'KGF-2' ಸಂಜಯ್ ದತ್ ಲುಕ್ ಸೋರಿಕೆ: ಹೇಗಿದ್ದಾನೆ ಅಧೀರ ನೋಡಿ
ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಕೆಜಿಎಫ್-2. ಮೊದಲ ಭಾಗದ ಮೂಲಕ ಸಂಚಲನ ಮೂಡಿಸಿದ್ದ ಕೆಜಿಎಫ್ ಈಗ ಪಾರ್ಟ್-2ಗಾಗಿ ಚಿತ್ರಪ್ರಿಯರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
Recommended Video
ಮೊದಲ ಭಾಗಕ್ಕಿಂತ ಎರಡನೇ ಭಾಗ ಮತ್ತಷ್ಟು ರೋಚಕವಾಗಿರಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ವಿಲನ್ ಆಗಿ ಬಾಲಿವುಡ್ ಮುನ್ನಾಬಾಯ್ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಅಧೀರನಾಗಿ ಕನ್ನಡಾಭಿಮಾನಿಗಳ ಮುಂದೆ ಬರುತ್ತಿರುವ ಸಂಜಯ್ ದತ್ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಚಿತ್ರದಲ್ಲಿ ದತ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಚಿತ್ರಪ್ರಿಯರಲ್ಲಿತ್ತು. ಆದರೀಗ ಸಂಜಯ್ ದತ್ ಅಧೀರ ಲುಕ್ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಓದಿ...

ಕುತೂಹಲ ಮೂಡಿಸಿದ ಅಧೀರ
ಕೆಜಿಎಫ್-2 ನಲ್ಲಿ ಕುತೂಹಲ ಮೂಡಿಸಿದ ಪಾತ್ರಗಳಲ್ಲಿ ಅಧೀರ ಪಾತ್ರ ಕೂಡ ಒಂದು. ಖಡಕ್ ವಿಲನ್ ಆಗಿ ಯಶ್ ಮುಂದೆ ತೊಡೆತಟ್ಟಿನಿಂತಿರುವ ಸಂಜಯ್ ದತ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಮೊದಲು ಸಂಜಯ್ ದತ್ ಹೇಳಿದ ಹಾಗೆ "ಅಧೀರ ನೀವು ಅಂದುಕೊಂಡ ಹಾಗೆ ಭಯಂಕರವಾದ ವ್ಯಕ್ತಿ ಅಲ್ಲ, ಅತೀ ಭಯಂಕರ ವ್ಯಕ್ತಿ" ಎಂದಿದ್ದರು. ಹಾಗಾಗಿ ಹೇಗಿರಲಿದ್ದಾನೆ ಅಧೀರ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಅತೀ ಭಯಂಕರ ಅಧೀರ ಲುಕ್ ಹೀಗಿದೆ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಧೀರ ಲುಕ್ ವೈರಲ್ ಆಗಿದೆ. ಸಂಜಯ್ ದತ್ ಗೆಟಪ್ ನೋಡಿ ಇದು ಪಕ್ಕಾ ಕೆಜಿಎಫ್-2 ಸಿನಿಮಾದ ಲುಕ್ ಎಂದು ಹೇಳುತ್ತಿದ್ದಾರೆ. ಉದ್ದವಾದ ವಿಚಿತ್ರ ಕೂದಲು ಜೊತೆಗೆ ತಲೆಯಲ್ಲಿ ಟ್ಯಾಟೂ, ಹಣ್ಣಾದ ಉದ್ದನೆಯ ದಾಡಿ ಬಿಟ್ಟಿರುವ ಅಧೀರನ ಭಯಾನಕ ನೋಟ ಎದುರಾಳಿಯನ್ನು ಬೆಚ್ಚಿಬೀಳಿಸುವಂತಿದೆ. ಈ ಫೋಟೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ.

ನಿಜಕ್ಕೂ ಅಧೀರನಾ ಎನ್ನುವ ಅನುಮಾನವಿದೆ
ಈ ಫೋಟೋ ಈಗಾಗಲೆ ವೈರಲ್ ಆಗಿದೆ. ಅನೇಕರು ಇದು ಪಕ್ಕಾ ಕೆಜಿಎಫ್-2 ಚಿತ್ರದ ಅಧೀರ ಲುಕ್ ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನು ಅನುಮಾನ ಸಹ ವ್ಯಕ್ತವಾಗುತ್ತಿದೆ. ಸಿನಿಮಾದ ಯಾವುದೆ ಲುಕ್ ಅಥವಾ ಚಿತ್ರೀಕರಣದ ಫೋಟೋಗಳು ಹೊರಬರಬಾರದು ಎಂದು ಚಿತ್ರತಂಡ ಸಾಕಷ್ಟು ಎಚ್ಚರಿಕೆ ವಹಿಸಿದೆ. ಚಿತ್ರೀಕರಣ ಸಮಯದಲ್ಲಿ, ಅಥವಾ ಎಡಿಟಿಂಗ್ ಸಮಯದಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಸಹ ಚಿತ್ರದ ಪ್ರಮುಖ ಫೋಟೋ ಲೀಕ್ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ.

ಅಧೀರ ಪಾತ್ರದ ಬಗ್ಗೆ ಸಂಜಯ್ ದತ್ ಮಾತು
ಈ ಮೊದಲು ಸಂದರ್ಶವೊಂದರಲ್ಲಿ ಸಂಜಯ್ ದತ್ "ಅಗ್ನಿಪತ್ ಚಿತ್ರದ ನಂತರ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಉತ್ತಮ ವಿಲನ್ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈ ಸಮಯದಲ್ಲಿ ಕೆಜಿಎಫ್-2 ಸಿಕ್ಕಿತ್ತು. ಅಗ್ನಿಪತ್ ಚಿತ್ರದಲ್ಲಿನ ಪಾತ್ರಕ್ಕಿಂತನೂ ಅಧೀರನ ಪಾತ್ರ ಮತ್ತಷ್ಟು ಭಯಾನಕವಾಗಿರಲಿದೆ ಎನಿಸುತ್ತೆ" ಎಂದು ಅಧೀರ ಪಾತ್ರದ ಬಗ್ಗೆ ಹೇಳಿದ್ದರು.

ಅಕ್ಟೋಬರ್ 23ಕ್ಕೆ ಸಿನಿಮಾ ರಿಲೀಸ್
ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿರುವ ಕೆಜಿಎಫ್-2 ಸಿನಿಮಾ ಇದೆ ವರ್ಷ ಅಕ್ಟೋಬರ್ 23ಕ್ಕೆ ರಿಲೀಸ್ ಆಗುತ್ತಿದೆ. ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇನ್ನೂ 25 ದಿನಗಳ ಮಾತ್ರ ಚಿತ್ರೀಕರಣ ಬಾಕಿ ಇರುವ ಕಾರಣ, ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣ ಮಾಡಿ ಮುಗಿಸಿ ಅಂದುಕೊಂಡ ದಿನಕ್ಕೆ ಚಿತ್ರಮಂದಿರಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











