For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್ ಚೇಂಬರ್ ಕಡೆಯಿಂದ ಸಿ.ಎಂ ಎಚ್.ಡಿ.ಕುಮಾರಸ್ವಾಮಿಗೆ ಸನ್ಮಾನ

  By Harshitha
  |

  ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಡೆಯಿಂದ ಇಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

  ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ನೇತೃತ್ವದಲ್ಲಿ ಸನ್ಮಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು, ಕಲಾವಿದರು ಹಾಗೂ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸಾಕ್ಷಿಯಾದರು.

  ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಎಚ್.ಡಿ.ಕುಮಾರಸ್ವಾಮಿ ನಡೆದು ಬಂದ ದಾರಿಯನ್ನು ಮೆಲುಕು ಹಾಕುವ ವಿಡಿಯೋ ಪ್ರದರ್ಶನ ಮಾಡಿ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

  ಈ ವೇಳೆ ಮಾತನಾಡಿದ ಸಿ.ಎಂ ಕುಮಾರಸ್ವಾಮಿ, ''ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನನ್ನನ್ನು ಸನ್ಮಾನಿಸುತ್ತಿದೆ. ಡಾ.ರಾಜ್ ಕುಮಾರ್, ಡಾ.ವಿಷ್ಟುವರ್ಧನ್, ಅಂಬರೀಶ್ ಕನ್ನಡ ಚಿತ್ರರಂಗದ ಶಕ್ತಿ. ನಾನು ಚಿಕ್ಕಂದಿನಿಂದಲೂ ಅಂಬರೀಶ್ ಅಭಿಮಾನಿ. ನಾನು ಸರೋಜ ದೇವಿಯವರ ಸಾಕಷ್ಟು ಸಿನಿಮಾ ನೋಡಿದ್ದೇನೆ. ಎಸ್.ನಾರಾಯಣ್ ನನ್ನ ಬಗ್ಗೆ ಕಿರುಚಿತ್ರ ತೋರಿಸಿದ್ದಾರೆ. ಸ್ವಲ್ಪ ಹೊಗಳಿಕೆ ಜಾಸ್ತಿ ಆಯ್ತು, ಆದ್ರೂ ನನಗೆ ಖುಷಿ ಅಯ್ತು'' ಎಂದರು.

  ''ತಂದೆ ತಾಯಿ ಹೇಳಿದ ಮಾತಿನ ಜೊತೆಗೆ ಡಾ.ರಾಜ್ ಕುಮಾರ್ ಸಿನಿಮಾಗಳು ನನ್ನ ಬದಲಾವಣೆಗೆ ಕಾರಣ ಆಗಿವೆ. ಆಗಿನ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ಸಾಕಷ್ಟು ಬದಲಾವಣೆ ಇದೆ. ಅವತ್ತಿನ ಶ್ರದ್ಧೆ ಬದ್ದತೆ ಈಗಿನ ಕಲಾವಿದರಿಗೆ ಸ್ವಲ್ಪ ಪರಿಚಯ ಇಲ್ಲ. ನಾನು ನಿಮ್ಮ ಕುಲದವನೇ... ಯಾಕಂದ್ರೆ, ವಿತರಕನಾಗಿ, ಪ್ರದರ್ಶಕನಾಗಿ, ನಿರ್ಮಾಪಕನಾಗಿ ಚಿತ್ರರಂಗವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಕನ್ನಡ ಚಿತ್ರರಂಗದ ಕಷ್ಟದ ದಿನಗಳನ್ನು ನೋಡಿದ್ದೇನೆ. ಜನತಾ ಚಿತ್ರಮಂದಿರ ಅನುಷ್ಠಾನಕ್ಕೆ ತರಲು ಆಗಿಲ್ಲ. ಆದ್ರೆ ಚಿತ್ರರಂಗಕ್ಕೋಸ್ಕರ ದುಡಿಯಲು ನಾನು ರೆಡಿಯಾಗಿದ್ದೇದೆ. ನಿತ್ಯ ವಿಧಾನಸೌಧದಲ್ಲಿ 3 ರಿಂದ 4 ತನಕ ನಾನು ಫ್ರೀ ಮಾಡಿಕೊಂಡಿರುತ್ತೇನೆ. ನೀವು ಬಂದು ಚರ್ಚೆ ಮಾಡಿ. ಮೈಸೂರಿನ ಬದಲು ರಾಮನಗರದಲ್ಲಿ ದೊಡ್ಡ ಫಿಲ್ಮ್ ಸಿಟಿ ಮಾಡಬೇಕು ಅಂತ ಚಿಂತನೆ ಇದೆ. ಅದು ರಾಮೋಜಿ ರಾವ್ ಸಿಟಿ ಹಾಗೆ ಇರಬೇಕು. ಇದಕ್ಕಾಗಿ 500 ರಿಂದ 1000 ಎಕರೆ ಭೂಮಿ ನೀಡುತ್ತೇನೆ. ಇದನ್ನ ಉಪಯೋಗ ಮಾಡಿಕೊಳ್ಳಲು ನೀವೆಲ್ಲಾ ಕೂತು ಚರ್ಚೆ ಮಾಡಿ. ಇದರ ಮುಂದಾಳತ್ವವನ್ನ ಅಂಬರೀಶ್ ವಹಿಸಿಕೊಳ್ಳಬೇಕು'' ಅಂತ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

  ''ಚಿತ್ರರಂಗದ ಕೆಲವರಿಗೆ ಸೂರಿಲ್ಲ'' ಅಂತ ಸಚಿವೆ ಜಯಮಾಲಾ ಹೇಳಿದ್ದಕ್ಕೆ, ''ನಾನು ಜನಸಾಮಾನ್ಯರ ಜೊತೆ ನಿಮಗೂ ಮನೆ ನಿರ್ಮಾಣದ ಬಗ್ಗೆ ಚಿಂತನೆ ಮಾಡುತ್ತೇನೆ. ಆದ್ರೆ ಅದಕ್ಕೂ ಮೊದಲು ನಾನು ರೈತರ ಸಾಲ ಮನ್ನಾ ಮಾಡಬೇಕಿದೆ. ಇದನ್ನು ಹೇಗಾದರೂ ಮಾಡುತ್ತೇನೆ. ಚಿತ್ರರಂಗದ ಏಳಿಗೆಗೆ ನೀವೆಲ್ಲಾ ಸೇರಿ ತೀರ್ಮಾನ ಮಾಡಿ. ಬೇರೆ ಭಾಷೆಗೆ ಸರಿ ಸಮಾನವಾಗಿ ನಮ್ಮ ಚಿತ್ರರಂಗ ಕೂಡ ನಿಲ್ಲಬೇಕು'' ಎಂದರು ಎಚ್.ಡಿ.ಕುಮಾರಸ್ವಾಮಿ.

  English summary
  KFCC Feliciates Karnataka Chief Minister HD Kumaraswamy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X