ಹಳೆ ಚಿತ್ರಗಳ ವಾರ್ಷಿಕೋತ್ಸವ: ದರ್ಶನ್, ಸುದೀಪ್ ಫ್ಯಾನ್ಸ್‌ಗೆ ಹರ್ಷ; ಪ್ರಭಾಸ್ ಫ್ಯಾನ್ಸ್‌ಗೆ ಬೇಸರದ ದಿನ!
ಹೇಗೆ ಹುಟ್ಟುಹಬ್ಬ, ವಾರ್ಷಿಕೋತ್ಸವಗಳನ್ನು ಆಚರಿಸಿಕೊಂಡು ಜೀವನದ ಸಂತಸದ ಘಳಿಗೆಗಳನ್ನು ಮೆಲುಕು ಹಾಕಿ ಸಂಭ್ರಮಿಸುತ್ತೇವೋ ಅದೇ ರೀತಿ ಸಿನಿಮಾಗಳಿಗೂ ಸಹ ವಾರ್ಷಿಕೋತ್ಸವಗಳನ್ನು ಆಚರಿಸಲಾಗುತ್ತದೆ. ಹೌದು, ಸಿನಿಮಾ ತೆರೆಕಂಡು ಇಷ್ಟು ವರ್ಷಗಳಾಯಿತು ಎಂದು ಆ ಚಿತ್ರಗಳು ಬಿಡುಗಡೆಗೊಂಡ ದಿನಾಂಕದಂದು ಸಂಭ್ರಮಿಸಲಾಗುತ್ತದೆ.
ಅದರಲ್ಲಿಯೂ ಸ್ಟಾರ್ ನಟರ ಚಿತ್ರಗಳ ವಾರ್ಷಿಕೋತ್ಸವವನ್ನು ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿಯೇ ಆಚರಿಸುತ್ತಾರೆ. ಆ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದರೆ ಬ್ಲಾಕ್‌ಬಸ್ಟರ್ ಪದದ ಮುಂದೆ ಆ ಚಿತ್ರದ ಹೆಸರನ್ನು ಸೇರಿಸಿ ಹ್ಯಾಷ್ ಟ್ಯಾಗ್ ಮಾಡಿ ಟ್ವಿಟರ್ ವೇದಿಕೆಯಲ್ಲಿ ಟ್ರೆಂಡ್ ಮಾಡಿ ವಾರ್ಷಿಕೋತ್ಸವವನ್ನು ಆಚರಿಸುತ್ತಾರೆ.

ಅದೇ ರೀತಿ ಇಂದು ( ಮಾರ್ಚ್ 11 ) ಸೌತ್ ಇಂಡಸ್ಟ್ರಿಗಳ ಮೂವರು ಸ್ಟಾರ್ ನಟರ ಚಿತ್ರಗಳು ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿವೆ. ಹೌದು, 2011ರ ಮಾರ್ಚ್ 11ರಂದು ತೆರೆಕಂಡಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರ 12 ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರೆ, 2021ರ ಮಾರ್ಚ್ 11ರಂದು ಬಿಡುಗಡೆಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅತ್ತ ಕಳೆದ ವರ್ಷದ ಮಾರ್ಚ್ 11ರಂದು ಬಿಡುಗಡೆಯಾಗಿದ್ದ ತೆಲುಗು ನಟ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಚಿತ್ರ ಮೊದಲ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ.
ಸುದೀಪ್ ನಟನೆಯ ಕೆಂಪೇಗೌಡ ಬ್ಲಾಕ್‌ಬಸ್ಟರ್ ಹಾಗೂ ದರ್ಶನ್ ನಟನೆಯ ರಾಬರ್ಟ್ ಸಹ ಬ್ಲಾಕ್‌ಬಸ್ಟರ್ ಹಿಟ್ ಆದ ಕಾರಣ ಈ ಚಿತ್ರಗಳನ್ನು ಬ್ಲಾಕ್‌ಬಸ್ಟರ್ ಟ್ಯಾಗ್ ಬಳಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಅತ್ತ ಪ್ರಭಾಸ್ ಅಭಿಮಾನಿಗಳು ರಾಧೆ ಶ್ಯಾಮ್ ಹೀನಾಯವಾಗಿ ಸೋತ ಕಾರಣ ವಾರ್ಷಿಕೋತ್ಸವದ ಪೋಸ್ಟ್ ಹಂಚಿಕೊಳ್ಳಲು ಹಿಂದೇಟು ಹಾಕ್ತಿದ್ದಾರೆ.

ಆದರೆ ಟ್ರೋಲರ್ಸ್ ಮಾತ್ರ ರಾಧೆ ಶ್ಯಾಮ್ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಖುಷಿಯಿಂದ ಅಲ್ಲ, ಕಾಲೆಳೆಯುವ ಮೂಲಕ. ಏಕೆಂದರೆ ಚಿತ್ರ ಬಿಡುಗಡೆಗೂ ಮುನ್ನ ಹುಟ್ಟುಹಾಕಿದ್ದ ಬೃಹತ್ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿ ಮಕಾಡೆ ಮಲಗಿತ್ತು. 350 ಕೋಟಿ ರೂಪಾಯಿಗಳ ಬಿಗ್ ಬಜೆಟ್ ನಲ್ಲಿ ತಯಾರಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 210 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸಿತ್ತು. ಇಷ್ಟರ ಮಟ್ಟಿಗೆ ಚಿತ್ರ ಸೋತು ಸುಣ್ಣವಾಗಿತ್ತು. ಬಾಹುಬಲಿ ಸರಣಿ ಗೆಲುವಿನ ಬಳಿಕ ಪ್ರಭಾಸ್ ಸೂಪರ್ ಸಕ್ಸಸ್ ಕಾಣಲಿದ್ದಾರೆ ಎಂಬ ಊಹೆ ಸಾಹೊ ಬಳಿಕ ಈ ಚಿತ್ರದಲ್ಲಿಯೂ ಹುಸಿಯಾಯಿತು.
ಇನ್ನು ಸುದೀಪ್ ಅಭಿಮಾನಿಗಳು ಕೆಂಪೇಗೌಡ ಚಿತ್ರ ಮಾಡಿದ ಸಾಧನೆಗಳು ಹಾಗೂ ದಾಖಲೆಗಳ ಬಗ್ಗೆ ಟ್ವೀಟ್ ಮಾಡಿ ಸಂಭ್ರಮಿಸುತ್ತಿದ್ದರೆ, ದರ್ಶನ್ ಅಭಿಮಾನಿಗಳು ರಾಬರ್ಟ್ ಚಿತ್ರ ಮಾಡಿದ ದಾಖಲೆ ಹಾಗೂ ಸಾಧನೆಗಳ ಬಗ್ಗೆ ಟ್ವೀಟ್ ಮಾಡಿ ವಾರ್ಷಿಕೋತ್ಸವ ಆಚರಿಸುತ್ತಿದ್ದಾರೆ. ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರ 4 ಕೋಟಿ ವೆಚ್ಚದಲ್ಲಿ ತಯಾರಾಗಿ 15 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ದರ್ಶನ್ ನಟನೆಯ ರಾಬರ್ಟ್ 60 ಕೋಟಿ ಗಳಿಕೆ ಮಾಡಿತ್ತು. ರಾಬರ್ಟ್ ಚಿತ್ರದ ಸ್ಯಾಟಲೈಟ್, ಆಡಿಯೊ ಹಾಗೂ ಡಿಜಿಟಲ್ ಹಕ್ಕುಗಳನ್ನು ಸೇರಿಸಿದರೆ ಚಿತ್ರ ನೂರು ಕೋಟಿ ಗಳಿಸಿದೆ. t


Click it and Unblock the Notifications











