ಮತ್ತೊಂದು ಕಥೆ ಕೇಳಿ ಮೆಚ್ಚಿದ ಧ್ರುವ ಸರ್ಜಾ, ನಿರ್ದೇಶಕರು ಯಾರು?
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ದಸರಾ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ 'ಕೆಡಿ' ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ನಟಿಸ್ತಿದ್ದಾರೆ. ಮುಂದೆ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.
ಕೇವಲ ನಾಲ್ಕು ಸಿನಿಮಾಗಳಿಂದ ನಟ ಧ್ರುವ ಸರ್ಜಾ ಬಹಳ ಕ್ರೇಜ್ ಸಂಪಾದಿಸಿದ್ದಾರೆ. ಅವರ ಸಿನಿಮಾಗಳನ್ನು ನೋಡಲು ಪ್ರೇಕ್ಷಕರ ಕಾದು ಕೂರುವಂತಾಗಿದೆ. ಅಳೆದು ತೂಗಿ ಕಥೆಗಳನ್ನು ಆಯ್ಕೆ ಮಾಡಿಕೊಂಡು ಧ್ರುವ ಸರ್ಜಾ ತನು ಮನ ಅರ್ಪಿಸಿ ಕೆಲಸ ಮಾಡುತ್ತಾರೆ. ಪಾತ್ರಕ್ಕಾಗಿ ದೇಹ ದಂಡಿಸಿ ತಯಾರಾಗುತ್ತಾರೆ. ಸದ್ಯ ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಸುದ್ದಿ ಬಂದಿದೆ.

ಇದೇ ವರ್ಷ 'ಕೆರೆಬೇಟೆ' ಸಿನಿಮಾ ತೆರೆಗೆ ಬಂದು ಪ್ರೇಕ್ಷಕರ ಮನಗೆದ್ದಿತ್ತು. ರಾಜ್‌ಗುರು ನಿರ್ದೇಶನದ ಮಲೆನಾಡ ಸೊಗಡಿನ ಈ ಚಿತ್ರದಲ್ಲಿ ಗೌರಿಶಂಕರ್ ಹೀರೊ ಆಗಿ ನಟಿಸಿದ್ದರು. ಮಲೆನಾಡ ಮೂಲದ ನಿರ್ದೇಶಕರು ಊರಿನ ಕಡೆಯ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದಿದ್ದರು. ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಚಿತ್ರ ಪ್ರದರ್ಶನಗೊಂಡಿತ್ತು.
ಸದ್ಯ ಧ್ರುವ ಸರ್ಜಾಗೆ 'ಕೆರೆಬೇಟೆ' ಚಿತ್ರದ ನಿರ್ದೇಶಕ ರಾಜ್‌ಗುರು ಕಥೆ ಹೇಳಿದ್ದಾರೆ. ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರುವ ಸಾಧ್ಯತೆಯಿದೆ. ರಾಜ್‌ಗುರು ಹೇಳಿರುವ ಕಥೆ ಆಕ್ಷನ್ ಪ್ರಿನ್ಸ್‌ಗೆ ಇಷ್ಟವಾಗಿದೆಯಂತೆ. ನಿರ್ಮಾಪಕರು ಕೂಡ ಸಿದ್ಧರಿದ್ದು ಸಿನಿಮಾ ಶುರುವಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ರಾಜ್‌ಗುರು ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
"ನಾನು ಧ್ರುವ ಸರ್ಜಾ ಅವರಿಗೆ ಕಥೆ ಹೇಳಿರುವುದು ನಿಜ. ಅವರಿಗೆ ಇಷ್ಟವಾಗಿದೆ. ಆದರೆ ಸಿನಿಮಾ ಮಾಡುವ ಬಗ್ಗೆ ಯಾವುದೇ ಚರ್ಚೆ ಫೈನಲ್ ಆಗಿಲ್ಲ. ಇನ್ನು ಕಥೆ ಮಾತ್ರ ಹೇಳಿ ಬಂದಿದ್ದೀನಿ. ಮುಂದೆ ನೋಡಬೇಕು. 'ಕೆರೆಬೇಟೆ' ಬಳಿಕ ನಾನು ಇದೇ ಸಿನಿಮಾ ಮಾಡಬೇಕಿದೆ" ಎಂದು ರಾಜ್‌ಗುರು ಮಾಹಿತಿ ನೀಡಿದ್ದಾರೆ.
ಮಲೆನಾಡಿನಲ್ಲಿ ನಾವು ನೋಡಿ ಬೆಳೆದ ವಿಚಾರಗಳನ್ನೇ 'ಕೆರೆಬೇಟೆ' ಚಿತ್ರದಲ್ಲಿ ರಾಜ್‌ಗುರು ಕಟ್ಟಿಕೊಟ್ಟಿದ್ದರು. "ತಮ್ಮ ಮುಂದಿನ ಸಿನಿಮಾ ಕತೆಯಲ್ಲಿ ಕೂಡ ಅಂತದ್ಧೇ ವಿಚಾರಗಳಿವೆ. ಆದರೆ ಇದು ಸಂಪೂರ್ಣ ಹಳ್ಳಿ ಕಥೆ ಅಲ್ಲ, ತಾಲೂಕಿನ ಭಾಗದಲ್ಲಿ ನಡೆಯುವಂತಹ ಕಥೆ. ನಮ್ಮ ಮಣ್ಣಿನ ಕಥೆ. ಪ್ಯಾನ್ ಇಂಡಿಯಾ ಮಟ್ಟಿಗೆ ಎಲ್ಲರಿಗೂ ಕನೆಕ್ಟ್ ಆಗುವ ಕಥೆ" ಎಂದು ತಿಳಿಸಿದ್ದಾರೆ.
ಧ್ರುವ ಸರ್ ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಕಾದು ನೋಡಬೇಕು, ಮುಂದೆ ಏನಾಗುತ್ತದೆ ಎಂದು ರಾಜ್‌ಗುರು ವಿವರಿಸಿದ್ದಾರೆ. ಒಟ್ಟಾರೆ ಧ್ರುವ ಜೊತೆ ಸಿನಿಮಾ ಮಾಡಲು ಬಹಳ ಉತ್ಸುಕರಾಗಿರುವುದಾಗಿ ಅವರು ತಿಳಿಸಿದ್ದಾರೆ. ಅಂದಹಾಗೆ 'ಕೆರೆಬೇಟೆ' ಚಿತ್ರದ ನಾಯಕ ಗೌರಿ ಶಂಕರ್ ಹಾಗೂ ಧ್ರುವ ಸರ್ಜಾ ಆತ್ಮೀಯ ಸ್ನೇಹಿತರು.
'ಕೆರೆಬೇಟೆ' ಚಿತ್ರ ನೋಡಿ ಧ್ರುವ ಸರ್ಜಾ ಮೆಚ್ಚಿದ್ದರು. ನಿರ್ದೇಶಕ ಪವನ್ ಒಡೆಯರ್ ಬಳಿ ಸಹಾಯಕರಾಗಿ ರಾಜ್‌ಗುರು ಕೆಲಸ ಮಾಡಿದ್ದರು. 'ನಟಸಾರ್ವಭೌಮ' ಹಾಗೂ 'ಗೂಗ್ಲಿ' ಚಿತ್ರಗಳಿಗೆ ದುಡಿದಿದ್ದರು. ಕೊನೆಗೆ 'ಕೆರೆಬೇಟೆ' ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡಿದಿದ್ದರು. ಇದೀಗ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ.
ದೊಡ್ಡ ಸಿನಿಮಾ ಮಾಡಿದರೆ ಮಾತ್ರ ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎನ್ನುವಂತಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಗಟ್ಟಿ ಕತೆಗಳು ಬೇಕು.ದೊಡ್ಡ ಎಮೋಷನ್, ಡ್ರಾಮಾ ಇರಬೇಕು. ಮುಖ್ಯವಾಗಿ ಎಲ್ಲರಿಗೂ ಹತ್ತಿರವಾಗುವಂತಹ ನಮ್ಮ ನಡುವಿನ ಕಥೆಗಳೇ ಇದ್ದರೆ ಉತ್ತಮ. ಅಂತದ್ದೇ ಒಂದು ವಿಭಿನ್ನ ಕತೆ ಹೇಳಲು ರಾಜ್‌ಗುರು ಮುಂದಾಗಿದ್ದಾರೆ.


Click it and Unblock the Notifications











