ಕೆಂಪೇಗೌಡರ ಬಯೋಪಿಕ್‌ನಲ್ಲಿ ವಸಿಷ್ಠ, ಆಶಿಕಾ, ಶ್ರೀನಗರ ಕಿಟ್ಟಿ; ಹೀರೊ ಆಗಿ ಉಪೇಂದ್ರ?
ನಾಡಪ್ರಭು ಕೆಂಪೇಗೌಡರ ಜೀವನಾಧರಿತ ಚಿತ್ರಕ್ಕಾಗಿ ಕನ್ನಡ ಚಿತ್ರರಂಗದಲ್ಲಿ ತಯಾರಿ ನಡೀತಿದೆ. ಈ ಹಿಂದೆ ನಾಗಾಭರಣ ಈ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಸಂಗೀತ ನಿರ್ದೇಶಕ, ನಿರ್ಮಾಪಕ ಕಿರಣ್ ತೋಟಂಬೈಲ್ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ಘೋಷಿಸಿ ಅಚ್ಚರಿ ಮೂಡಿಸಿದ್ದರು.
ನಾಗಾಭರಣ ಮತ್ತವರ ತಂಡ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ಕಿರಣ್ ತೋಟಂಬೈಲ್ ನಮ್ಮದು ಹಾಲಿವುಡ್ ಸಿನಿಮಾ, ಇಂಗ್ಲೆಂಡ್‌ನಲ್ಲಿ ಸಿನಿಮಾ ರಿಜಿಸ್ಟರ್ ಮಾಡಿಸಿದ್ದೇವೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ನಮ್ಮ ಸಿನಿಮಾ ಬರುತ್ತದೆ ಎಂದು ಹೇಳಿದ್ದರು. ದಿನೇಶ್ ಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಜೂನ್ 27ಕ್ಕೆ ನಾಡಪ್ರಭುಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ಆರಂಭಿಸಲು ಸಿದ್ಧತೆ ನಡೀತಿದೆ. ಅದಕ್ಕಾಗಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇನ್ನು ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಚಿತ್ರಕ್ಕೆ ಹೀರೊ ಯಾರಾಗುತ್ತಾರೆ ಎನ್ನುವುದನ್ನು ಪಕ್ಕಕ್ಕಿಟ್ಟರೆ , ಶ್ರೀನಗರ ಕಿಟ್ಟಿ, ಭಾರತೀ ವಿಷ್ಣುವರ್ಧನ್ ಹಾಗೂ ವಸಿಷ್ಠ ಸಿಂಹ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.
ಕೆಂಪೇಗೌಡರ ಪಾತ್ರದಲ್ಲಿ ನಟಿಸಲು ಸ್ಟಾರ್ ನಟರನ್ನು ಚಿತ್ರತಂಡ ಸಂಪರ್ಕಿಸಿದೆ. ಅದರಲ್ಲಿ ಮುಖ್ಯವಾಗಿ ರಿಯಲ್ ಸ್ಟಾರ್ ಉಪೇಂದ್ರ ಹೆಸರು ಕೇಳಿಬರ್ತಿದೆ. ಈ ಬಗ್ಗೆ ನಿರ್ಮಾಪಕ ಕಿರಣ್ ತೋಟಂಬೈಲ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಲೀಡ್ ರೋಲ್‌ಗಾಗಿ ನಾನು ಸ್ಟಾರ್ ನಟರ ಜೊತೆ ಚರ್ಚೆ ನಡೆಸುತ್ತಿದ್ದೇವೆ ಆದಷ್ಟು ಬೇಗ ಎಲ್ಲಾ ಫೈನಲ್ ಆಗಲಿದೆ ಎಂದಿದ್ದಾರೆ.

"ಜೂನ್ 27ಕ್ಕೆ ಸಿನಿಮಾ ಮುಹೂರ್ತ. ಆ ವೇಳೆ ನಾಯಕ ಯಾರು ಎನ್ನುವುದು ಖಚಿತವಾಗಲಿದೆ. ನಾಲ್ಕೈದು ಜನ ಸ್ಟಾರ್ ನಟರನ್ನು ಅಪ್ರೋಚ್ ಮಾಡಿದ್ದೀವಿ. ಎಲ್ಲರೂ ನಟಿಸೋಕೆ ಆಸಕ್ತಿ ತೋರಿಸಿದ್ದಾರೆ. ಆದರೆ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಡೇಟ್ಸ್ ಹೊಂದಾಣಿಕೆ ಆಗುತ್ತಿಲ್ಲ ಎನ್ನುತ್ತಿದ್ದಾರೆ. ನಾವು ಮುಂದಿನ ವರ್ಷ ಜೂನ್ 27ಕ್ಕೆ ಸಿನಿಮಾ ರಿಲೀಸ್ ಮಾಡಲು ತೀರ್ಮಾನಿಸಿದ್ದೇವೆ. ಅಷ್ಟರಲ್ಲಿ ಸಿನಿಮಾ ನಿರ್ಮಾಣವಾಗಬೇಕಿದೆ. ಹಾಗಾಗಿ ಸ್ಟಾರ್ ನಟರ ದೊಡ್ಡ ಕಾಲ್‌ಶೀಟ್ ಬೇಕಾಗಿದೆ" ಎಂದಿದ್ದಾರೆ.
"ನಟ ಉಪೇಂದ್ರ ಅವರು ಕೂಡ ಕೆಂಪೇಗೌಡರ ಪಾತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. ಇತ್ತೀಚೆಗೆ 'ಯುಐ' ಸಿನಿಮಾ ಕೆಲಸಕ್ಕಾಗಿ ವಿದೇಶಕ್ಕೆ ಹೋಗಿದ್ದರು. ಬಳಿಕ ಅರ್ಜುನ್ ಜನ್ಯಾ ಚಿತ್ರಕ್ಕಾಗಿ ಹೊರರಾಜ್ಯಕ್ಕೆ ಹೋಗಿದ್ದಾರೆ. ಅಲ್ಲಿಂದ ಬಂದ ಮೇಲೆ ಕೆಂಪೇಗೌಡರ ಬಯೋಪಿಕ್ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ. ನೋಡಬೇಕು, ಅವರು ಒಪ್ಪಿದರೆ ಸರಿ. ಒಟ್ನಲ್ಲಿ ಸ್ಟಾರ್ ನಟರೇ ನಮ್ಮ ಸಿನಿಮಾ ನಾಯಕ" ಎಂದು ತಿಳಿಸಿದ್ದಾರೆ.
'The Pioneer of Bangalore' ಎಂದು ಇಂಗ್ಲೀಷ್ ವರ್ಷನ್‌ಗೆ ಟೈಟಲ್ ಫಿಕ್ಸ್ ಮಾಡಲಾಗಿದೆ. ವಸಿಷ್ಠ ಸಿಂಹ ಖಳನಾಯಕನಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ನಾಯಕಿಯ ಪಾತ್ರಕ್ಕೆ ಆಶಿಕಾ ರಂಗನಾಥ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹಾಲಿವುಡ್ ತಂತ್ರಜ್ಞರು ಕೂಡ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ.
ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಕೂಡ ಕೆಂಪೇಗೌಡರ ಜೀವನಾಧರಿತ ಚಿತ್ರದಲ್ಲಿ ನಟಿಸೋಕೆ ಉತ್ಸುಕರಾಗಿದ್ದಾರೆ ಎಂದು ನಿರ್ಮಾಪಕರು ಹೇಳಿದ್ದಾರೆ. ಇನ್ನು ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಕಿರಣ್ ತೋಟಂಬೈಲ್ ಸಂಗೀತ ಸಂಯೋಜನೆ ಕೂಡ ಮಾಡಲಿದ್ದಾರೆ. ಧನಂಜಯ್ ಹೀರೊ ಆಗಿ ನಾಗಾಭರಣ ಕೆಂಪೇಗೌಡರ ಬಯೋಪಿಕ್ ಪ್ಲ್ಯಾನ್ ಮಾಡುತ್ತಿದ್ದಾರೆ.


Click it and Unblock the Notifications











