ 'ಚುಕುಬುಕು ರೈಲು ನಿಲ್ಲೊದಿಲ್ಲ ಎಲ್ಲೂ' ಸಾಂಗ್ ರೀತಿ ಇದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಸಾಂಗ್ ಹಿಟ್ ಲಿಸ್ಟ್ ಸೇರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. 'ಏಕ್ ಲವ್‌ಯಾ' ಬಳಿಕ ಪ್ರೇಮ್ ನಿರ್ದೇಶನ ಮಾಡುತ್ತಿರುವ ಸಿನಿಮಾ 'KD'. ಆ ಚಿತ್ರಕ್ಕೂ ಅರ್ಜುನ್ ಜನ್ಯಾ ಟ್ಯೂನ್ ಹಾಕಿದ್ದರು. ಆಲ್ಬಮ್ ಹಿಟ್ ಲಿಸ್ಟ್ ಸೇರಿತ್ತು.
ನಾನು ಈ ಹಾಡಿಗೆ ಅಡಿಕ್ಟ್ ಆಗಿಬಿಟ್ಟಿದ್ದೀನಿ. ಮೊದಲ ಬಾರಿ ಕೇಳಿದಾಗ ಒಕೆ ಎನಿಸಿತು. ನಿಧಾನವಾಗಿ ನನ್ನನ್ನು ಆವರಿಸಿಕೊಂಡಿತ್ತು. ಈಗ ಅಡಿಕ್ಟ್ ಆಗಿಬಿಟ್ಟಿದೆ ಎಂದು ನೆಟ್ಟಿಗರೊಬ್ಬರು 'ಸೆಟ್ಟಾಗಲ್ಲ ಹೋಗೆ' ಸಾಂಗ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
"ಏನ್ ಸಾಂಗ್ ಏನ್ ಮ್ಯೂಸಿಕ್ ಗುರು..ಅದ್ಭುತ ಸಾಂಗ್..ರೆಟ್ರೋ ರಿಲೋಡಡ್" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಸೆಟ್ ಆಗಲ್ಲ ಹೋಗಿ ನನಗೂ ನಿನಗೂ ಬೆಂಕಿ ಹಾಡು" ಎಂದು ಇನ್ನೊಬ್ಬರು ಉದ್ಘಾರ ತೆಗೆದಿದ್ದಾರೆ. ಸಾಂಗ್ ಮಾತ್ರ ಬೆಂಕಿ, ಚಿಂದಿ ಲಿರಿಕ್ಸ್, ಮ್ಯೂಸಿಕ್, ಸಿಂಗಿಂಗ್ ಸೂಪರ್. ಮುಖ್ಯವಾಗಿ ಹುಕ್ ಸ್ಟೆಪ್ ಸಖತ್ತಾಗಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿ ತಿಳಿಸಿದ್ದಾರೆ.
"ಏನ್ ಲಿರಿಕ್ಸ್ ಏನ್ ವಾಯ್ಸ್ ಏನ್ ಮ್ಯೂಸಿಕ್ ಪ್ರೇಮ್ ಸರ್ ಮೂವಿ ಚೆನ್ನಾಗಿರುತ್ತೋ ಇಲ್ವೋ ಗೊತ್ತಿಲ್ಲ ಸಾಂಗ್ಸ್ ಮಾತ್ರ ಬೆಂಕಿ" ಅಂತ ಮಗದೊಬ್ಬರು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. "ಒಟ್ಟಾರೆ ಸೆಟ್ ಆಗಲ್ಲ" ಸಾಂಗ್ ಸಂಗೀತ ಪ್ರೇಮಿಗಳ ಮನಗೆದ್ದಿದೆ. ಸಿನಿಮಾ ಯಶಸ್ಸಿಗೂ ಬಲ ತುಂಬಲಿದೆ. ಒಟ್ಟಾರೆ ಸಂಗೀತ ಪ್ರೇಮಿಗಳ ನಾಡಿಮಿಡಿತ ಅರಿತಿರುವ ಪ್ರೇಮ್ ಮತ್ತೆ ಗೆದ್ದಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದ ಕಳೆದ ವರ್ಷ ಡಿಸೆಂಬರ್‌ನಲ್ಲಿ 'KD' ಸಿನಿಮಾ ತೆರೆಗೆ ಬರಬೇಕಿತ್ತು. ಡಿಸೆಂಬರ್‌ನಲ್ಲಿ ನಮ್ಮ ಸಿನಿಮಾ ರಿಲೀಸ್, ಪರಭಾಷೆಯ ಯಾವುದೇ ಸಿನಿಮಾ ಎದುರು ಬಂದರೂ ವಾರ್ ಎಂದು ಪ್ರೇಮ್ ಹೇಳಿದ್ದರು. ಡಿಸೆಂಬರ್ ಹೋಗಿ 3 ತಿಂಗಳು ಕಳೆದೂ 'KD' ಸಿನಿಮಾ ರಿಲೀಸ್ ಸುಳಿವು ಸಿಕ್ತಿಲ್ಲ.
ಸದ್ಯ ಇನ್ನು ಎರಡು ತಿಂಗಳು ಐಪಿಎಲ್ ಫೀವರ್. ಆ ಬಳಿಕವೇ ಸಿನಿಮಾ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಮೇಕಿಂಗ್, ಪೋಸ್ಟ್ ಪ್ರೊಡಕ್ಷನ್ಸ್, ಮಾರ್ಕೆಟಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಜೂನ್ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಆಗಸ್ಟ್ 8ಕ್ಕೆ ವರಲಕ್ಷ್ಮಿ ಹಬ್ಬಕ್ಕೆ ಬಂದರೂ ಅಚ್ಚರಿಪಡಬೇಕಿಲ್ಲ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'KD' ಸಿನಿಮಾ ನಿರ್ಮಾಣ ಮಾಡಿದೆ. ಚಿತ್ರದಲ್ಲಿ 60, 70ರ ದಶಕದ ಕಾಲ್ಪನಿಕ ಕಥೆಯನ್ನು ಕಟ್ಟಿಕೊಡಲಾಗ್ತಿದೆ. ಕಾಳಿದಾಸ ಎಂಬ ಪಾತ್ರದಲ್ಲಿ ಧ್ರುವ ಸರ್ಜಾ ಅಬ್ಬರಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಬಿಂದಾಸ ಬೆಗ ನೋರಾ ಫತೇಯಿ ಕೂಡ ಚಿತ್ರದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ವಿಲಿಯಂ ಡೇವಿಡ್ ಛಾಯಾಗ್ರಹಣ 'KD' ಚಿತ್ರಕ್ಕಿದೆ. ಚಾಮುಂಡಿ ಬೆಟ್ಟದಲ್ಲಿ 3 ವರ್ಷಗಳ ಹಿಂದೆ ಚಿತ್ರದ ಮಹೂರ್ತ ನೆರವೇರಿಸಲಾಗಿತ್ತು. ಯುದ್ಧದಲ್ಲಿ ಹುತಾತ್ಮನಾದರೆ ಸ್ವರ್ಗವು ಆತನನ್ನು ಸ್ವಾಗತಿಸುತ್ತದೆ. "ಯುದ್ಧದಲ್ಲಿ ಜಯಿಸಿದರೆ ಸಿಂಹಾಸನವೂ ಅವನಿಗಾಗಿ ಕಾಯುತ್ತದೆ. ಆದ್ದರಿಂದ ಯುದ್ಧ ಯಾವತ್ತೂ ಒಳ್ಳೆಯದೇ, ಯುದ್ಧ ಈಗ ಆರಂಭ" ಎಂದು ಪ್ರೇಮ್ ಸಿನಿಮಾ ಆರಂಭಿಸಿದ್ದರು.
ಇದು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ 4 ಸಿನಿಮಾ. ಅದೇ ರೀತಿ ಪ್ರೇಮ್ ನಿರ್ದೇಶನದ 9ನೇ ಸಿನಿಮಾ, ಧ್ರುವ ಸರ್ಜಾ ಹೀರೊ ಆಗಿ ನಟಿಸುತ್ತಿರುವ 6ನೇ ಸಿನಿಮಾ ಆಗಿದೆ. 'ಮಾರ್ಟಿನ್' ಸಿನಿಮಾ ಮಾಡಿ ಸೋತಿರುವ ಧ್ರುವ ಸರ್ಜಾ ಇದೀಗ 'KD' ಆಗಿ ಎದ್ದು ಬರಲು ಕಾಯುತ್ತಿದ್ದಾರೆ.
'ಸೆಟ್ ಆಗಲ್ಲ ಹೋಗೆ' ಹಾಡಿನ ಹುಕ್ ಸ್ಟೆಪ್ ಅನ್ನು ಅಭಿಮಾನಿಗಳಿಂದಲೇ ನೋಡಿ ಮಾಡು ಧ್ರುವ- ರೀಷ್ಮಾ ತೀರ್ಮಾನಿಸಿದ್ದಾರೆ. ಅಭಿಮಾನಿಗಳು ತಮಿಷ್ಟದಂತೆ ಹುಕ್‌ಸ್ಟೆಪ್ ಡ್ಯಾನ್ಸ್ ಮಾಡಿ ರೀಲ್ಸ್ ಮಾಡೋಕೆ ಹೇಳಿದೆ ಚಿತ್ರತಂಡ. ಅದರಲ್ಲಿ ಬೆಸ್ಟ್ ಎನಿಸಿದ್ದನ್ನು ಚಿತ್ರದಲ್ಲಿ ನಾಯಕ-ನಾಯಕಿ ಮಾಡಲಿದ್ದಾರೆ. ಈ ಮೂಲಕ ಹೊಸ ಪ್ರಯತ್ನಕ್ಕೆ 'KD' ತಂಡ ಮುಂದಾಗಿದೆ.
ಮೋಹನ್ ಬಿ ಕೆರೆ ಚಿತ್ರದ ಕಲಾ ನಿರ್ದೇಶಕರಾಗಿ ಕೆಲ ಮಾಡಿದ್ದಾರೆ. ಪ್ರೇಮ್ ಕಲ್ಪನೆಯಂತೆ ಭಾರೀ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. 'ಸೆಟ್ ಆಗಲ್ಲ ಹೋಗೆ' ಸಾಂಗ್ ಅನ್ನು ವಿದೇಶದಲ್ಲಿ ಸೆರೆ ಹಿಡಿಯಲು ಚಿತ್ರತಂಡ ಮನಸ್ಸು ಮಾಡಿದೆ.
ಏಪ್ರಿಲ್ 20ರ ಒಳಗೆ ಹುಕ್‌ಸ್ಟೆಪ್ ಮಾಡಿ ವೀಡಿಯೋ ಕಳಿಸುವಂತೆ ಪ್ರೇಮ್ ಹೇಳಿದ್ದಾರೆ. ಆಮ್ಸ್ಟರ್‌ಡ್ಯಾಮ್‌ನಲ್ಲಿ ಸಾಂಗ್ ಶೂಟ್ ಪ್ಲ್ಯಾನ್ ಮಾಡಲಾಗುತ್ತಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.


Click it and Unblock the Notifications











