Rashmika Mandanna Birthday : ರಶ್ಮಿಕಾ ಹುಟ್ಟುಹಬ್ಬದ ಕಾಮನ್ ಡಿಪಿ ಬಿಡುಗಡೆ ಮಾಡಿದ ಕೀರ್ತಿ ಸುರೇಶ್
ನಾಳೆ ( ಏಪ್ರಿಲ್ 5 ) ನ್ಯಾಷನಲ್ ಕ್ರಷ್ ಎಂದೇ ಕರೆಯಲ್ಪಡುವ ನಟಿ ರಶ್ಮಿಕಾ ಮಂದಣ್ಣ 27ನೇ ವರ್ಷದ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣ ಕಳೆದೊಂದು ವರ್ಷದಲ್ಲಿ ಬಾಲಿವುಡ್‌ಗೂ ಸಹ ಕಾಲಿಟ್ಟಿದ್ದು, ಸದ್ಯ ಪ್ಯಾನ್ ಇಂಡಿಯಾ ಮಟ್ಟದ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಈಗಾಗಲೇ ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ನಟನೆಯ ಮುಂದಿನ ಒಂದೆರಡು ಚಿತ್ರಗಳು ಮಾತ್ರ ಘೋಷಣೆಗೊಂಡಿದ್ದು, ನಾಳೆ ಹುಟ್ಟುಹಬ್ಬದ ಪ್ರಯುಕ್ತ ಮತ್ತಷ್ಟು ಚಿತ್ರಗಳು ಘೋಷಣೆಯಾಗುವ ಸಾಧ್ಯತೆಗಳಿವೆ. ಇನ್ನು ರಶ್ಮಿಕಾ ಮಂದಣ್ಣ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದು, ವಿಶೇಷ ಕಾಮನ್ ಡಿಪಿಯನ್ನು ಎಡಿಟ್ ಮಾಡಿದ್ದಾರೆ.

ಈ ವಿಶೇಷ ಕಾಮನ್ ಡಿಪಿಯನ್ನು ನಟಿ ಕೀರ್ತಿ ಸುರೇಶ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ಬಿಡುಗಡೆಗೊಳಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ, ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯಗಳು ಡಿಯರ್, ಈ ವರ್ಷ ನಿನಗೆ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ.
ಐಷಾರಾಮಿ ಅರಮನೆಯ ಬ್ಯಾಕ್‌ಗ್ರೌಂಡ್‌ನಲ್ಲಿ ರಶ್ಮಿಕಾ ರಾಯಲ್ ಲುಕ್‌ನಲ್ಲಿರುವ ಫೋಟೊವನ್ನು ಬಳಸಿ ಗೋಲ್ಡನ್ ಟೆಕ್ಷರ್‌ನಲ್ಲಿ ಎಡಿಟ್ ಮಾಡಲಾಗಿದೆ. ಇಲ್ಲಿ ಹ್ಯಾಪಿ ಬರ್ತ್‌ಡೇ ರಶ್ಮಿಕಾ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದು, ಅಡಿ ಬರಹದಲ್ಲಿ ರಶ್ಮಿಕಾ ಹೆಸರನ್ನು ತಮಿಳು, ಹಿಂದಿ, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಕ್ರಮವಾಗಿ ಬರೆಯಲಾಗಿದೆ. ಹೀಗೆ ಕನ್ನಡವನ್ನು ಕೊನೆಯದಾಗಿ ಬಳಸಿರುವುದನ್ನು ಕಂಡ ಕನ್ನಡಿಗರು ಕಾಮನ್ ಡಿಪಿ ರಚಿಸಿದವರ ವಿರುದ್ಧ ಕಿಡಿಕಾರಿದ್ದಾರೆ.

ಅತ್ತ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಈ ಕಾಮನ್ ಡಿಪಿಯನ್ನು ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳು ಹಾಗೂ ವಾಟ್ಸಪ್‌ನಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಇನ್ನು ನಾಳೆ ಬೆಳಗ್ಗೆ 11.07ಕ್ಕೆ ಪುಷ್ಪ ಚಿತ್ರತಂಡ ಎರಡನೇ ಭಾಗದ ಅಪ್‌ಡೇಟ್ ಕೊಡುವುದಾಗಿ ತಿಳಿಸಿದ್ದು, ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಸಲುವಾಗಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ನಿರೀಕ್ಷೆ ಇದೆ.


Click it and Unblock the Notifications











