ವಿಷ್ಣುಪುತ್ರಿ ಕಣ್ಣೀರಿಟ್ಟರು, ಇದಕ್ಕೆ ಹೊಣೆ ಯಾರು?
Recommended Video

ಡಾ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ನೇಹ ಎಂತಹದ್ದು ಎಂದು ಜಗತ್ತಿಗೆ ಗೊತ್ತಿರುವ ವಿಚಾರ. ವಿಷ್ಣುದಾದಾ ಅಂತ್ಯಕ್ರಿಯೆ ಸಂದರ್ಭದಲ್ಲಿ ಎಲ್ಲವನ್ನ ನಿಭಾಯಿಸಿ, ಸುಗಮವಾಗಿ ಸಮಾಧಿ ಮಾಡುವಂತೆ ವಿಷ್ಣು ಆಪ್ತಮಿತ್ರ ಅಂಬಿ ನೋಡಿಕೊಂಡಿದ್ದರು.
ಈಗ ಅದೇ ಅಂಬಿ ಇಹಲೋಕ ತ್ಯಜಿಸಿದ್ದಾರೆ. ತಂದೆಯ ಅಂತ್ಯಕ್ರಿಯೆಯಲ್ಲಿ ಎಲ್ಲವನ್ನ ನಿಭಾಯಿಸಿದ್ದ ವ್ಯಕ್ತಿಗೆ ನಮನ ಸಲ್ಲಿಸುವುದು ವಿಷ್ಣು ಕುಟುಂಬ ಕರ್ತವ್ಯ ಮತ್ತು ಜವಾಬ್ದಾರಿ. ಆದ್ರೆ, ಇದನ್ನ ಮಾಡಲು ವಿಷ್ಣುವರ್ಧನ್ ಫ್ಯಾಮಿಲಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂಬ ಆರೋಪವನ್ನ ವಿಷ್ಣು ಪುತ್ರಿ ಕೀರ್ತಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟಿದ್ದಾರೆ. ಅಂಬರೀಶ್ ಅಂಕಲ್ ಏನು, ನಮ್ಮ ಕುಟುಂಬದ ಜೊತೆ ಅವರ ಸಂಬಂಧವೇನು ಎಂಬುದು ನಮಗೆ ಗೊತ್ತು. ಆದ್ರೆ, ಅಂತಹ ವ್ಯಕ್ತಿಗೆ ಗೌರವ ನೀಡಲು ನಮ್ಮಿಂದ ಆಗಲಿಲ್ಲ ಎಂಬ ನೋವನ್ನ ಹೊರಹಾಕಿದ್ದಾರೆ. ಅಷ್ಟಕ್ಕೂ, ಅಂಬಿ ಅಂತ್ಯಕ್ರಿಯೆಯಲ್ಲಿ ಆಗಿದ್ದೇನು.? ಮುಂದೆ ಓದಿ.....

ವಿಷ್ಣುವರ್ಧನ್ ಯಾಕೆ ಗೌರವ ಕೊಡಲಿಲ್ಲ
ಅಂಬರೀಶ್ ಅಂತ್ಯಕ್ರಿಯೆ ವೇಳೆಯಲ್ಲಿ ಸಲೆಬ್ರಿಟಿಗಳು, ರಾಜಕೀಯ ಗಣ್ಯರು, ಕುಟುಂಬಸ್ಥರು, ಆಪ್ತರು ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ದಿವಂಗತ ನಟ ವಿಷ್ಣುವರ್ಧನ್ ಅವರ ಹೆಸರು ಹೇಳಿ ಒಂದು ಹೂವು ಇಡಲಿಲ್ಲ. ''ನಾವೇ ಬಾಯಿಬಿಟ್ಟು ಕೇಳಿದ್ರು ಆ ಗೌರವ ಕೊಡಲಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತಿ ಅವರೇ ಬರಬೇಕು ಅಂತಾರೆ
''ಕುಚುಕುಗಳು, ದಿಗ್ಗಜರು, ಸ್ನೇಹಿತರ ಅಂತ ಹೇಳಿ ನಮ್ಮ ತಂದೆಯವರ ಹೆಸರಿನಲ್ಲಿ ಒಂದು ಹೂವು ಇಡಲು ಅವಕಾಶ ಕೊಟ್ಟಿಲ್ಲ. ಅನಿರುದ್ಧ್ ಅವರು ಹೋಗಿ, ನಮ್ಮ ಕುಟುಂಬದ ಪರವಾಗಿ ಬಂದಿದ್ದೇವೆ, ಅಪ್ಪಾಜಿ ಹೆಸರು ಹೇಳಿ ಪುಷ್ಪನಮನ ಸಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಕ್ಕೆ, ಆಗಲ್ಲ ಭಾರತಿ ವಿಷ್ಣುವರ್ಧನ್ ಅವರೇ ಬರಬೇಕು ಅಂತಾರೆ. ನಾವು ನಮ್ಮ ಫ್ಯಾಮಿಲಿ ಪರವಾಗಿ ಹೋಗಿದ್ದು ಅಲ್ವಾ'' ಎಂದು ಬೇಸರ ಹೊರಹಾಕಿದ್ದಾರೆ.

ವೀಲ್ ಚೇರ್ ನಲ್ಲಿ ಬಂದಿದ್ದ ಭಾರತಿ
ಅಂದ್ಹಾಗೆ, ಅಂಬರೀಶ್ ನಿಧನದ ವೇಳೆ ಭಾರತಿ ವಿಷ್ಣುವರ್ಧನ್ ಅವರ ಆರೋಗ್ಯ ಸರಿ ಇರಲಿಲ್ಲ. ಹೀಗಿದ್ದರೂ, ವೀಲ್ ಚೇರ್ ನಲ್ಲಿ ಆಗಮಿಸಿ ಅಂಬಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡಿದ್ದರು.

ರಾಹುಲ್ ಗಾಂಧಿ ಹೆಸರಲ್ಲಿ ಹೂವು ಇಡಬಹುದು.?
ವಿಷ್ಣು ಹೆಸರು ಹೇಳೋಕೆ ಭಾರತಿ ವಿಷ್ಣುವರ್ಧನ್ ಬರಬೇಕು, ಅದೇ ರಾಹುಲ್ ಗಾಂಧಿ ಅವರ ಹೆಸರಲ್ಲಿ ಯಾರೋ ಬಂದು ಪುಷ್ಪ ನಮನ ಸಲ್ಲಿಸಬಹುದು. ಕಂಡ ಕಂಡವರೆಲ್ಲಾ ಬಂದು ಗೌರವ ಕೊಡ್ತಾರೆ, ನಮ್ಮ ಅಪ್ಪಾಜಿ ಹೆಸರಲ್ಲಿ ಒಂದು ಗೌರವ ಕೋಡಲಿಲ್ಲ. ಇಷ್ಟೆಲ್ಲಾ ಅಪಮಾನವನ್ನ ನಾವು ಸಹಿಸಿಕೊಳ್ಳಬೇಕಾ.? ಎಂದು ತಮ್ಮ ನೋವನ್ನ ತೊಡಿಕೊಂಡಿದ್ದಾರೆ.

ವಿಷ್ಣು ಅಂತ್ಯಕ್ರಿಯೆ ವೇಳೆ ನಡೆದಿದ್ದೇನು.?
''ನಮ್ಮ ಅಪ್ಪಾಜಿ ತೀರಿಕೊಂಡಾಗ, ಇಡೀ ದಿನ ಅಂಬಿ ಅಂಕಲ್ ಅಲ್ಲೇ ಇದ್ರು. ಯಾರಾದರೂ ಅಡ್ಡ ಬಂದ್ರೆ, ಹೇ ಪಕ್ಕಕ್ಕೇ ಹೋಗ್ರೋ ನನ್ನ ಮಗಳಿಗೆ ಕಾಣಿಸ್ತಿಲ್ಲ ಅಂತಿದ್ರು. ಅದನ್ನ ನಾವು ಹೇಗೆ ಮರೆಯೋಕೆ ಆಗುತ್ತೆ. ಅವರಿಗೆ ಗೌರವ ನೀಡಬೇಕಾಗಿರುವುದು ನಮ್ಮ ಕುಟುಂದಬ ಕರ್ತವ್ಯ, ನನ್ನ ಕರ್ತವ್ಯ. ಅಂಬಿ ಅಂಕಲ್ ಏನು, ನಮ್ಮ ತಂದೆ ಏನು, ಅವರಿಬ್ಬರ ಸ್ನೇಹ ಏನು ಅಂತ ನಮಗೆ ಗೊತ್ತು'' ಎಂದು ಭಾವುಕರಾದರು.


Click it and Unblock the Notifications











